ಭಾರತದಲ್ಲೇ ಪಾಕಿಸ್ತಾನ ವಿಶ್ವಕಪ್ ಗೆದ್ದರೆ ಬಿಸಿಸಿಐಗೆ ಕಪಾಳಮೋಕ್ಷ ಮಾಡಿದಂತೆ: ಶಾಹಿದ್ ಅಫ್ರಿದಿ

ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದಲ್ಲಿಯೇ ಕಪ್ ಗೆದ್ದರೆ ಅದು ಬಿಸಿಸಿಐಗೆ ದೊಡ್ಡ ಕಪಾಳಮೋಕ್ಷ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಶಾಹಿದ್ ಅಫ್ರಿದಿ
ಶಾಹಿದ್ ಅಫ್ರಿದಿ

ಇಸ್ಲಾಮಾಬಾದ್: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದಲ್ಲಿಯೇ ಕಪ್ ಗೆದ್ದರೆ ಅದು ಬಿಸಿಸಿಐಗೆ ದೊಡ್ಡ ಕಪಾಳಮೋಕ್ಷ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿದ್ದಾರೆ.

2023ರ ಏಷ್ಯಾಕಪ್​​ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬ ಕಠಿಣ ನಿರ್ಧಾರ ತಾಳಿರುವ ಬಿಸಿಸಿಐ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗೆ ಶಾಹಿದ್ ಅಫ್ರಿದಿ ಈ ರೀತಿಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಮೂಲಕ ಬಿಸಿಸಿಐ ಹಾಗೂ ಪಿಸಿಬಿ ನಡುವಿನ ಗಲಾಟೆಗೆ ಅಫ್ರಿದಿ ಇನ್ನಷ್ಟು ಕಿಚ್ಚು ಹಚ್ಚಿದ್ದಾರೆ.

ಇನ್ನು ಬಿಸಿಸಿಐ ನಿಲುವಿನ ವಿಚಾರವಾಗಿ ಏಷ್ಯಾಕಪ್​ನಲ್ಲಿ ಪಾಲ್ಗೊಳ್ಳುವುದಕ್ಕೆ ಪಾಕಿಸ್ತಾನಕ್ಕೆ ಭಾರತ ತಂಡ ಪ್ರವಾಸ ಕೈಗೊಳ್ಳದಿದ್ದರೆ ವಿಶ್ವಕಪ್​ಗಾಗಿ ಭಾರತಕ್ಕೆ ಹೋಗವುದಿಲ್ಲ ಎಂಬುದಾಗಿ ಹೇಳುವ ಮೂಲಕ ಪಿಸಿಬಿ ಕೂಡ ಪ್ರತೀಕಾರ ತೀರಿಸಿಕೊಂಡಿದೆ. ಆದಾಗ್ಯೂ, ಮಾಜಿ ಕ್ರಿಕೆಟಿಗ ಅಫ್ರಿದಿ ಅವರು ಮ್ಯಾನೇಜ್ಮೆಂಟ್ ಈ ನಿರ್ಧಾರದ ತಳೆಯುವ ಮೊದಲು ಹೆಚ್ಚು ನೈಪುಣ್ಯ ಪ್ರದರ್ಶಿಸಬೇಕು. ಪಾಕಿಸ್ತಾನ ತಂಡವನ್ನು ಭಾರತಕ್ಕೆ ಹೋಗಲು ಬಿಡಬೇಕು ಹಾಗೂ ಅಲ್ಲಿ ನಮ್ಮ ತಂಡ ವಿಶ್ವಕಪ್​ ಗೆಲ್ಲಬೇಕು. ಈ ಮೂಲಕ ಬಿಸಿಸಿಐಗೆ ಕಪಾಳಮೋಕ್ಷ ಮಾಡಿ ಸರಿಯಾದ ಉತ್ತರ ಕೊಡಬೇಕು ಎಂದಿದ್ದಾರೆ.

'ಪಿಸಿಬಿ ಹಠಮಾರಿತನ ತೋರಬಾರದು. ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಹೇಳಬಾರದು. ಅವರು ಯಾಕೆ ಈ ನಿರ್ಧಾರ ತಳೆದಿದ್ದಾರೆ ಎಂಬುದೇ ಗೊತ್ತಿಲ್ಲ. ಪಿಸಿಬಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಂಥ ಸಂಗತಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು.. ಭಾರತಕ್ಕೆ ಹೋಗಿ ಆಟವಾಡಿ. ಟ್ರೋಫಿ ಪಡೆಯಲು ತಂಡದ ಆಟಗಾರರಿಗೆ ಹೇಳಬೇಕು. ಇಡೀ ದೇಶ ಆಟಗಾರರ ಬೆಂಬಲಕ್ಕೆ ಇರುತ್ತದೆ. ಅದು ನಮಗೆ ದೊಡ್ಡ ಗೆಲುವು ಮಾತ್ರವಲ್ಲ, ಬಿಸಿಸಿಐನ ಮುಖಕ್ಕೆ ಕಪಾಳಮೋಕ್ಷ ಎಂದು ಅಫ್ರಿದಿ ಹೇಳಿದ್ದಾರೆ.

ವಿಶ್ವ ಕಪ್​​ನಲ್ಲಿ ಆಡುವ ವಿಚಾರದಲ್ಲಿ ಪಿಸಿಬಿಗೆ ಹೆಚ್ಚಿನ ಆಯ್ಕೆಗಳಿಲ್ಲ. ಏಕದಿನ ವಿಶ್ವಕಪ್​ಗಾಗಿ ನೆರೆಯ ರಾಷ್ಟ್ರಕ್ಕೆ ಪ್ರವಾಸ ಮಾಡುವ ಬಗ್ಗೆ ಸಕಾರಾತ್ಮಕವಾಗಿರಬೇಕು. ನಾವು ಟ್ರೋಫಿಯನ್ನು ಗೆದ್ದ ಬಳಿಕ ನೆರೆಯ ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ನೀಡಬೇಕು. ಭಾರತಕ್ಕೆ ಹೋಗಿ, ಅತ್ಯುತಮ ಕ್ರಿಕೆಟ್ ಆಡಿ ಮತ್ತು ಅದ್ಭುತ ಗೆಲುವನ್ನು ಪಡೆಯಬೇಕು. ಇದು ನಮಗಿರುವ ಉತ್ತಮ ಆಯ್ಕೆ. ನಾವು ಭಾರತಕ್ಕೆ ಹೋಗಬೇಕು, ವಿಶ್ವಕಪ್ ಟ್ರೋಫಿ ಸಮೇತ ಹಿಂತಿರುಗಬೇಕು. ನಾವು ಎಲ್ಲಿ ಬೇಕಾದರೂ ಹೋಗಬಹುದು ಮತ್ತು ವಿಜಯವನ್ನು ಗೆಲ್ಲಬಹುದು ಎಂಬ ಸ್ಪಷ್ಟ ಸಂದೇಶವನ್ನು ಅವರಿಗೆ ನೀಡಬೇಕಾಗಿದೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com