ಐಪಿಎಲ್ 2022: ಎರಡು ಹೊಸ ತಂಡ ಸೇರ್ಪಡೆ, ಬಿಡ್ಡಿಂಗ್‌ಗೆ 2000 ಕೋಟಿ ರೂ. ಮೂಲಬೆಲೆ ನಿಗದಿ, 5 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆ
ಐಪಿಎಲ್ 2022 ಟೂರ್ನಿಗೆ ಬಿಸಿಸಿಐ ಭರದ ಸಿದ್ಧತೆ ನಡೆಸಿದ್ದು, ಮುಂದಿನ ಟೂರ್ನಿಗೆ 2 ಹೊಸ ತಂಡಗಳು ಸೇರ್ಪಡೆಯಾಗುವುದು ಖಚಿತವಾಗಿರುವಂತೆಯೇ ಬಿಡ್ಡಿಂಗ್‌ಗೆ ಬಿಸಿಸಿಐ 2000 ಕೋಟಿ ರೂ ಮೂಲಬೆಲೆ ನಿಗದಿಪಡಿಸಿದೆ.
Published: 31st August 2021 03:25 PM | Last Updated: 31st August 2021 04:42 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ಐಪಿಎಲ್ 2022 ಟೂರ್ನಿಗೆ ಬಿಸಿಸಿಐ ಭರದ ಸಿದ್ಧತೆ ನಡೆಸಿದ್ದು, ಮುಂದಿನ ಟೂರ್ನಿಗೆ 2 ಹೊಸ ತಂಡಗಳು ಸೇರ್ಪಡೆಯಾಗುವುದು ಖಚಿತವಾಗಿರುವಂತೆಯೇ ಬಿಡ್ಡಿಂಗ್‌ಗೆ ಬಿಸಿಸಿಐ 2000 ಕೋಟಿ ರೂ ಮೂಲಬೆಲೆ ನಿಗದಿಪಡಿಸಿದೆ.
ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳ ಆರಂಭಕ್ಕೆ ದಿನಗಣನೆ ಶುರುವಾಗಿರುವಂತೆಯೇ ಇತ್ತ 2022ರಲ್ಲಿ ನಡೆಯಲಿರುವ ಐಪಿಎಲ್ 15ನೇ ಆವೃತ್ತಿಗೆ ಸಿದ್ಧತೆಗಳು ಆರಂಭವಾಗಿದೆ. ಐಪಿಎಲ್ 2022 ಟೂರ್ನಿಗೆ 2 ಹೊಸ ತಂಡಗಳು ಸೇರ್ಪಡೆಯಾಗುತ್ತಿದ್ದು, ಬಿಡ್ಡಿಂಗ್‌ಗೆ ಬಿಸಿಸಿಐ 2000 ಕೋಟಿ ರೂ ಮೂಲಬೆಲೆ ನಿಗದಿಪಡಿಸಿದೆ. ಅಲ್ಲದೆ ಮುಂದಿನ ಟೂರ್ನಿಯಿಂದ ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ 5 ಸಾವಿರ ಕೋಟಿ ರೂ ಆದಾಯ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಐಪಿಎಲ್ 2021: ಆರ್ ಸಿಬಿಗೆ ಆಘಾತ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್
ಈಗಾಗಲೇ 8 ತಂಗಳನ್ನು ಹೊಂದಿರುವ ಐಪಿಎಲ್‌ನಲ್ಲಿ ಮುಂದಿನ ಆವೃತ್ತಿಗಾಗಿ ಮತ್ತೆರಡು ತಂಡಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಈ ಹೊಸ ತಂಡಗಳಿಗೆ ಬಿಸಿಸಿಐ 2000 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಿದ್ದು, ಈ ಬಿಡ್ಡಿಂಗ್‌ನ ಅಂತ್ಯದಲ್ಲಿ ಎರಡು ತಂಡಗಳ ಮಾರಾಟದಿಂದ ಕನಿಷ್ಠ 5000 ಕೋಟಿ ರೂಪಾಯಿ ಲಾಭಗಳಿಸುವ ನಿರೀಕ್ಷೆಯನ್ನು ಬಿಸಿಸಿಐ ಹೊಂದಿದೆ.
