ರಿಷಬ್ ಪಂತ್ ಭರ್ಜರಿ ಶತಕ: 17 ವರ್ಷಗಳ ಹಿಂದಿನ ಧೋನಿ ದಾಖಲೆ ಸೇರಿ ಹಲವು ದಾಖಲೆಗಳು ಧೂಳಿಪಟ

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತಕ್ಕೆ ನೆರವಾಗಿದ್ದು ಮಾತ್ರವಲ್ಲದೇ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಬ್ ಪಂತ್ 17 ವರ್ಷಗಳ ಹಿಂದಿನ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ರಿಷಬ್ ಪಂತ್
ರಿಷಬ್ ಪಂತ್

ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತಕ್ಕೆ ನೆರವಾಗಿದ್ದು ಮಾತ್ರವಲ್ಲದೇ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಬ್ ಪಂತ್ 17 ವರ್ಷಗಳ ಹಿಂದಿನ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಹೌದು.. ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 338 ರನ್ ಕಲೆಹಾಕಿದೆ. ಒಂದು ಹಂತದಲ್ಲಿ ಭಾರತ ತಂಡ ಕೇವಲ 98 ರನ್ ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟ್ಕೆ ಸಿಲುಕಿತ್ತು. ಈ ಹಂತದಲ್ಲಿ ಜತೆಗೂಡಿದ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ 222 ರನ್ ಗಳ ಭರ್ಜರಿ ಜೊತೆಯಾಟ ನೀಡಿತು. ಈ ಪೈಕಿ ರಿಷಬ್ ಪಂತ್ ಕೇವಲ 111 ಎಸೆತಗಳಲ್ಲಿ 146ರನ್ ಕಲೆಹಾಕಿದರೆ, 163 ಎಸೆತಗಳಲ್ಲಿ ಜಡೇಜಾ ಅಜೇಯ 8 3ರನ್ ಗಳಿಸಿದ್ದಾರೆ.

ಧೋನಿ ದಾಖಲೆ ಮುರಿದ ಪಂತ್
ಈ ಭರ್ಜರಿ ಶತಕ ಮೂಲಕ ರಿಷಬ್ ಪಂತ್  17ವರ್ಷಗಳ ಹಿಂದಿನ ಧೋನಿ ದಾಖಲೆ ಹಿಂದಿಕ್ಕಿದ್ದಾರೆ. ಟೀಮ್ ಇಂಡಿಯಾ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಎಂಬ ದಾಖಲೆ ಇದೀಗ ಪಂತ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. 16 ವರ್ಷಗಳ ಹಿಂದೆ, ಅಂದರೆ 2006 ರಲ್ಲಿ ಧೋನಿ ಪಾಕಿಸ್ತಾನ್ ವಿರುದ್ದ ಫೈಸಲಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಕೇವಲ 93 ಎಸೆತಗಳಲ್ಲಿ ಶತಕ ಪೂರೈಸಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿದು 24 ವರ್ಷದ ಪಂತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹಾಗೆಯೇ ವಿದೇಶಿ ಪಿಚ್​ನಲ್ಲಿ ಅತೀ ವೇಗವಾಗಿ ಶತಕ ಬಾರಿಸಿದ ಮೂರನೇ ಟೀಮ್ ಇಂಡಿಯಾ ಬ್ಯಾಟ್ಸ್​ಮನ್ ಎಂಬ ದಾಖಲೆ ಕೂಡ ಪಂತ್ ಪಾಲಾಗಿದೆ. ಈ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದು, ಸೆಹ್ವಾಗ್ 2006 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಗ್ರಾಸ್ ಐಲೆಟ್ ಮೈದಾನದಲ್ಲಿ ಕೇವಲ 78 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇನ್ನು 1990 ರಲ್ಲಿ ಮೊಹಮ್ಮದ್ ಅಜರುದ್ದೀನ್ ಇಂಗ್ಲೆಂಡ್ ವಿರುದ್ದ ಲಾರ್ಡ್ಸ್​ ಮೈದಾನದಲ್ಲಿ 88 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ದ ಕೇವಲ 89 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ರಿಷಭ್ ಪಂತ್ ವಿದೇಶಿ ಪಿಚ್​ನಲ್ಲಿ ಅತೀ ವೇಗದ ಟೆಸ್ಟ್​ ಶತಕ ಸಿಡಿಸಿದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತೀ ವೇಗದ ಶತಕ ಬಾರಿಸಿದ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿದೆ. 1987 ರಲ್ಲಿ ಕಪಿಲ್ ದೇವ್ ಶ್ರೀಲಂಕಾ ವಿರುದ್ದ ಕೇವಲ 74 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು. ಹಾಗೆಯೇ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಇದ್ದಾರೆ. ಅಜರ್ 1997 ರಲ್ಲಿ ಸೌತ್ ಆಫ್ರಿಕಾ ವಿರುದ್ದ ಕೇವಲ 74 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಇನ್ನು ಮೂರನೇ ಸ್ಥಾನದಲ್ಲಿ ವೀರೇಂದ್ರ ಸೆಹ್ವಾಗ್ ಇದ್ದು, ವೀರು 2006 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಕೇವಲ 78 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು.

