ವಿಶಿಷ್ಠ ದಾಖಲೆಗಳ ಬರೆದ ಇಂಡೋ-ನ್ಯೂಜಿಲೆಂಡ್ ಟಿ20 ಕ್ರಿಕೆಟ್ ಸರಣಿ

ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೊಹ್ಲಿ ಪಡೆ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದು, ಒಂದೇ ಒಂದು ಸರಣಿ ಹಲವು ವಿಶಿಷ್ಠ ದಾಖಲೆಗಳಿಗೆ ಸಾಕ್ಷಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೌಂಟ್ ಮಾಂಗನುಯಿ: ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೊಹ್ಲಿ ಪಡೆ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದು, ಒಂದೇ ಒಂದು ಸರಣಿ ಹಲವು ವಿಶಿಷ್ಠ ದಾಖಲೆಗಳಿಗೆ ಸಾಕ್ಷಿಯಾಗಿದೆ.

ಹೌದು.. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಹಲವು ದಾಖಲೆಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.

ವಿದೇಶ ಪ್ರವಾಸದಲ್ಲಿ ಮೊದಲ ಬಾರಿಗೆ ಐದು ಪಂದ್ಯಗಳ ಸರಣಿ ಕ್ಲೀನ್ ಸ್ವೀಪ್!
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಗೆದ್ದು ಭಾರತ ತಂಡ ಮೊದಲ ಬಾರಿಗೆ ವಿದೇಶದಲ್ಲಿ ಐದು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. 

ಮೊದಲ ಬಾರಿಗೆ ಎರಡು ಸೂಪರ್ ಓವರ್‌ಗಳು!
ಯಾವುದೇ ಸ್ವರೂಪದ ಕ್ರಿಕೆಟ್ ಸರಣಿಯಲ್ಲಿ ಸತತ ಎರಡು ಪಂದ್ಯಗಳು ಸೂಪರ್ ಓವರ್ ಕಂಡಿರುವುದು ಇದೇ ಮೊದಲು. ಅಲ್ಲದೆ ಟೀಮ್ ಇಂಡಿಯಾ ಈ ಎರಡೂ ಪಂದ್ಯಗಳನ್ನು ಗೆದ್ದಿದೆ ಅಂತೆಯೇ ಈ ದಾಖಲೆಯ ವಿಶೇಷತೆಯೆಂದರೆ ಎರಡೂ ಬಾರಿ ಭಾರತ ತಂಡ ಪಂದ್ಯವನ್ನು ಸೂಪರ್ ಓವರ್‌ನಲ್ಲಿ ನಿಗದಿಪಡಿಸಿದ ಗುರಿಯನ್ನು ಸಾಧಿಸಿತು.

ವಿರಾಟ್ ಕೊಹ್ಲಿ ದಾಖಲೆ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ಹೆಚ್ಚು ಟಿ 20 ಸರಣಿಯನ್ನು ಗೆದ್ದ ದಾಖಲೆ ನಿರ್ಮಿಸಿದ್ದಾರೆ. ಹಾಲಿ ನ್ಯೂಜಿಲೆಂಡ್ ಸರಣಿಯೂ ಸೇರಿದಂತೆ ವಿರಾಟ್‌ ಕೊಹ್ಲಿ ಒಟ್ಟು 10  ಟಿ20 ಸರಣಿಗಳನ್ನು ಗೆದ್ದಿದ್ದಾರೆ. ಆ ಮೂಲಕ ನಾಯಕನಾಗಿ ಅತೀ ಹೆಚ್ಚು ಟಿ20 ಸರಣಿ ಗೆದ್ದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ (9) ಅವರು 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿದೇಶದಲ್ಲಿ ವಿರಾಟ್ ಅವರ ಕ್ಲೀನ್ ಸ್ವೀಪ್
ಇನ್ನು ವಿರಾಟ್ ಕೊಹ್ಲಿ ಅವರ ಪಾಲಿಗೆ ವಿದೇಶದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಮೂರನೇ ಟಿ20 ಸರಣಿ ಇದಾಗಿದ್ದು, ಇದಕ್ಕೂ ಮೊದಲು ಅವರು 2019 ರಲ್ಲಿ ಅಮೆರಿಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಮತ್ತು 2016 ರಲ್ಲಿ ಆಸ್ಟ್ರೇಲಿಯಾದ ವಿರುದ್ಧದ ಟಿ20 ಸರಣಿಗಳನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದರು. 