ಆರಂಭದಲ್ಲಿ ಈ ಮೂಲಬೆಲೆಯನ್ನು 1700 ಕೋಟಿ ರೂಪಾಯಿಗೆ ನಿಗದಿಗೊಳಿಸಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಇದನ್ನು ಏರಿಕೆ ಮಾಡಲಾಗಿದ್ದು 2000 ಕೋಟಿ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಇನ್ನು ಈ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಬಯಸುವ ತಂಡಗಳು ಆರಂಭದಲ್ಲಿ 75 ಕೋಟಿ ರೂಪಾಯಿ ನೀಡಿ ಬಿಡ್ಡಿಂಗ್ ದಾಖಲಾತಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಇನ್ನು ಈ ಬಿಡ್ಡಿಂಗ್ ದಾಖಲೆ ಪಡೆಯಲು ಹಾಗೂ ಲೀಗ್‌ನ ಫ್ರಾಂಚೈಸಿಯನ್ನು ಪಡೆದುಕೊಳ್ಳಲು ಕನಿಷ್ಠ 3000 ಕೋಟಿ ರೂಪಾಯಿಯ ವಾರ್ಷಿಕ ವಹಿವಾಟು ಹೊಂದಿರಬೇಕು. ಹಾಗಿದ್ದಾಗ ಮಾತ್ರವೇ ಈ ಬಿಡ್ಡಿಂಗ್‌ನಲ್ಲಿ ಭಾಗಿಯಾಗಲು ಸಮರ್ಥರಾಗಿರುತ್ತಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಧನಾತ್ಮಕ ಮನೋಭಾವ ಹೊಂದಿದ್ದಾರೆ: ತಾಲಿಬಾನಿಗಳ ಹೊಗಳಿದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ
ಇನ್ನು ಬಿಸಿಸಿಐ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಮೂರು ಪ್ರತ್ಯೇಕ ಉದ್ಯಮ ಸಂಸ್ಥೆಗಳು ಜೊತೆಯಾಗಿ ಪಾಲ್ಗೊಳ್ಳಲು ಬಯಸಿದರೆ ಅದಕ್ಕೆ ಅವಕಾಶವಿದೆ. ಆದರೆ ಮೂರಕ್ಕಿಂತ ಹೆಚ್ಚಿನ ಸಂಸ್ಥೆಗಳಿಗೆ ಜೊತೆಯಾಗಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಎಂದು ಹೇಳಲಾಗಿದೆ.
ಆದಾನಿ ಸಮೂಹ ಸೇರಿದಂತೆ ಫ್ರಾಂಚೈಸಿ ಖರೀದಿಗೆ ಹಲವು ಸಂಸ್ಥೆಗಳು ಉತ್ಸುಕ
ಐಪಿಎಲ್‌ನ ಫ್ರ್ಯಾಂಚೈಸಿಯನ್ನು ಕೊಂಡುಕೊಳ್ಳಲು ಹಲವಾರು ಉದ್ಯಮ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಅದಾನಿ ಗ್ರೂಪ್, ಆರ್‌ಪಿಜಿ ಸಂಜೀವ್ ಗೊಯೆಂಕಾ ಗ್ರೂಪ್, ಔಷಧೀಯ ಕಂಪನಿ ಟೊರೆಂಟ್ ಮತ್ತು ಪ್ರಮುಖ ಬ್ಯಾಕ್‌ವೊಂದು ಸೇರಿದಂತೆ ಹೆಚ್ಚಿನ ಸಂಸ್ಥೆಗಳು ಐಪಿಎಲ್‌ನಲ್ಲಿ ತಮ್ಮ ಫ್ರಾಂಚೈಸಿಯನ್ನು ಹೊಂದಲು ತುದಿಗಾಲಲ್ಲಿ ನಿಂತಿವೆ. ಹೀಗಾಗಿ ಫ್ರಾಂಚೈಸಿಕೊಂಡುಕೊಳ್ಳಲು ಸಾಕಷ್ಟು ಪೈಪೋಟಿ ನಡೆಯಲಿದೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಯಾವ ಎರಡು ನಗರಗಳನ್ನು ಐಪಿಎಲ್ ಫ್ರಾಂಚೈಸಿಗಳು ಪ್ರತಿನಿಧಿಸಲಿದೆ ಎಂಬುದು ಕೂಡ ಕುತೂಹಲಕಾರಿಯಾಗಿದೆ. ಸಾಮರ್ಥ್ಯದಲ್ಲಿ ಅತಿ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿರುವ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣವಿರುವ ಅಹ್ಮದಾಬಾದ್ ಹಾಗೂ ಲಖನೌ ನಗರಗಳು ಈ ಸ್ಪರ್ಧೆಯಲ್ಲಿ ಸದ್ಯ ಮುಂಚೂಣಿಯಲ್ಲಿದೆ.
