ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ: ದಾಖಲೆ ಹೊಸ್ತಿಲಲ್ಲಿ ಭಾರತದ ಹಲವು ಆಟಗಾರರು, ಸಚಿನ್, ರಿಕ್ಕಿ ಪಾಂಟಿಂಗ್ ದಾಖಲೆ ಮುರಿಯುವತ್ತ ರನ್ ಮೆಷಿನ್ ಕೊಹ್ಲಿ ಚಿತ್ತ!

ನಾಳೆಯಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಮಹತ್ವದ ಟೆಸ್ಟ್ ಸರಣಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ

ಲಂಡನ್: ನಾಳೆಯಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಮಹತ್ವದ ಟೆಸ್ಟ್ ಸರಣಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

ಹೌದು.. ಚೊಚ್ಚಲ ವಿಶ್ವ ಕ್ರಿಕೆಟ್ ಟೆಸ್ಟ್ ನ ಫೈನಲ್‍ನಲ್ಲಿ ಸೋಲು ಕಂಡಿರುವ ಭಾರತ ನಾಳೆಯಿಂದ ನಾಟಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗೆಲುವಿನ ಅಭಿಯಾನ ಆರಂಭಿಸಲು ಸಜ್ಜಾಗಿದೆ. ಈ ಹಿಂದೆ ಇಂಗ್ಲೆಂಡ್ ತಂಡವು ಭಾರತ ಪ್ರವಾಸ ಕೈಗೊಂಡಿದ್ದಾಗ 4 ಪಂದ್ಯಗಳ ಟೆಸ್ಟ್  ಸರಣಿಯನ್ನು 3-1 ರಿಂದ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದ್ದ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡವು ಆಂಗ್ಲರ ನಾಡಿನಲ್ಲೂ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

ಆದರೆ ಭಾರತದ ನೆಲದಲ್ಲಿ ಕಂಡ ಸೋಲಿಗೆ ಮುಯ್ಯಿ ತೀರಿಸಿಕೊಂಡು ಸರಣಿ ವಶವಡಿಸಿಕೊಳ್ಳುವತ್ತ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡವು ಕೂಡ ಸರ್ವ ಸನ್ನದ್ಧವಾಗಿದೆ. ಗಾಯಾಳುಗಳ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತದ ಪರ 2 ವರ್ಷಗಳ ನಂತರ ಕನ್ನಡಿಗ ಕೆ.ಎಲ್.ರಾಹುಲ್ ಅವರು ಬಲಿಷ್ಠ  ಆಟಗಾರ ರೋಹಿತ್‍ಶರ್ಮಾರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಕಾತರರಾಗಿದ್ದಾರೆ. 

ಸಚಿನ್ ದಾಖಲೆಯ ಸನಿಹದಲ್ಲಿ ವಿರಾಟ್ ಕೊಹ್ಲಿ
ಇಂಗ್ಲೆಂಡ್ ವಿರುದ್ಧದ ಸರಣಿಯು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೂ ಮಹತ್ತರವಾಗಿದ್ದು ಹಲವು ಸಾಧನೆಗಳನ್ನು ಮೆಟ್ಟಿ ನಿಲ್ಲಲು ಕಾತರರಾಗಿದ್ದಾರೆ. ಪ್ರತಿ ಬಾರಿ ಬ್ಯಾಟಿಂಗ್ ಮಾಡಿದಾಗಲೂ ಭಾರತ ತಂಡದ ನಾಯಕ, ರನ್ ಮೆಷಿನ್ ಕೊಹ್ಲಿ ಕೆಲವು ದಾಖಲೆಗಳನ್ನು ನಿರ್ಮಿಸುತ್ತಾರೆ. ಆದರೆ 2019ರಿಂದ ಈ  ವರೆಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿಯಿಂದ ಅಂತಹ ಉತ್ತಮ ಪ್ರದರ್ಶನ ಕಂಡುಬಂದಿರಲಿಲ್ಲ. ಇದರ ಜೊತೆಗೆ ಕೋವಿಡ್ ಮಹಾಮಾರಿಯಿಂದಾಗಿ ಸಾಕಷ್ಟು ತಿಂಗಳ ಕಾಲ ಕ್ರಿಕೆಟ್ ಟೂರ್ನಿ ಆಯೋಜನೆ ಕೂಡ ರದ್ದಾಗಿತ್ತು. ಈ ಹಿಂದಿನ ಸರಣಿಗಳಲ್ಲಿ ಕೊಹ್ಲಿ ಕೂದಲೆಳೆ ಅಂತರದಲ್ಲಿ ದಾಖಲೆಗಳನ್ನು ಮಿಸ್  ಮಾಡಿಕೊಂಡಿದ್ದರು. ಹೀಗಾಗಿ ಕೊಹ್ಲಿ ಪಾಲಿಗೆ ಹಾಲಿ ಟೆಸ್ಟ್ ಸರಣಿ ಅತ್ಯಂತ ಮಹತ್ವದ್ದಾಗಿದ್ದು, ಈ ಸರಣಿಯಲ್ಲಿ ಹಲವು ದಾಖಲೆ ಕೊಹ್ಲಿ ಹಿಂದಿಕ್ಕುವ ನಿರೀಕ್ಷೆ ಇದೆ. 

ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಷ್ಟೇ ಟೆಸ್ಟ್ ನಲ್ಲೂ ಆಕ್ರಮಣಕಾರಿ ಆಟಗಾರನಾಗಿದ್ದು ಈ ಮಾದರಿಯ ಕ್ರಿಕೆಟ್‍ನಲ್ಲಿ ಇದುವರೆಗೂ 27 ಶತಕ ಹಾಗೂ 25 ಅರ್ಧಶತಕಗಳ ನೆರವಿನಿಂದ 7547 ರನ್‍ಗಳನ್ನು ಗಳಿಸಿದ್ದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ 5 ಪಂದ್ಯಗಳಲ್ಲಿ 453 ರನ್‍ಗಳನ್ನು ಗಳಿಸಿದರೆ 8 ಸಾವಿರ  ಮೈಲುಗಲ್ಲು ಮುಟ್ಟುವ ಅವಕಾಶವಿದೆ. ಅಂತೆಯೇ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 70 ಶತಕ ಬಾರಿಸಿದ್ದು, ಅವರ ಕೊನೆಯ ಟೆಸ್ಟ್ ಶತಕವು 2019 ರಲ್ಲಿ ಬಾಂಗ್ಲಾದೇಶದ ವಿರುದ್ಧವಾಗಿತ್ತು. ಹಾಲಿ ಸರಣಿಯಲ್ಲಿ ಒಂದೇ ಒಂದು ಶತಕ ಸಿಡಿಸಿದರೂ ಕೊಹ್ಲಿ ಆಸಿಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ 70  ಶತಕಗಳ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಮತ್ತು ಅತೀ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನ ಅಂದರೆ ಎರಡನೇ ಸ್ಥಾನಕ್ಕೇರಲಿದ್ದಾರೆ.

ಕೊಹ್ಲಿ ಇಂಗ್ಲೆಂಡ್ ವಿರುದ್ಧ 23 ಟೆಸ್ಟ್ ಗಳಲ್ಲಿ 1742 ರನ್ ಗಳಿಸಿದ್ದು, ಇನ್ನೂ 258 ರನ್ ಗಳನ್ನು ಗಳಿಸಿದರೆ ಇಂಗ್ಲೆಂಡ್ ವಿರುದ್ಧ ಅವರ ರನ್ ಗಳಿಕೆ 2000 ರನ್‌ಗಳಿಗೇರುತ್ತದೆ. ಈ ನಿಟ್ಟಿನಲ್ಲಿ ಕೊಹ್ಲಿ ಈಗಾಗಲೇ ರಾಹುಲ್ ದ್ರಾವಿಡ್ (1950 ರನ್-ಇಂಗ್ಲೆಂಡ್ ವಿರುದ್ಧ) ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇನ್ನು  ಶತಕಗಳ ಲೆಕ್ಕಾಚಾರದಲ್ಲಿ ಕೊಹ್ಲಿ 3ನೇ ಸ್ಥಾನದಲ್ಲಿದ್ದು, ಸಚಿನ್ ತೆಂಡೂಲ್ಕರ್ ಮತ್ತು ದ್ರಾವಿಡ್ ಇಂಗ್ಲೆಂಡ್ ವಿರುದ್ಧ ತಲಾ ಏಳು ಶತಕಗಳನ್ನು ಸಿಡಿಸಿದ್ದು,  ಕೊಹ್ಲಿ ಐದು ಶತಕಗಳನ್ನು ಸಿಡಿಸಿದ್ದಾರೆ. ಹಾಲಿ ಸರಣಿಯಲ್ಲಿ ಇನ್ನು ಮೂರು ಶತಕ ಸಿಡಿಸಿದರೆ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ಭಾರತದ  ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. ಅಲ್ಲದೆ ಈ ವರೆಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ 90 ಕ್ಯಾಚ್ ಗಳನ್ನು ಪಡೆದಿದ್ದು, ಈ ಸರಣಿಯಲ್ಲಿ ಇನ್ನು 10 ಕ್ಯಾಚ್ ಗಳನ್ನು ಪಡೆದರೆ, ಕ್ಯಾಚ್ ಗಳಲ್ಲಿಯೂ ಕೊಹ್ಲಿ ಶತಕ ಸಿಡಿಸಿದಂತಾಗುತ್ತದೆ. 


