
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಚಾಲ್ತಿಯಲ್ಲಿರುವಂತೆಯೇ ಭಾರತ ತಂಡದ ಸ್ಟಾರ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮುಂಬೈ ತಂಡವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಹೌದು.. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಮುಂಬೈ ತಂಡವನ್ನು ತೊರೆದು, ಮುಂಬರುವ ದೇಶೀಯ ಸೀಸನ್ನಲ್ಲಿ ಗೋವಾ ಪರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈಗಾಗಲೇ ಜೈಸ್ವಾಲ್ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಎನ್‌ಒಸಿಗಾಗಿ ಪತ್ರ ಕೂಡ ಬರೆದಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಮಂಗಳವಾರ ಭಾರತದ ಆಟಗಾರನಿಂದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಕೋರಿ ಇಮೇಲ್ ಬಂದಿದ್ದು, ಅವರು ತಮ್ಮ ಇಮೇಲ್‌ನಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಮುಂಬರುವ ಸೀಸನ್ನಲ್ಲಿ ಗೋವಾ ರಾಜ್ಯ ತಂಡದ ಪರ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಮೂಲಗಳು ತಿಳಿಸಿವೆ.
ಗೋವಾ ಸ್ಪಷ್ಟನೆ
ಇನ್ನು ಇತ್ತ ಗೋವಾ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ಸಹ ಈ ಬೆಳವಣಿಗೆಯನ್ನು ದೃಢಪಡಿಸಿದ್ದು, 'ನಾವು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಮಾತನಾಡಿದ್ದೇವೆ. ಅವರು ಮುಂಬರುವ ದೇಶೀಯ ಸೀಸನ್ನಲ್ಲಿ ಗೋವಾ ಪರ ಆಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇದಾಗ್ಯೂ ಅವರಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಸಿಕ್ಕಿಲ್ಲ. ಎನ್ಒಸಿ ಲೆಟರ್ ಸಿಕ್ಕ ಬಳಿಕ ಅವರನ್ನು ಮುಂದಿನ ಸೀಸನ್ಗೆ ಗೋವಾ ತಂಡದಲ್ಲಿ ಸೇರಿಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಜಿಸಿಎ ಕಾರ್ಯದರ್ಶಿ ಶಂಬಾ ನಾಯಕ್ ದೇಸಾಯಿ ತಿಳಿಸಿದ್ದಾರೆ.
23 ವರ್ಷದ ಜೈಸ್ವಾಲ್, ಪ್ರಸ್ತುತ ಮುಂಬೈ ತಂಡದ ಆರಂಭಿಕರಾಗಿದ್ದು, ಗೋವಾ ತಂಡ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿರುವುದರಿಂದ ಜೈಸ್ವಾಲ್ ಅವರಿಗೆ ಇದು ಒಂದು ದೊಡ್ಡ ಹೆಜ್ಜೆಯಾಗಲಿದೆ. ಈಗಾಗಲೇ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಿದ್ಧೇಶ್ ಲಾಡ್ ಅವರಂತಹ ಆಟಗಾರರು ಗೋವಾ ತಂಡ ಸೇರಿದ್ದು, ಇದೀಗ ಜೈಸ್ವಾಲ್ ಕೂಡ ಅವರ ಹೆಜ್ಜೆಗಳನ್ನು ಅನುಸರಿಸಿದ್ದಾರೆ.
Advertisement