ಹೆಚ್ಚಿನ ಚಿಕಿತ್ಸೆಗಾಗಿ ರಿಷಬ್ ಪಂತ್‌ ಮುಂಬೈಗೆ ಸ್ಥಳಾಂತರ: ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ

ಕಾರು ಅಪಘಾತದಲ್ಲಿ ಗಾಯಗೊಂಡಿರುವ ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ ಡೆಹ್ರಾಡೂನ್‌ನಿಂದ ಮುಂಬೈಗೆ ಸ್ಥಳಾಂತರಿಸಲಾಗುತ್ತಿದೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ.
ರಿಷಬ್ ಪಂತ್
ರಿಷಬ್ ಪಂತ್

ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡಿರುವ ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ ಡೆಹ್ರಾಡೂನ್‌ನಿಂದ ಮುಂಬೈಗೆ ಸ್ಥಳಾಂತರಿಸಲಾಗುತ್ತಿದೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ.

ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸನ್ ನಡುವೆ ಡಿಸೆಂಬರ್ 30 ರಂದು ಮುಂಜಾನೆ ಭೀಕರ ಕಾರು ಅಪಘಾತ ಸಂಭವಿಸಿತ್ತು. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಪಂತ್ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಪವಾಡದ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ ಪಂತ್ ಅವರಿಗೆ ಗಂಭೀರ ಗಾಯಗಳಾಗಿದ್ದವು.

ಗಾಯಾಳು 25 ವರ್ಷದ ಪಂತ್ ಅವರನ್ನು ಆರಂಭದಲ್ಲಿ ಸಕ್ಷಮ್ ಆಸ್ಪತ್ರೆಯ ಮಲ್ಟಿಸ್ಪೆಷಾಲಿಟಿ ಮತ್ತು ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿತ್ತು. ನಂತರ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಇದೀಗ, ಹೆಚ್ಚಿನ ಚಿಕಿತ್ಸೆಗಾಗಿ ಮತ್ತು ಗಾಯಗಳಿಂದ ಚೇತರಿಸಿಕೊಳ್ಳಲು ಪಂತ್ ಅವರನ್ನು ಮುಂಬೈಗೆ ಕರೆದೊಯ್ಯಲಾಗುವುದು ಎಂದು ಡಿಡಿಸಿಎ ನಿರ್ದೇಶಕರು ತಿಳಿಸಿದ್ದಾರೆ.

ಅವರು (ರಿಷಬ್ ಪಂತ್) ಇಂದು ಮುಂಬೈಗೆ ಸ್ಥಳಾಂತರಗೊಳ್ಳಲಿದ್ದಾರೆ. ಅವರನ್ನು ಯಾವ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂಬುದನ್ನು ನಂತರ ತಿಳಿಸಲಾಗುವುದು ಎಂದು ಶ್ಯಾಮ್ ಶರ್ಮಾ ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಬಿಸಿಸಿಐನ ಅಧಿಕೃತ ಹೇಳಿಕೆ ಪ್ರಕಾರ, ಪಂತ್ ಅವರ ಹಣೆಯ ಮೇಲೆ ಎರಡು ಗಾಯಗಳಾಗಿವೆ. ಅವರ ಬಲ ಮೊಣಕಾಲಿನ ಅಸ್ಥಿರಜ್ಜು ಹರಿದಿದೆ ಮತ್ತು ಮಣಿಕಟ್ಟು, ಮುಂಗಾಲು ಮತ್ತು ಕಾಲ್ಬೆರಳಿಗೆ ಗಾಯವಾಗಿದೆ. ಅಪಘಾತದ ನಂತರ ಅವರ ಬೆನ್ನಿನ ಮೇಲೆ ಸವೆತದ ಗಾಯಗಳಾಗಿವೆ.

ಸಂಜೆಯ ನಂತರ ಹೊರಡಿಸಿದ ಮೆಡಿಕಲ್ ಬುಲೆಟಿನ್‌ನಲ್ಲಿ, ಪಂತ್ ಅವರ ಮಿದುಳು ಮತ್ತು ಬೆನ್ನುಮೂಳೆಯ ಎಂಆರ್‌ಐ ಫಲಿತಾಂಶಗಳು ಸಾಮಾನ್ಯವಾಗಿವೆ. ಪಂತ್ ಅವರ ಮುಖದ ಗಾಯಗಳು, ಸೀಳಿರುವ ಗಾಯಗಳು ಮತ್ತು ಸವೆತಗಳನ್ನು ನಿರ್ವಹಿಸಲು ಪ್ಲಾಸ್ಟಿಕ್ ಸರ್ಜರಿಯನ್ನೂ ಸಹ ಮಾಡಲಾಗಿದೆ ಎಂದಿದೆ.

ಆದರೆ, ಅತಿಯಾದ ನೋವು ಮತ್ತು ಊತದಿಂದಾಗಿ ಪಂತ್ ಅವರ ಬಲ ಮೊಣಕಾಲು ಮತ್ತು ಪಾದದ ಎಂಆರ್‌ಐ ಅನ್ನು ತಡೆಹಿಡಿಯಲಾಗಿದ್ದು, ಎಂಆರ್‌ಐ ಸೇರಿದಂತೆ ಉಳಿದ ಪರೀಕ್ಷೆಗಳು ಮುಂಬೈನಲ್ಲಿ ನಡೆಯಲಿವೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ದೇವರ ಇಚ್ಛೆ, ಎಲ್ಲವೂ ಚೆನ್ನಾಗಿರುತ್ತದೆ ಎಂದು ಶರ್ಮಾ ತಿಳಿಸಿದ್ದಾರೆ.

ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಿರುವ ಕಾರಣ ರಿಷಬ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯ ಐಸಿಯುನಿಂದ ಖಾಸಗಿ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಡಿಡಿಸಿಎ ನಿರ್ದೇಶಕರು ಸೋಮವಾರ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com