
ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜಶ್ರೀ ಸ್ವೈನಿ
ಭುವನೇಶ್ವರ: ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿಯೊಬ್ಬರ ಶವ ಅರಣ್ಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಒಡಿಶಾದಲ್ಲಿ ಪತ್ತೆಯಾಗಿದೆ.
ಒಡಿಶಾದ ಮಹಿಳಾ ಕ್ರಿಕೆಟ್ ಆಟರ್ಗಾತಿ ರಾಜಶ್ರೀ ಸ್ವೈನಿ (Rajashree Swain) ಅವರ ಶವ ಕಟಕ್ (Cuttack) ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಕಳೆದ ಮೂರು ದಿನಗಳಿಂದ ಅಂದರೆ ಜನವರಿ 11ರಿಂದ ರಾಜಶ್ರೀ ನಾಪತ್ತೆಯಾಗಿದ್ದರು ಎನ್ನಲಾಗಿದೆ.
ಕಟಕ್‌ನ ಉಪ ಪೊಲೀಸ್ (Police) ಆಯುಕ್ತ ಪಿನಾಕ್ ಮಿಶ್ರಾ ಅವರು ಅಥಘರ್ ಪ್ರದೇಶದ ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಜಶ್ರೀ ಅವರ ತರಬೇತುದಾರರು ಗುರುವಾರ ಕಟಕ್‌ನ ಮಂಗಳಬಾಗ್ ಪೊಲೀಸ್ ಠಾಣೆಯಲ್ಲಿ ರಾಜಶ್ರೀ ಅವರು ನಾಪತ್ತೆ ಆಗಿದ್ದಾರೆ ಎಂದು ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಆಟಗಾರ್ತಿಯ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಶ್ರೀಲಂಕಾ ಸರಣಿ ನಡುವೆಯೇ ಟೀಂ ಇಂಡಿಯಾ ತೊರೆದು ಬೆಂಗಳೂರಿಗೆ ದೌಡಾಯಿಸಿದ ಕೋಚ್ ರಾಹುಲ್ ದ್ರಾವಿಡ್!, 'ಜಾಮಿ'ಗೇನಾಯ್ತು?
ಗುರ್ಡಿ ಜಾಟಿಯಾ ಪೊಲೀಸ್ ಠಾಣೆಯಲ್ಲಿ ರಾಜಶ್ರೀ ಅವರ ಸಾವಿನ ಕುರಿತು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದ್ದು, ಅವರ ಸಾವಿಗೆ ಕಾರಣವೇನು ಎಂಬುದನ್ನು ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ. ಆದರೆ, ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಹಿಳಾ ಕ್ರಿಕೆಟ್ ಆಟಗಾರ್ತಿಯ ಮೈಮೇಲೆ ಗಾಯದ ಗುರುತುಗಳಿದ್ದು, ಆಕೆಯ ಕಣ್ಣುಗಳಿಗೂ ಹಾನಿಯಾಗಿದೆ ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ. ಪೊಲೀಸರೂ ಸಹ ಈ ಸಾವಿನ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಕಟ್ಟಿಗೆ ಸಂಗ್ರಹಿಸಲು ತೆರಳಿದ್ದ ಕೆಲ ಸ್ಥಳೀಯರು ಅರಣ್ಯ ರಸ್ತೆಯಲ್ಲಿ ಸ್ಕೂಟರ್ ಮತ್ತು ಹೆಲ್ಮೆಟ್ ಅನ್ನು ಕಂಡು ಮಂಗಳಬಾಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದ್ದು, ಆಕೆಗಾಗಿ ಹುಡುಕಾಟ ಆರಂಭಿಸಿದ ಬಳಿಕ ದುಪಟ್ಟಾ (ಸ್ಕಾರ್ಫ್) ಸಹಾಯದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಕಟಕ್ ಎಸಿಪಿ ಅಮಿತವ್ ಮೊಹಾಪಾತ್ರ ಹೇಳಿದ್ದಾರೆ. ರಾಜಶ್ರೀ ಅವರ ಸ್ಕೂಟರ್ ಅರಣ್ಯದ ಬಳಿ ಪತ್ತೆಯಾಗಿದ್ದು, ಆಕೆಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆ ಭೇಟಿಗೆ ಹೋಗುವುದಾಗಿ ಹೇಳಿದ್ದ ರಾಜಶ್ರೀ
ರಾಜಶ್ರೀ ಸೇರಿದಂತೆ ಸುಮಾರು 25 ಮಹಿಳಾ ಕ್ರಿಕೆಟಿಗರು ಪುದುಚೇರಿಯಲ್ಲಿ ನಡೆಯಲಿರುವ ಮುಂಬರುವ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಾಗಿ ಬಜ್ರಕಬಾಟಿ ಪ್ರದೇಶದಲ್ಲಿ ಒಡಿಶಾ ಕ್ರಿಕೆಟ್ ಸಂಸ್ಥೆ (ಒಸಿಎ) ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಎಲ್ಲರೂ ಹೋಟೆಲ್‌ನಲ್ಲಿ ತಂಗಿದ್ದರು. ಒಡಿಶಾ ರಾಜ್ಯ ಮಹಿಳಾ ಕ್ರಿಕೆಟ್ ತಂಡವನ್ನು ಜನವರಿ 10 ರಂದು ಘೋಷಿಸಲಾಯಿತು. ಆದರೆ ರಾಜಶ್ರೀ ಅವರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿರಲಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಇಂತಹವನು ನಾಯಕನಾಗಬೇಕಾ? ಸಹ ಆಟಗಾರರನ್ನು ನಿಂದಿಸಿದ ಹಾರ್ದಿಕ್ ಪಾಂಡ್ಯ ವಿರುದ್ಧ ನೆಟ್ಟಿಗರು ಗರಂ, ವಿಡಿಯೋ!
ಮರುದಿನ ಆಟಗಾರರು ತಾಂಗಿ ಪ್ರದೇಶದ ಕ್ರಿಕೆಟ್ ಮೈದಾನಕ್ಕೆ ಅಭ್ಯಾಸಕ್ಕಾಗಿ ತೆರಳಿದ್ದರು. ರಾಜಶ್ರೀ ತನ್ನ ತಂದೆಯನ್ನು ಭೇಟಿ ಮಾಡಲು ಪುರಿಗೆ ಹೋಗುವುದಾಗಿ ತನ್ನ ಕೋಚ್‌ಗೆ ತಿಳಿಸಿದ್ದರು. ಆದರೆ ರಾಜಶ್ರೀ ಅವರು ಮನೆಗೂ ತಲುಪಲಿಲ್ಲ. ಬದಲಾಗಿ ಕಾಡಿನಲ್ಲಿ ಶಾವವಾಗಿ ಪತ್ತೆಯಾಗಿದ್ದು, ಹಮವು ಅನುಮಾನಗಳಿಗೆ ಕಾರಣವಾಗಿದೆ.