

ಪುಣೆ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿ (ICC Cricket World Cup 2023)ಯ ಇಂದಿನ ಪಂದ್ಯದಲ್ಲಿ ಆಫ್ಘಾನಿಸ್ತಾನ (Afghanistan)ದ ವಿರುದ್ಧ ಶ್ರೀಲಂಕಾ (Sri Lanka) ತಂಡ 241 ರನ್ ಗಳಿಗೆ ಆಲೌಟ್ ಆಗಿದ್ದು, ಶಾಹಿದಿ ಪಡೆಗೆ ಗೆಲ್ಲಲು 242 ರನ್ ಗಳ ಸಾಧಾರಣ ಗುರಿ ನೀಡಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ (Maharashtra Cricket Association Stadium) ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ (Afghanistan) ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ (Sri Lanka) ತಂಡ ಆಫ್ಘಾನಿಸ್ತಾನದ ಫಜಲ್ಹಕ್ ಫಾರೂಕಿ ಮತ್ತು ಮುಜೀಬ್ ಉರ್ ರೆಹಮಾನ್ ಬೌಲಿಂಗ್ ದಾಳಿ ಅಕ್ಷರಶಃ ನಲುಗಿ ಹೋಯಿತು.
ಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಶ್ರೀಲಂಕಾ ತಂಡ 49.3 ಓವರ್ ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 241ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಶ್ರೀಲಂಕಾ ಪರ ಪಥುಂ ನಿಸ್ಸಾಂಕ 46 ರನ್ ಗಳಿಸಿದರೆ, ನಾಯಕ ಕುಶಾಲ್ ಮೆಂಡಿಸ್ 39ರನ್, ಸದೀರ ಸಮರವಿಕ್ರಮ 36ರನ್ ಮತ್ತು ಮಹೀಶ್ ತೀಕ್ಷಣ 29 ರನ್ ಗಳಿಸಿದರು. ಆಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಕಿ 4 ವಿಕೆಟ್ ಕಬಳಿಸಿದರೆ, ಮುಜೀಬ್ ಉರ್ ರೆಹಮಾನ್ 2, ಅಜ್ಮತುಲ್ಲಾ ಮತ್ತು ರಷೀದ್ ಖಾನ್ ತಲಾ 1 ವಿಕೆಟ್ ಪಡೆದರು.