
ಚೆನ್ನೈ: ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಮುಗ್ಗರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 25 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದೆ.
ಹಾಲಿ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದು ಸತತ ಮೂರನೇ ಸೋಲಾಗಿದ್ದು, ಈ ಹಿಂದೆ ಮಾರ್ಚ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಚೆನ್ನೈ ತಂಡ ಬಳಿಕ ತಾನಾಡಿದ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ.
ಮುಂಬೈ ಬಳಿಕ ತವರು ಚೆನ್ನೈನಲ್ಲಿ ಆರ್ ಸಿಬಿ ತಂಡದ ಎದುರು ಚೆನ್ನೈ 50 ರನ್ ಗಳ ಹೀನಾಯ ಸೋಲು ಕಂಡಿತ್ತು. ಬಳಿಕ ರಾಜಸ್ತಾನ ರಾಯಲ್ಸ್ ವಿರುದ್ಧ ಗುವಾಹತಿಯಲ್ಲಿ 6 ರನ್ ಗಳ ವಿರೋಚಿಕತ ಸೋಲು ಕಂಡಿತ್ತು. ಇದೀಗ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ 25 ರನ್ ಗಳ ಅಂತರದಲ್ಲಿ ಸೋಲು ಕಂಡಿದೆ.
ಚೇಸಿಂಗ್ ನಲ್ಲಿ ಮತ್ತೆ ಹಿನ್ನಡೆ
ಇಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 25 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 183 ರನ್ ಕಲೆ ಹಾಕಿತು. ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 51 ಎಸೆತಗಳನ್ನು ಎದುರಿಸಿದ ರಾಹುಲ್ 3 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಿತ 77 ರನ್ ಪೇರಿಸಿದರು.
ರಾಹುಲ್ ಗೆ ಅಭಿಷೇಕ್ ಪೊರಲ್ ಉತ್ತಮ ಸಾಥ್ ನೀಡಿದರು. ಅಭಿಷೇಕ್ ಕೂಡ ಕೇವಲ 20 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 33 ಕಲೆಹಾಕಿ ಜಡೇಜಾ ಬೌಲಿಂಗ್ ನಲ್ಲಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಅಕ್ಸರ್ ಪಟೇಲ್ 21 ರನ್, ಸಮೀರ್ ರಿಜ್ವಿ 20 ರನ್, ಸ್ಚಬ್ಸ್ ಅಜೇಯ 24 ರನ್ ಗಳಿಸಿ ತಂಡದ ಮೊತ್ತ 180ರ ಗಡಿ ದಾಟುವಂತೆ ನೋಡಿಕೊಂಡರು. ಆದರೆ ಆರಂಭಿಕ ಆಟಗಾರ ಜೇಕ್ ಫ್ರೇಸರ್ ಮೆಕ್ ಗ್ರಕ್ ಡಕೌಟ್ ಆಗಿದ್ದು, ಆಶುತೋಷ್ ಶರ್ಮಾ 1 ರನ್ ಗಳಿಸಿ ರನೌಟ್ ಗೆ ಬಲಿಯಾದರು. ಚೆನ್ನೈ ಪರ ಖಲೀಲ್ ಅಹ್ಮದ್ 2 ವಿಕೆಟ್ ಪಡೆದರೆ, ಜಡೇಜಾ, ನೂರ್ ಅಹ್ಮದ್ ಮತ್ತು ಮತೀಶ್ ಪತಿರಾಣಾ ತಲಾ 1 ವಿಕೆಟ್ ಪಡೆದರು.
ಡೆಲ್ಲಿ ನೀಡಿದ 184 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 158ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಚೆನ್ನೈ ಪರ ವಿಜಯ್ ಶಂಕರ್ ಅಜೇಯ 69 ರನ್ ಮತ್ತು ಮಹೇಂದ್ರ ಸಿಂಗ್ ಧೋನಿ ಅಜೇಯ 30 ರನ್ ಗಳಿಸಿ ಅಂತಿಮ ಎಸೆತದವರೆಗೂ ಕ್ರೀಸ್ ನಲ್ಲಿದ್ದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ರಚಿನ್ ರವೀಂದ್ರ (3 ರನ್), ನಾಯಕ ರುತುರಾಜ್ ಗಾಯಕ್ವಾಡ್ (5 ರನ್) ಮತ್ತು ರವೀಂದ್ರ ಜಡೇಜಾ (2 ರನ್) ಒಂದಂಕಿ ಮೊತ್ತಕ್ಕೇ ಔಟಾಗಿದ್ದು ಚೆನ್ನೈಗೆ ದುಬಾರಿಯಾಗಿ ಪರಿಣಮಿಸಿತು. ಸ್ಫೋಟಕ ಬ್ಯಾಟರ್ ಶಿವಂ ದುಬೆ ಕೂಡ 18ರನ್ ಗೇ ವಿಕೆಟ್ ಒಪ್ಪಿಸಿದರು.
175+ target ಭೂತ
ಇನ್ನು ಚೆನ್ನೈ ಚೇಸಿಂಗ್ ವೇಳೆ 175+ ಟಾರ್ಗೆಟ್ ಮುಟ್ಟಲು ಪದೇ ಪದೇ ಪರದಾಡುತ್ತಿದೆ. ಈ ಹಿಂದೆ ಇದೇ ಮೈದಾನದಲ್ಲಿ ಆರ್ ಸಿಬಿ ನೀಡಿದ್ದ 197 ಟಾರ್ಗೆಟ್ ಬೆನ್ನು ಹತ್ತಿದ್ದ ಚೆನ್ನೈ 146 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ 50 ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು. ಇದೀಗ ಮತ್ತೆ 184 ಟಾರ್ಗೆಟ್ ಗುರಿ ಮುಟ್ಟುವಲ್ಲಿ ವಿಫಲವಾಗಿದೆ. ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಬಾರಿ 175+ ಟಾರ್ಗೆಟ್ ಮುಟ್ಟಲು ವಿಫಲವಾದ ತಂಡಗಳಲ್ಲಿ ಚೆನ್ನೈ ಕೂಡ ಒಂದಾಗಿದೆ.
ವಾಸ್ತವವಾಗಿ, ಚೆಪಾಕ್‌ನಲ್ಲಿ ದಿನದ ಪಂದ್ಯಗಳಲ್ಲಿ ಕೇವಲ ಎರಡು ಬಾರಿ ಮಾತ್ರ 180 ಕ್ಕಿಂತ ಹೆಚ್ಚಿನ ಗುರಿಗಳನ್ನು ಬೆನ್ನಟ್ಟಲಾಗಿದೆ. ಮೊದಲನೆಯದು 2012 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಇದೇ ಸಿಎಸ್‌ಕೆ 206 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು. ಎರಡನೆಯದು 2023 ರಲ್ಲಿ, ಸಿಎಸ್‌ಕೆ ವಿರುದ್ಧ ಪಂಜಾಬ್ ಕಿಂಗ್ಸ್ 201 ರನ್ ಗುರಿಯನ್ನು ಬೆನ್ನಟ್ಟಿತ್ತು. ಅಂತೆಯೇ 2021 ರ ಐಪಿಎಲ್ ಆವೃತ್ತಿಯ ನಂತರ CSK 175 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿಲ್ಲ.
Advertisement