ಎಡಗೈಯಲ್ಲಿ ಬೂಮ್ರಾ, ಬಲಗೈಯಲ್ಲಿ ಜಡೇಜ ಬೌಲಿಂಗ್; ಕೊಹ್ಲಿ ಕೈಯಲ್ಲಿ ಬಾಲ್, ಏನಿದು ಟೀಂ ಇಂಡಿಯಾ ಹೊಸ ಗೇಮ್ ಪ್ಲಾನ್?

ಹಾಲಿ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ 5 ಗೆಲುವುಗಳ ಮೂಲಕ ಅಜೇಯರಾಗಿ ಉಳಿದಿರುವ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ಆಡುತ್ತಿದ್ದು ಈ ಪಂದ್ಯಕ್ಕಾಗಿ ಭಾರತ ತಂಡ ತನ್ನ ಗೇಮ್ ಪ್ಲಾನ್ ನಲ್ಲಿ ಮಹತ್ತರ ಬದಲಾವಣೆ ತರುತ್ತಿದೆ ಎಂದು ತೋರುತ್ತಿದೆ.
ನೆಟ್ಸ್ ನಲ್ಲಿ ಟೀಂ ಇಂಡಿಯಾ
ನೆಟ್ಸ್ ನಲ್ಲಿ ಟೀಂ ಇಂಡಿಯಾ

ನವದೆಹಲಿ: ಹಾಲಿ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ 5 ಗೆಲುವುಗಳ ಮೂಲಕ ಅಜೇಯರಾಗಿ ಉಳಿದಿರುವ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ಆಡುತ್ತಿದ್ದು ಈ ಪಂದ್ಯಕ್ಕಾಗಿ ಭಾರತ ತಂಡ ತನ್ನ ಗೇಮ್ ಪ್ಲಾನ್ ನಲ್ಲಿ ಮಹತ್ತರ ಬದಲಾವಣೆ ತರುತ್ತಿದೆ ಎಂದು ತೋರುತ್ತಿದೆ.

ಹೌದು.. ಇಂತಹುದೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರುವುದು ಟೀಂ ಇಂಡಿಯಾದ ನೆಟ್ಸ್ ಅಭ್ಯಾಸದಲ್ಲಿನ ಬದಲಾವಣೆಗಳು. ಇದೇ ಭಾನುವಾರ ಉತ್ತರ ಪ್ರದೇಶದ ಲಖನೌನ ಏಕಾನ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈಗಾಗಲೇ ಭಾರತ ತಂಡ ಲಖನೌನಲ್ಲಿ ಅಭ್ಯಾಸ ಆರಂಭಿಸಿದೆ. ಈ ಅಭ್ಯಾಸದ ವೇಳೆ ಆಟಗಾರರು ತಮ್ಮದಲ್ಲದ ಶೈಲಿಯನ್ನು ಅಭ್ಯಾಸ ಮಾಡುತ್ತಿದ್ದು, ಇದು ಟೀಂ ಇಂಡಿಯಾದ ಗೇಮ್ ಪ್ಲಾನ್ ಬದಲಾವಣೆ ಕುರಿತು ಗುಮಾನಿ ಹುಟ್ಟಿಸಿದೆ.

ಇಷ್ಟಕ್ಕೂ ಏನದು ಬದಲಾವಣೆ?
ನೆಟ್ಸ್ ನಲ್ಲಿ ಅಭ್ಯಾಸ ಮಾಡುವ ವೇಳೆ ಟೀಂ ಇಂಡಿಯಾದ ಆಟಗಾರರು ತಮ್ಮದಲ್ಲದ ತದ್ವಿರುದ್ಧ ಶೈಲಿಯಲ್ಲಿ ಅಭ್ಯಾಸ ನಡೆಸುತ್ತಿದ್ದರು. ಪ್ರಮುಖವಾಗಿ ಎಡಗೈ ಸ್ಪಿನ್ನರ್ ಆಗಿರುವ ರವೀಂದ್ರ ಜಡೇಜಾ ಬಲಗೈನಲ್ಲಿ ಬೌಲಿಂಗ್ ಮಾಡುವ ಅಭ್ಯಾಸ ಮಾಡುತ್ತಿದ್ದರು. ಅಂತೆಯೇ ಬಲಗೈ ವೇಗಿ ಬುಮ್ರಾ ಕೂಡ ಎಡಗೈನಲ್ಲಿ ಬೌಲಿಂಗ್ ಮಾಡುವ ಅಭ್ಯಾಸ ಮಾಡಿದರು. ಇನ್ನು ಅಚ್ಚರಿ ಎಂದರೆ ಟೀಂ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಈ ಬಾರಿ ಬ್ಯಾಟ್ ಹಿಡಿಯುವ ಬದಲು ರೋಹಿತ್ ಶರ್ಮಾಗೆ ಬೌಲಿಂಗ್ ಮಾಡಿ ಅಚ್ಚರಿ ಮೂಡಿಸಿದರು.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಾಗ ವಿರಾಟ್ ಕೊಹ್ಲಿ ಅವರೇ ಓವರ್ ಪೂರ್ಣಗೊಳಿಸಿದ್ದರು. ಕೊಹ್ಲಿ ಮಾತ್ರವಲ್ಲ ಶುಭ್ ಮನ್ ಗಿಲ್, ಸೂರ್ಯ ಕುಮಾರ್ ಯಾದವ್ ಕೂಡ ಬೌಲಿಂಗ್ ಮಾಡಿ ಬೆವರು ಹರಿಸಿದ್ದು ವಿಶೇಷವಾಗಿತ್ತು. ಈ ವೇಳೆ ತಾವೇನು ಕಮ್ಮಿಯೇನಲ್ಲ ಎಂಬಂತೆ 'ಚೈನಾಮನ್' ಖ್ಯಾತಿಯ ಕುಲದೀಪ್ ಯಾದವ್ ಸಹ ಬಲಗೈಯಲ್ಲಿ ಬೌಲಿಂಗ್ ಮಾಡಿದರು. 

