
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದ ಗೆಲುವಿನ ಬೆನ್ನಲ್ಲೇ ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ ರ ಪೋಸ್ಟ್ ವ್ಯಾಪಕ ವೈರಲ್ ಆಗುತ್ತಿದೆ.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಗುಜರಾತ್ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು. 170 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ 17.5 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದ ಆರ್ಸಿಬಿ ತಂಡದ ಮಾಜಿ ವೇಗಿ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು. ಪವರ್ಪ್ಲೇನಲ್ಲೇ ದೇವದತ್ ಪಡಿಕ್ಕಲ್ ಹಾಗೂ ಫಿಲ್ ಸಾಲ್ಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಸಿರಾಜ್, ಆರ್ಸಿಬಿ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ವಿಕೆಟ್ ಕಬಳಿಸಿದರು. 4 ಓವರ್ಗಳಲ್ಲಿ ಮೊಹಮ್ಮದ್ ಸಿರಾಜ್ ಕೇವಲ 19 ರನ್ ನೀಡಿ 3 ವಿಕೆಟ್ ಕಬಳಿಸಿದರು.
ಟಾಂಗ್ ಕೊಟ್ಟ ಶುಭ್ ಮನ್ ಗಿಲ್
ಇನ್ನು ಪಂದ್ಯ ಮುಕ್ತಾಯದ ಬಳಿಕ ತಮ್ಮ ತಂಡದ ಗೆಲುವನ್ನು ಸಂಭ್ರಮಿಸುವ ಭರದಲ್ಲಿ ಗುಜರಾತ್ ನಾಯಕ ಶುಭ್ ಮನ್ ಗಿಲ್ ಆರ್ ಸಿಬಿ ಅಭಿಮಾನಿಗಳು ಮತ್ತು ಆರ್ ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಟಾಂಗ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ತವರು ಬೆಂಗಳೂರಿನಲ್ಲಿ ಪಂದ್ಯ ನಡೆದಿದ್ದರಿಂದ ಮೈದಾನದಲ್ಲಿ ಸಾಮಾನ್ಯವಾಗಿಯೇ ಆರ್ ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ಆರ್ ಸಿಬಿ ಪರ ಘೋಷಣೆ ಕೂಡ ಹೆಚ್ಚಿರುತ್ತದೆ. ಆದರೆ ಇದನ್ನೇ ಮುಂದಿಟ್ಟುಕೊಂಡು ಶುಭ್ ಮನ್ ಗಿಲ್ ಪೋಸ್ಟ್ ಮಾಡಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಗಿಲ್ 'ಪಂದ್ಯದ ಮೇಲಷ್ಟೇ ಗಮನ.. ಕೂಗಾಟ.. ಚೀರಾಟದ ಮೇಲಲ್ಲ..' (Eyes on the game, not the noise) ಎಂದು ತಂಡದ ಫೋಟೋ ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಪೋಸ್ಟ್ ಗೆ ತರಹೇವಾರಿ ಕಮೆಂಟ್ ಗಳು ಬರುತ್ತಿವೆ.
Virat kohliಗೇ ಟಾಂಗ್ ಕೊಟ್ರಾ Shubman Gill..?
ಇನ್ನು ಈ ಪೋಸ್ಟ್ ಹಿಂದಿನ ಕಾರಣವನ್ನೂ ನೀಡಿರುವ ಓರ್ವ ಬಳಕೆದಾರ ಗುಜರಾತ್ ಬ್ಯಾಟಿಂಗ್ ವೇಳೆ ಶುಭ್ ಮನ್ ಗಿಲ್ ರನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದಾಗ ಕೊಹ್ಲಿ ಅಗ್ರೆಸ್ಸಿವ್ ಸಂಭ್ರಮ ಮಾಡಿದರು. ಹೀಗಾಗಿ ಪಂದ್ಯದ ಬಳಿಕ ಗಿಲ್ ಇಂತಹ ಕ್ರಿಪ್ಟಿಕ್ ಪೋಸ್ಟ್ ಮಾಡಿದ್ದಾರೆ ಎಂದು ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.
Advertisement