ಡಬ್ಲ್ಯುಟಿಸಿ ಫೈನಲ್‌: ಗಾಯಾಳು ಕೆಎಲ್ ರಾಹುಲ್ ಬದಲಿಗೆ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಇಶಾನ್ ಕಿಶನ್‌ಗೆ ಸ್ಥಾನ!

ಜೂನ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(WTC) ಫೈನಲ್‌ಗಾಗಿ ಇಶಾನ್ ಕಿಶನ್ ಭಾರತೀಯ ಟೆಸ್ಟ್ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ.
ಇಶಾನ್ ಕಿಶನ್-ಕೆಎಲ್ ರಾಹುಲ್
ಇಶಾನ್ ಕಿಶನ್-ಕೆಎಲ್ ರಾಹುಲ್

ನವದೆಹಲಿ: ಜೂನ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(WTC) ಫೈನಲ್‌ಗಾಗಿ ಇಶಾನ್ ಕಿಶನ್ ಭಾರತೀಯ ಟೆಸ್ಟ್ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ. 

ಗಾಯಾಳು ಕೆಎಲ್ ರಾಹುಲ್ ಬದಲಿಗೆ ಇಶಾನ್ ಕಿಶನ್ ರನ್ನು ಆಯ್ಕೆ ಮಾಡಲಾಗಿದೆ. ಲಖನೌ ಸೂಪರ್ ಜೈಂಟ್ಸ್ ನಾಯಕ ರಾಹುಲ್ ಅವರು ತೊಡೆಯ ಗಾಯದ ಕಾರಣ ಮುಂಬರುವ IPL ಪಂದ್ಯಗಳು ಮತ್ತು WTC ಫೈನಲ್‌ನಿಂದ ಹೊರಗುಳಿದಿದ್ದಾರೆ.

14 ಏಕದಿನ ಮತ್ತು 27 ಟಿ20 ಪಂದ್ಯವನ್ನಾಡಿರುವ ಕಿಶನ್ ಇದುವರೆಗೆ ಯಾವುದೇ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಕೆಎಸ್ ಭರತ್ ನಂತರ ಭಾರತದ ಡಬ್ಲ್ಯುಟಿಸಿ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಆಗಿದ್ದಾರೆ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ, ಭರತ್ ಈ ವರ್ಷದ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂಲಕ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದರು.

ರಾಹುಲ್ ಅವರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಹ ಆಟಗಾರ ಜಯದೇವ್ ಉನದ್ಕತ್ ಅವರು ಗಾಯದ ಕಾರಣ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಮತ್ತು WTC ಫೈನಲ್‌ಗೆ ಅವರ ಲಭ್ಯತೆಯ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ. ಎಡಗೈ ವೇಗದ ಬೌಲರ್ ಉನದ್ಕತ್, ಎಲ್‌ಎಸ್‌ಜಿ ತಂಡದೊಂದಿಗೆ ನೆಟ್ಸ್ ಅಭ್ಯಾಸದ ವೇಳೆ ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದರು.

ಗಾಯಗೊಂಡಿರುವ ಆಟಗಾರರ ಪಟ್ಟಿಗೆ ವೇಗಿ ಉಮೇಶ್ ಯಾದವ್ ಕೂಡ ಸೇರ್ಪಡೆಯಾಗಿದ್ದಾರೆ. ಏಪ್ರಿಲ್ 26ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ವೇಳೆ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಉಮೇಶ್ ಯಾದವ್ KKR ಗಾಗಿ ಆಡಿಲ್ಲ, ಆದರೆ 'ಕಡಿಮೆ ತೀವ್ರತೆಯ ಬೌಲಿಂಗ್' ಅನ್ನು ಪುನರಾರಂಭಿಸಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯಲ್ಲಿ, ಅಜಿಂಕ್ಯ ರಹಾನೆ ಆಡುವ XI ಗೆ ಮರಳಬಹುದು. ರಹಾನೆ ಕೊನೆಯ ಬಾರಿಗೆ 2022ರ ಜನವರಿ ತಿಂಗಳಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲಿದೆ.

ಭಾರತೀಯ ಟೆಸ್ಟ್ ತಂಡ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜೈ ಉನದ್ಕತ್, ಇಶಾನ್ ಕಿಶನ್(ವಿಕೆಟ್ ಕೀಪರ್).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com