 
ಅಜಿಂಕ್ಯ ರಹಾನೆ
ಭಾರತ ತಂಡದ ಉಪನಾಯಕ ಅಜಿಂಕ್ಯಾ ರಹಾನೆ 74 ಟೆಸ್ಟ್‌ಗಳಲ್ಲಿ 4647 ರನ್ ಗಳಿಸಿದ್ದು, ಇನ್ನು ಕೇವಲ 353 ರನ್ ಗಳಿಸಿದರೆ ಅವರ ರನ್ ಗಳಿಕೆ 5000ಕ್ಕೇರಲಿದೆ. ಅಂತೆಯೇ ರಹಾನೆ ಕೂಡ 96 ಕ್ಯಾಚ್ ಗಳನ್ನು ಪಡೆದಿದ್ದು, ಈ ಸರಣಿಯಲ್ಲಿ 4 ಕ್ಯಾಚ್ ಪಡೆದರೆ ಅವರೂ ಕೂಡ ಕ್ಯಾಚ್ ಗಳ ಶತಕ  ಸಿಡಿಸುವ ಸಾಧ್ಯತೆ ಇದೆ. 

ರೋಹಿತ್ ಶರ್ಮಾ
ರೋಹಿತ್ ಶರ್ಮಾ ಟೆಸ್ಟ್ ನಲ್ಲಿ 2679 ರನ್ ಗಳಿಸಿದ್ದು, ಅವರು ಈ ಸರಣಿಯಲ್ಲಿ 321ರನ್ ಗಳಿಸಿದರೆ ಅವರ ರನ್ ಗಳಿಗೆ 3 ಸಾವಿರಕ್ಕೇರಲಿದೆ.

ಜಸ್ಪ್ರೀತ್ ಬುಮ್ರಾ
ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ 83 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದು, ಅವರು ಈ ಸರಣಿಯಲ್ಲಿ 17 ವಿಕೆಟ್ ಪಡೆದರೆ ಅವರ ವಿಕೆಟ್ ಗಳ ಸಂಖ್ಯೆ 100ಕ್ಕೇರಲಿದೆ. ಬುಮ್ರಾ ಈ ವರೆಗೂ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅವರು ಇಂಗ್ಲೆಂಡ್ ಸರಣಿಯಲ್ಲಿ 17 ವಿಕೆಟ್ ಗಳಿಸಿದ್ದೇ ಆದರೆ ಬುಮ್ರಾ ಭಾರತದ  ಪರ ವೇಗವಾಗಿ 100 ಟೆಸ್ಟ್ ವಿಕೆಟ್ ಗಳಿಸಿದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. ಈ ಹಿಂದೆ ಈ ಸಾಧನೆಯಲ್ಲಿ ಕಪಿಲ್ ದೇವ್ ಅವರು 25 ಟೆಸ್ಟ್ ಪಂದ್ಯಗಳಲ್ಲಿ ಮಾಡಿದ್ದರು. 

ಆರ್ ಅಶ್ವಿನ್
ಇತ್ತ ಅಶ್ವಿನ್ ಕೂಡ ದಾಖಲೆ ಹೊಸ್ತಿಲಲ್ಲಿದ್ದು,  ಇಂಗ್ಲೆಂಡ್ ವಿರುದ್ಧ 100 ವಿಕೆಟ್ ಪಡೆದ ಮೊದಲ ಭಾರತೀಯನಾಗಲು ಆರ್ ಅಶ್ವಿನ್ ಗೆ 12 ವಿಕೆಟ್ ಗಳ ಅಗತ್ಯವಿದೆ.

ರವೀಂದ್ರ ಜಡೇಜಾ 15 ರನ್ ಗಳಿಸಿದರೆ 2000 ಟೆಸ್ಟ್ ರನ್ ಪೂರೈಸಿದಂತಾಗುತ್ತದೆ. ಇತ್ತ ಭಾರತದ ಮತ್ತೋರ್ವ ವೇಗಿ ಮೊಹಮ್ಮದ್ ಶಮಿ 16 ವಿಕೆಟ್ ಗಳಿಸಿದರೆ ಅವರ ವಿಕೆಟ್ ಗಳಿಕೆ 200ಕ್ಕೇರಲಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com