ಆರಂಭದಲ್ಲಿ ಎಂಟು ತಂಡಗಳಿಂದಲೇ ಪ್ರಾರಂಭವಾಗಿದ್ದ ಐಪಿಎಲ್ ಸರಿಯಾಗಿ ದಶಕಗಳ ಹಿಂದೆ 10 ತಂಡಗಳ ಮೂಲಕ ಆಡಿಸಲಾಗಿತ್ತು. ಐಪಿಎಲ್‌ನ ನಾಲ್ಕನೇ ಆವೃತ್ತಿಯಲ್ಲಿ ಕೊಚ್ಚಿ ಟಸ್ಕರ್ಸ್ ಹಾಗೂ ಪುಣೆ ವಾರಿಯರ್ಸ್ ಇಂಡಿಯಾ ತಂಡಗಳು ಐಪಿಎಲ್‌ಗೆ ಸೇರ್ಪಡೆಯಾಗಿದ್ದವು. ಅದಾದ ನಂತರ 9 ತಂಡಗಳೊಂದಿಗೆ ಟೂರ್ನಿಯನ್ನು ಆಡಿಸಲಾಗಿತ್ತು. ಬಳಿಕ ಸ್ಪಾಟ್ ಫಿಕ್ಸಿಂಗ್ ವಿವದ, ಠೇವಣಿ ಸೇರಿದಂತೆ ಇತರೆ ವಿಚಾರಗಳಿಂದಾಗಿ 8 ತಂಗಳಿಗೆ ಟೂರ್ನಿ ಸೀಮಿತವಾಗಿತ್ತು. ಇದೀಗ ಮುಂದಿನ ಆವೃತ್ತಿಯಲ್ಲಿ ಮತ್ತೆ 10 ತಂಡಗಳು ಮುಖಾಮುಖಿಯಾಗಲಿದೆ.
ಸೆಪ್ಟೆಂಬರ್ 19ರಿಂದ 14ನೇ ಆವೃತ್ತಿಯ ಬಾಕಿ ಪಂದ್ಯಗಳು
ಇನ್ನು ಕೋವಿಡ್ ಸಾಂಕ್ರಾಮಿಕದಿಂದಾಗಿ ಆರ್ಧಕ್ಕೆ ಸ್ಥಗಿತವಾಗಿದ್ದ ಈ ಬಾರಿಯ ಐಪಿಎಲ್ ಆವೃತ್ತಿಯ ಉಳಿದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಮೊದಲಾರ್ಧದ ಐಪಿಎಲ್‌ನ ಬಳಿಕ ಟೂರ್ನಿಗೆ ಕೊರೊನಾವೈರಸ್ ಆಘಾತ ನೀಡಿದ ನಂತರ ಅನಿರ್ದಿಷ್ಟಾವಧಿಗೆ ಟೂರ್ನಿಯನ್ನು ಮುಂದೂಡಲಾಗಿತ್ತು. ಬಳಿಕ ಬಿಸಿಸಿಐ ಉಳಿದ ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ನಿರ್ಧರಿಸಿದ್ದು ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಈಗ ಈ ಟೂರ್ನಿಯಲ್ಲಿ ಭಾಗಿಯಾಗಲು ಹೆಚ್ಚಿನ ತಂಡಗಳು ಯುಎಇಯನ್ನು ತಲುಪಿದ್ದು ಅಭ್ಯಾಸವನ್ನು ನಡೆಸುತ್ತಿವೆ.