ICC World Cup 2023: ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾಗೆ ರೋಚಕ ಜಯ, ಫೈನಲ್‌ನಲ್ಲಿ ಭಾರತ-ಆಸೀಸ್ ಮುಖಾಮುಖಿ!

2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕಾಂಗರೂ ತಂಡ ದಕ್ಷಿಣ ಆಫ್ರಿಕಾವನ್ನು 3 ವಿಕೆಟ್ ಗಳಿಂದ ಸೋಲಿಸಿತು.
ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್
ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್

2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕಾಂಗರೂ ತಂಡ ದಕ್ಷಿಣ ಆಫ್ರಿಕಾವನ್ನು 3 ವಿಕೆಟ್ ಗಳಿಂದ ಸೋಲಿಸಿತು. ದಕ್ಷಿಣ ಆಫ್ರಿಕಾ ಮತ್ತೊಮ್ಮೆ ವಿಶ್ವಕಪ್ ಸೆಮಿಫೈನಲ್‌ನಂತಹ ದೊಡ್ಡ ವೇದಿಕೆಯ ಮೇಲೆ ಬಂದು 'ಚೋಕರ್ಸ್' ಎಂಬ ಹಣೆಪಟ್ಟಿಯಂತೆ ಆಡಿತು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023ರ ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನವೆಂಬರ್ 19ರಂದು ನಡೆಯಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅದ್ಭುತ ಪ್ರದರ್ಶನ ನೀಡಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 49.4 ಓವರ್ ಗಳಲ್ಲಿ 212 ರನ್ ಗಳಿಸಿ ಆಸ್ಟ್ರೇಲಿಯಕ್ಕೆ ಗೆಲ್ಲಲು 213 ರನ್ ಗಳ ಗುರಿ ನೀಡಿತ್ತು. ದಕ್ಷಿಣ ಆಫ್ರಿಕಾ ಪರ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ 116 ಎಸೆತಗಳಲ್ಲಿ 101 ರನ್‌ಗಳ ಇನಿಂಗ್ಸ್‌ ಆಡಿದರು.

ಡೇವಿಡ್ ಮಿಲ್ಲರ್ ಹೊರತುಪಡಿಸಿ, ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್ (03), ಟೆಂಬಾ ಬವುಮಾ (0), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (06) ಮತ್ತು ಏಡೆನ್ ಮಾರ್ಕ್ರಾಮ್ (10) ರನ್ ಪೇರಿಸಿ 12 ಓವರ್‌ಗಳಲ್ಲಿ ಪೆವಿಲಿಯನ್ ಸೇರಿದರು. ತಂಡ 24 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ಇನ್ನು ಹೆನ್ರಿಕ್ ಕ್ಲಾಸೆನ್ 48 ಎಸೆತಗಳಲ್ಲಿ 47 ರನ್ ಗಳಿಸಿ ತಂಡಕ್ಕೆ ಸ್ವಲ್ಪ ಚೇತರಿಕೆ ತಂದುಕೊಟ್ಟರು. ಇನ್ನು ಆಸ್ಟ್ರೇಲಿಯಾ ಪರ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ತಲಾ 3 ವಿಕೆಟ್ ಪಡೆದರು. ಜೋಶ್ ಹ್ಯಾಜಲ್‌ವುಡ್ ಮತ್ತು ಟ್ರಾವಿಸ್ ಹೆಡ್ ತಲಾ 2 ವಿಕೆಟ್ ಪಡೆದರು. ಒತ್ತಡಕ್ಕೆ ಸಿಲುಕಿದ್ದ ದಕ್ಷಿಣ ಆಫ್ರಿಕಾ ತಂಡ ತತ್ತರಿಸಿದ್ದು ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಸ್ಕೋರ್ ಮಾಡಲು ವಿಫಲವಾಯಿತು.

ದಕ್ಷಿಣ ಆಫ್ರಿಕಾ ನೀಡಿದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡ 47.2 ಓವರ್‌ಗಳಲ್ಲಿ 215 ರನ್ ಗಳಿಸಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 62, ಡೇವಿಡ್ ವಾರ್ನರ್ 29, ಸ್ಟೀವ್ ಸ್ಮಿತ್ 30, ಜೋಶ್ ಇಂಗ್ಲಿಸ್ 28 ರನ್ ಹಾಗೂ ಮಿಚೆಲ್ ಸ್ಟಾರ್ಕ್ ಅಜೇಯ 16 ರನ್ ಪೇರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com