ಗಂಗೂಲಿ ನಾಯಕರಾಗುವವರೆಗೂ ಭಾರತ ಪಾಕಿಸ್ತಾನವನ್ನು ಸೋಲಿಸುತ್ತೆ ಎಂದು ತಿಳಿದಿರಲಿಲ್ಲ: ಶೊಯೆಬ್ ಅಖ್ತರ್

ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗುವವರೆಗೂ ಆ ತಂಡ ಪಾಕಿಸ್ತಾನವನ್ನು ಸೋಲಿಸುತ್ತದೆ ಎಂದು ತಿಳಿದಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಿಸಿಸಿಐ ಅಧ್ಯಕ್ಷರಾಗಿ ಆಯ್ತೆಯಾದ ದಾದಾಗೆ ತುಂಬು ಹೃದಯದ ಶುಭ ಕೋರಿದ ಪಾಕಿಸ್ತಾನದ ಮಾಜಿ ವೇಗಿ

ಇಸ್ಲಾಮಾಬಾದ್: ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗುವವರೆಗೂ ಆ ತಂಡ ಪಾಕಿಸ್ತಾನವನ್ನು ಸೋಲಿಸುತ್ತದೆ ಎಂದು ತಿಳಿದಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಹೇಳಿದ್ದಾರೆ.

ಬಿಸಿಸಿಐನ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಆಯ್ಕೆಯಾದ ಬಳಿಕ ಅವರಿಗೆ ಅಭಿನಂದನೆ ಕೋರಿರುವ ಶೊಯೆಬ್ ಅಖ್ತರ್ ಅವರ ಕ್ರಿಕೆಟ್ ಜೀವನವನ್ನು ಹಾಡಿ ಹೊಗಳಿದ್ದಾರೆ. ಈ ಕುರಿತಂತೆ ತಮ್ಮ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿರುವ ಅಖ್ತರ್, ಭಾರತೀಯ ಕ್ರಿಕೆಟ್ ನ ದೃಷ್ಟಿಕೋನವನ್ನು ಬದಲಿಸಿದ್ದೇ ಗಂಗೂಲಿ. ಗಂಗೂಲಿ ಭಾರತ ತಂಡದ ನಾಯಕರಾಗುವ ವರೆಗೂ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸುತ್ತದೆ ಎಂದು ನಾನು ಭಾವಿಸಿರಲಿಲ್ಲ. ಆದರೆ ಅವರ ಯಂಗ್ ಇಂಡಿಯಾ ಬೆಳೆದ ಪರಿ ನಿಜಕ್ಕೂ ಅಚ್ಚರಿಯಾಗುತ್ತದೆ. ಉದಯೋನ್ಮುಖ ಆಟಗಾರರಿಗೆ ಗಂಗೂಲಿ ನೀಡುವ ಬೆಂಬಲ ನಿಜಕ್ಕೂ ಶ್ಲಾಘನೀಯ ಎಂದು ಅಖ್ತರ್ ಹೇಳಿದ್ದಾರೆ.

ಗಂಗೂಲಿ ಬಿಸಿಸಿಐ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬಂಗಾಳ ಹುಲಿ ಗಂಗೂಲಿ ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆಗೆ ಕಾರಣರಾದವರು. ಭಾರತೀಯ ಕ್ರಿಕೆಟ್‌ನಲ್ಲಿ ಬದಲಾವಣೆ ತಂದವರು ಸೌರವ್ ಗಂಗೂಲಿ. 1997-98ಕ್ಕೂ ಮೊದಲು ನಾನು ಭಾರತ ತಂಡ ಪಾಕಿಸ್ತಾನವನ್ನು ಸೋಲಿಸುತ್ತೆ ಎಂದು ಭಾವಿಸಿರಲಿಲ್ಲ. ತಂಡದ ನಾಯಕತ್ವವನ್ನು ಗಂಗೂಲಿ ವಹಿಸಿಕೊಳ್ಳುವವರೆಗೂ ಭಾರತ, ಪಾಕಿಸ್ತಾನವನ್ನು ಸೋಲಿಸೀತು ಎಂದು ನಾನು ಅಂದುಕೊಂಡಿರಲೇ ಇಲ್ಲ. 

ಸೌರವ್ ಗಂಗೂಲಿ ಭಾರತೀಯ ಆಟಗಾರರ ಮನಸ್ಥಿತಿಯನ್ನೇ ಬದಲಿಸಿದವರು. ಅವರು ಟೀಮ್ ಇಂಡಿಯಾ ಪರ ಆಡುವ ಪ್ರತಿಭಾನ್ವಿತ ಆಟಗಾರರನ್ನು ಆರಿಸುವತ್ತ ಚಿತ್ತ ಹೊಂದಿದ್ದಾರೆ. ದಾದ ಒಬ್ಬರು ಶ್ರೇಷ್ಠ ನಾಯಕ. ಪ್ರತಿಭೆಗಳನ್ನು ಆರಿಸುವ ಬಗೆಯಲ್ಲಿ ಆತನೊಬ್ಬ ಪ್ರಮಾಣಿಕ ವ್ಯಕ್ತಿ. ಆತನಲ್ಲಿ ಅಧ್ಬುತ ಕ್ರಿಕೆಟ್ ಜ್ಞಾನವಿದೆ. ಅವರ ಮುಂದಾಳತ್ವದಲ್ಲಿ ಭಾರತೀಯ ಕ್ರಿಕೆಟ್ ಮತ್ತಷ್ಟು ಅಭಿವೃದ್ಧಿಯಾಗುವ ವಿಶ್ವಾಸವಿದೆ. ಅವರಿಗೆ ಶುಭವಾಗಲಿ ಎಂದು ಅಖ್ತರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com