
ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಮಳೆಯಿಂದಾಗಿ ಮೊದಲ ದಿನದಾಟ ಟಾಸ್ ಕೂಡ ಕಾಣದೇ ರದ್ದಾಗಿತ್ತು. ಹೀಗಾಗಿ 2ನೇ ದಿನ ಮಳೆ ಬಿಡುವು ನೀಡಿದ ಹಿನ್ನಲೆಯಲ್ಲಿ ಇಂದು ಪಂದ್ಯ ಆರಂಭವಾಗಿದೆ. ಅದರಂತೆ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭದಲ್ಲೇ ಆಘಾತ ಎದುರಿಸಿದೆ.
ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಕೇವಲ2 ರನ್ ಗಳಿಸಿ ಸೌಥಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ಕೂಡ 9 ಎಸೆತ ಎದುರಿಸಿ ಒಂದೂ ರನ್ ಗಳಿಸದೇ ಔಟಾದರು.
ಮುಂದಿನ ಓವರ್ ನಲ್ಲೇ ಉದಯೋನ್ಮುಖ ಆಟಗಾರ ಸರ್ಫರಾಜ್ ಖಾನ್ ಕೂಡ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇತ್ತೀಚಿನ ವರದಿಗಳ ಬಂದಾಗ 19 ಓವರ್ ನಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 29ರನ್ ಗಳಿಸಿದ್ದು, 12ರನ್ ಗಳಿಸಿರುವ ಯಶಸ್ವಿ ಜೈಸ್ವಾಲ್ ಮತ್ತು 13ರನ್ ಗಳಿಸಿರುವ ರಿಷಬ್ ಪಂತ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ನ್ಯೂಜಿಲೆಂಡ್ ಪರ ಟಿಮ್ ಸೌಥಿ, ಮ್ಯಾಟ್ ಹೆನ್ರಿ ಮತ್ತು ವಿಲಿಯಂ ಓರೌರ್ಕೆ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಕೊಹ್ಲಿ ಬ್ಯಾಟಿಂಗ್ ನೋಡಲು ಆಗಮಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ
ಇನ್ನು ಈ ಪಂದ್ಯದಲ್ಲಿ ಆರ್ ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಕೊಹ್ಲಿ ನಿರಾಸೆ ಮೂಡಿಸಿದರು. ಶೂನ್ಯಕ್ಕೆ ಔಟಾಗುವ ಮೂಲಕ ಕೊಹ್ಲಿ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದು ಅಭಿಮಾನಿಗಳಿಗೆ ತೀರಾ ನಿರಾಸೆಯಾಯಿತು.
Advertisement