ನ್ಯೂಜಿಲೆಂಡ್ ಪಾಲಿಗೆ ಕಳಪೆ ದಾಖಲೆ
ಇನ್ನು ಟಿ20 ಮಾದರಿಯಲ್ಲಿ ತವರಿನಲ್ಲೇ ಅತೀ ಹೆಚ್ಚು ಪಂದ್ಯಗಳನ್ನು ಸೋತ ಹಣೆ ಪಟ್ಟಿಯನ್ನು ನ್ಯೂಜಿಲೆಂಡ್ ಕಟ್ಟಿಕೊಂಡಿದೆ. ನಿನ್ನೆ ನಡೆದ ಪಂದ್ಯವೂ ಸೇರಿದಂತೆ ತವರಿನಲ್ಲಿ ನ್ಯೂಜಿಲೆಂಡ್ ತಂಡ ಒಟ್ಟು 23 ಪಂದ್ಯಗಳನ್ನು ಸೋತಿದೆ. ಕಿವೀಸ್ ತಂಡ ತವರಿನಲ್ಲಿ ಒಟ್ಟು 59 ಟಿ20 ಪಂದ್ಯಗಳನ್ನಾಡಿದೆ. ಬಳಿಕದ ಸ್ಥಾನದಲ್ಲಿ ಶ್ರೀಲಂಕಾ ಇದ್ದು, ಲಂಕಾ ತಂಡ ತವರಿನಲ್ಲಿ ಆಡಿದ 40 ಪಂದ್ಯಗಳ ಪೈಕಿ 23 ಪಂದ್ಯ ಸೋತಿದೆ. 4 ಮತ್ತು 5ನೇ ಸ್ಥಾನದಲ್ಲಿ ದಕ್ಷಿಣ ಆಪ್ರಿಕಾ (22 ಪಂದ್ಯ) ಮತ್ತು ಬಾಂಗ್ಲಾದೇಶ (22 ಪಂದ್ಯ) ತಂಡಗಳಿವೆ.

ದುಬೆ ಕಳಪೆ ಸಾಧನೆ
ನಿನ್ನೆ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡದ ಆಲ್‍ರೌಂಡರ್ ಶಿವಂ ದುಬೆ ಕೆಟ್ಟ ದಾಖಲೆಗೆ ಗುರಿಯಾಗಿದ್ದಾರೆ. ನ್ಯೂಜಿಲೆಂಡ್ ಇನ್ನಿಂಗ್ಸ್ ನ 10ನೇ ಓವರಿನಲ್ಲಿ ಬೌಲಿಂಗ್ ಮಾಡಿದ ಶಿವಂ ದುಬೆ ಕ್ರಮವಾಗಿ 6, 6, 4, 1, ನೋಬಾಲ್ + 4, 6 ಹಾಗೂ 6 ಸೇರಿ ಒಟ್ಟು 34 ರನ್ ನೀಡಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಶಿವಂ ದುಬೆ ಎರಡನೇ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಒಂದೇ ಓವರ್ ನಲ್ಲಿ ದುಬಾರಿ ರನ್ ನೀಡಿದ ಭಾರತದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಶಿವಂ ದುಬೆಗೂ ಮೊದಲು ಸ್ಟುವರ್ಟ್ ಬಿನ್ನಿ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 32 ರನ್ ನೀಡಿದ್ದರು. ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ನೀಡಿದ ವಿಶ್ವದ ಬೌಲರ್‍ಗಳ ಪಟ್ಟಿಯಲ್ಲಿ ಇಂಗ್ಲೆಂಡ್‍ನ ಸ್ಟುವರ್ಟ್ ಬ್ರಾಡ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು 2007ರಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ 36 ರನ್ ನೀಡಿದ್ದರು. ಅಂದು ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದರು. ಇದು ಈ ವರೆಗಿನ ಕಳಪೆ ಬೌಲಿಂಗ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com