
ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಗಾಗಿ ಇಂದು ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿದೆ.
ಮಳೆ ಭೀತಿಯ ನಡುವೆಯೂ ಈ ಪಂದ್ಯವನ್ನು ರಣರೋಚಕ ಪೈಪೋಟಿ ಎಂದೇ ನಿರೀಕ್ಷೆ ಮಾಡಲಾಗಿದ್ದು, ಉಭಯ ತಂಡಗಳ ಅಭಿಮಾನಿಗಳು ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಹೌಸ್ ಫುಲ್ ಆಗಿದೆ. ಬೆಂಗಳೂರಿನ(Bengaluru) ಎಂ ಚಿನ್ನಸ್ವಾಮಿ(M.Chinnaswamy Stadium) ಕ್ರೀಡಾಂಗಣ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಸ್ಥಳವಾಗಿದ್ದು, ಚೇಸಿಂಗ್ ಇದು ಹೇಳಿ ಮಾಡಿಸಿದ ಪಿಚ್ ಆಗಿದೆ.
ಚಿನ್ನಸ್ವಾಮಿಯಲ್ಲಿ ಕೊಹ್ಲಿ ದಾಖಲೆ
ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಇದುವರೆಗೆ 2993 ರನ್ ಬಾರಿಸಿದ್ದಾರೆ. ಜತೆಗೆ ಈ ಬಾರಿಯ ಐಪಿಎಲ್ನಲ್ಲಿಯೂ ಕೊಹ್ಲಿ ಉತ್ತಮವಾಗಿ ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಈ ಬಾರಿ ಕೊಹ್ಲಿ 13 ಪಂದ್ಯ ಆಡಿ 661 ರನ್ ಗಳಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿಯೂ ಇವರ ಬ್ಯಾಟಿಂಗ್ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ.
ಪ್ಲೇಆಫ್ ನಿಟ್ಟಿನಲ್ಲಿ ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯ
ಇನ್ನು ಪ್ಲೇಆಫ್ ನಿಟ್ಟಿನಲ್ಲಿ ಉಭಯ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ನೆಟ್ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್ ಹೊಂದಿದೆ. ಹೀಗಾಗಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಬೇಕಾದರೆ, ಆರ್‌ಸಿಬಿ ಕನಿಷ್ಠ 18 ರನ್ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು ಆಗ ಮಾತ್ರ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ.
ಈ ಎರಡು ಲೆಕ್ಕಾಚಾರದ ಗೆಲುವು ಒಲಿಯದೇ ಹೋದರೆ ಆರ್‌ಸಿಬಿ ನಿರಾಸೆಗೆ ಒಳಗಾಗಲಿದೆ. 5ನೇ ಸ್ಥಾನಿಯಾಗಿ ಟೂರ್ನಿಯಿಂದ ನಿರ್ಗಮಿಸಲಿದೆ. ಚೆನ್ನೈ ಮುನ್ನಡೆಗೆ ಸಾಮಾನ್ಯ ಗೆಲುವು ಸಾಕು. 16 ಅಂಕ ಗಳಿಸಿ 4ನೇ ತಂಡವಾಗಿ ಪ್ಲೇ ಆಫ್ಗೆ ಲಗ್ಗೆ ಇಡಲಿದೆ.
Advertisement