
ಮುಂಬೈ: ಬಹು ನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಘೋಷಣೆ ಮಾಡಲಾಗಿದ್ದು, ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ 15 ಮಂದಿಯ ತಂಡವನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ಇಂದು ನಡೆದ ಭಾರತ ತಂಡದ ಆಯ್ಕೆ ಸಮಿತಿ ಸಭೆಯಲ್ಲಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಯಿತು. ತಂಡದಲ್ಲಿ ಹಾರ್ದಿಕ್ ಪಾಂಡ್ಯಾಗೆ ಉಪನಾಯಕ ಜವಾಬ್ದಾರಿ ನೀಡಲಾಗಿದ್ದು, ಈ ಹಿಂದೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಂಡು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಿಷಬ್ ಪಂತ್ ಗೆ ವಿಕೆಟ್ ಕೀಪರ್ ಬ್ಯಾಟರ್ ಜವಾಬ್ದಾರಿ ನೀಡಲಾಗಿದೆ.
ಆದರೆ ಇದೇ ವಿಭಾಗದಲ್ಲಿ ತಂಡದ ಆಯ್ಕೆ ಬಯಸುತ್ತಿದ್ದ ಕನ್ನಡಿಗ ಕೆಎಲ್ ರಾಹುಲ್ ಗೆ ಅಧ್ಯಕ್ಷ ಅಜಿತ್ ಅಗರ್ಕರ್(Ajit Agarkar) ನೇತೃತ್ವದ ಆಯ್ಕೆ ಸಮಿತಿ ಕೊಕ್ ನೀಡಿದೆ.
ಉಳಿದಂತೆ ತಂಡವನ್ನು ರೋಹಿತ್ ಶರ್ಮ ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯನಾಗಿದ್ದಾರೆ. ಅಂತೆಯೇ ತಂಡದ ವಿಕೆಟ್ ಕೀಪಿಂಗ್ ವಿಭಾಗದಲ್ಲಿ ತಂಡ ಸೇರ್ಪಡೆಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ರಿಷಬ್ ಪಂತ್, ಸಂಜು ಸ್ಯಾಮ್ಸನ್ ಮತ್ತು ಕೆಎಲ್ ರಾಹುಲ್ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ ಸಂಜು ಸ್ಯಾಮ್ಸನ್ ಮತ್ತು ರಿಷಬ್ ಪಂತ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಆಲ್ರೌಂಡರ್ ಕೋಟದಲ್ಲಿ ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಭಾರತ ತಂಡ ಇಂತಿದೆ.
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್
ಅಂದಹಾಗೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿತ್ತು. ಹೀಗಾಗಿ ಏಪ್ರಿಲ್ 30ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ ತನ್ನ ತಂಡವನ್ನು ಪ್ರಕಟಿಸಿತು.
ಸೋಮವಾರ ನ್ಯೂಜಿಲ್ಯಾಂಡ್ ತನ್ನ ತಂಡವನ್ನು ಪ್ರಕಟಿಸಿತ್ತು. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ ಎಂದು ಹೇಳಲಾಗಿದೆ.
Advertisement