ಇನ್ನು ಆಫ್ ಸ್ಪಿನ್ನರ್ ಆರ್. ಅಶ್ವಿನ್, ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಸಹ ಕಠಿಣ ಅಭ್ಯಾಸ ನಡೆಸಿದರು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ನೇತೃತ್ವದ ತಂಡವು ಏಕನಾ ಕ್ರೀಡಾಂಗಣದ ಮುಖ್ಯ ಮೈದಾನದಲ್ಲಿ ಸುಮಾರು 45 ನಿಮಿಷಗಳ ಕಾಲ ಅಭ್ಯಾಸ ನಡೆಸಿತು. ಈ ಸಮಯದಲ್ಲಿ ಭಾರತದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಅಶ್ವಿನ್ ಮೇಲೆ ಕಣ್ಣಿಟ್ಟಿದ್ದರು. ಹೀಗಾಗಿ ಅಶ್ವಿನ್ ಹೆಚ್ಚಾಗಿ ಗಿಲ್, ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಗೆ ಬೌಲಿಂಗ್ ಮಾಡಿದರು. ಹೀಗಾಗಿ ಭಾನುವಾರದ ಪಂದ್ಯಕ್ಕೆ ಅಶ್ವಿನ್ ಫಿಕ್ಸ್ ಎಂದು ಹೇಳಲಾಗುತ್ತಿದೆ.

ಇಂಗ್ಲೆಂಡ್ ಪಂದ್ಯಕ್ಕೆ 3 ಸ್ಪಿನ್ನರ್ ಗಳ ಬಳಕೆ
ಇನ್ನು ಮುಂದಿನ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಮೂರು ಸ್ಪಿನ್ನರ್ ಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಈ ಪೈಕಿ ಆರ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಬೌಲಿಂಗ್ ಮಾಡಲಿದ್ದಾರೆ ಎಂದು ಹೇಳಲಾಗಿದೆ. 

ಟಾಸ್ ನದ್ದೇ ಪ್ರಮುಖ ಪಾತ್ರ
ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ನಡುವಿನ ಕೊನೆಯ ಪಂದ್ಯವು ಎಕಾನಾ ಕ್ರೀಡಾಂಗಣದ ಐದನೇ ನಂಬರ್ ಪಿಚ್‌ನಲ್ಲಿ ನಡೆದಿತ್ತು, ಇದರಲ್ಲಿ ಮೊದಲ ಹತ್ತು ಓವರ್‌ಗಳು ಬ್ಯಾಟಿಂಗ್ ಮಾಡಲು ಕಷ್ಟಕರವಾಗಿತ್ತು. ಆದರೆ, ಈ ಪಂದ್ಯ ಬೆಳಗ್ಗೆ 10.30ಕ್ಕೆ ಆರಂಭವಾಯಿತು. ಭಾರತ-ಇಂಗ್ಲೆಂಡ್ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಎಕಾನಾ ಪಿಚ್‌ನಲ್ಲಿ ನೀವು ಮೊದಲ ಹತ್ತು ಓವರ್‌ಗಳವರೆಗೆ ಎಚ್ಚರಿಕೆಯಿಂದ ಆಡಬೇಕಾಗುತ್ತದೆ.

ಆದರೆ, ಒಂದು ಗಂಟೆ ಕ್ರೀಸ್‌ನಲ್ಲಿ ಕಳೆದ ನಂತರ ಇಲ್ಲಿ ದೊಡ್ಡ ಸ್ಕೋರ್ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಬಹುದು. ಹೀಗಾಗಿ ಇಲ್ಲಿ ಟಾಸ್ ಅತ್ಯಂತ ಪ್ರಮುಖವಾಗಿರಲಿದೆ.

ಲಖನೌನಲ್ಲಿ ಭಾರತದ್ದೇ ಮೇಲುಗೈ
ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ಭಾರತದಲ್ಲಿ ನಡೆದ ಏಕದಿನ ಪಂದ್ಯಗಳನ್ನು ಗಮನಿಸಿದರೆ ಆತಿಥೇಯರದ್ದೇ ಮೇಲುಗೈ. ಭಾರತ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 51 ಪಂದ್ಯಗಳನ್ನು ಆಡಿದ್ದು, ಈ ಪೈಕಿ 33 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 17 ಪಂದ್ಯಗಳಲ್ಲಿ ಸೋಲು ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com