ವಿದೇಶಿ ಪಿಚ್ ನಲ್ಲಿ ಹೆಚ್ಚು ಶತಕ
ಅಷ್ಟೇ ಅಲ್ಲದೆ ರಿಷಭ್ ಪಂತ್, ಟೆಸ್ಟ್​ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ವಿದೇಶಿ ಪಿಚ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿಜಯ್ ಮಂಜ್ರೇಕರ್, ಅಜಯ್ ರಾತ್ರ, ವೃದ್ದಿಮಾನ್ ಸಹಾ ಇದ್ದು, ಇವರು ಕೇವಲ ತಲಾ ಮೂರು ಶತಕ ಬಾರಿಸಿದ್ದರು. ಇದೀಗ ಪಂತ್ ಇಂಗ್ಲೆಂಡ್ ವಿರುದ್ದ 2 ಶತಕ, ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ದ ತಲಾ 1 ಶತಕ ಬಾರಿಸುವ ಮೂಲಕ ವಿದೇಶಿ ಪಿಚ್​ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಭಾರತೀಯ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

ಇದಲ್ಲದೆ ಒಂದೇ ವರ್ಷದೊಳಗೆ ಭಾರತ ಪರ 2 ಶತಕ ಬಾರಿಸಿದ ವಿಕೆಟ್ ಕೀಪರ್​ಗಳ ಪಟ್ಟಿಯಲ್ಲೂ ಪಂತ್ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ 1964 ರಲ್ಲಿ ವಿಕೆಟ್ ಕೀಪರ್ ಬುಧಿ ಕುಂದರನ್ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 2 ಶತಕ ಬಾರಿಸಿ ದಾಖಲೆ ಬರೆದಿದ್ದರು. ಆ ಬಳಿಕ 2009 ರಲ್ಲಿ ಮಹೇಂದ್ರ ಸಿಂಗ್ ಧೋನಿ ಒಂದೇ ವರ್ಷದಲ್ಲಿ 2 ಶತಕ ಬಾರಿಸುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದರು. ಇದಾರ ನಂತರ 2017 ರಲ್ಲಿ ವೃದ್ದಿಮಾನ್ ಸಾಹ ಕೂಡ 2 ಶತಕ ಬಾರಿಸಿ ಮಿಂಚಿದ್ದರು. ಇದೀಗ ರಿಷಭ್ ಪಂತ್ ಕೂಡ ಒಂದೇ ವರ್ಷದಲ್ಲಿ 2 ಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಭಾರತ 4ನೇ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ವಿದೇಶಿ ಪಿಚ್ ನಲ್ಲಿ 2 ಶತಕ; ಏಕೈಕ ವಿಕೆಟ್ ಕೀಪರ್ ಬ್ಯಾಟ್ಸ್​ಮನ್
ಇದಾಗ್ಯೂ ಒಂದೇ ವರ್ಷದೊಳಗೆ ವಿದೇಶಿ ಪಿಚ್​ನಲ್ಲಿ ಎರಡು ಶತಕ ಬಾರಿಸಿದ ಟೀಮ್ ಇಂಡಿಯಾದ ಏಕೈಕ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಎಂಬ ದಾಖಲೆ ರಿಷಭ್ ಪಂತ್ ಪಾಲಾಗಿದೆ. ಪಂತ್ ಜನವರಿ 13, 2022 ರಂದು ಜೋಹಾನ್ಸ್​ಬರ್ಗ್​ನಲ್ಲಿ ಅಜೇಯ 100 ರನ್ ಬಾರಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ದ 111 ಎಸೆತಗಳಲ್ಲಿ 146 ರನ್​ ಬಾರಿಸುವ ಮೂಲಕ ಈ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಒಂದು ಸೆಂಚುರಿ ಅಬ್ಬರದೊಂದಿಗೆ ರಿಷಭ್ ಪಂತ್ ಇದೀಗ ಹಲವು ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com