
ಬುಧವಾರ ನಡೆದ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡ 58 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ ಆರ್‌ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದಂಡ ವಿಧಿಸಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಸಂಜು ಸ್ಯಾಮ್ಸನ್ ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಯಾಮ್ಸನ್‌ಗೆ ದಂಡ ವಿಧಿಸಲಾಗಿದ್ದು, ರಾಜಸ್ಥಾನ್ ರಾಯಲ್ಸ್ ತಂಡ ಈ ಹಿಂದೆಯೂ ನೀತಿ ಸಂಹಿತೆಯನ್ನು ಉಲ್ಲಂಘಿಸಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ, ತಂಡದ ತಾತ್ಕಾಲಿಕ ನಾಯಕರಾಗಿದ್ದ ರಿಯಾನ್ ಪರಾಗ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು. 'ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ XI ನ ಉಳಿದ ಸದಸ್ಯರಿಗೆ ಆರು ಲಕ್ಷ ರೂ. ಅಥವಾ ಅವರ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗುವುದು. ಯಾವುದು ಕಡಿಮೆಯೋ ಅದು' ಎಂದು ಐಪಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ನೀಡಿದ 218 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಆರ್‌ಆರ್, 19.2 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು.
ಸೋಲಿನ ನಂತರ ಮಾತನಾಡಿದ ಸ್ಯಾಮ್ಸನ್, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿನ ಲೋಪಗಳ ಕುರಿತು ಗಮನಸೆಳೆದರು. ಬೌಲಿಂಗ್‌ನಲ್ಲಿ ನಾವು 15-20 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟೆವು ಎಂದು ಹೇಳಿದ್ದಾಗಿ ESPNcricinfo ವರದಿ ಮಾಡಿದೆ.
'ನಮಗೆ ಮೊಮೆಂಟಮ್ ಅಗತ್ಯವಿದ್ದಾಗ, ವಿಕೆಟ್‌ಗಳನ್ನು ಕಳೆದುಕೊಂಡೆವು. ಶಿಮ್ರಾನ್ ಹೆಟ್ಮೇಯರ್ ಅವರ ಬ್ಯಾಟ್‌ನಿಂದ ಸಿಕ್ಸರ್ ಮತ್ತು ಬೌಂಡರಿ ಬರುತ್ತಲೇ ಇದ್ದವು. ಆದರೆ, ನಾನು ನನ್ನ ವಿಕೆಟ್ ಕಳೆದುಕೊಂಡೆ ಮತ್ತು ಅಲ್ಲಿಯೇ ನಾವು ಪಂದ್ಯವನ್ನು ಕಳೆದುಕೊಂಡೆವು' ಎಂದು ಅವರು ಹೇಳಿದರು.
ಸ್ಯಾಮ್ಸನ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 41 ರನ್ ಗಳಿಸಿದರು. ರಿಯಾನ್ ಪರಾಗ್ ಜೊತೆ 48 ರನ್‌ಗಳ ಜೊತೆಯಾಟ ಆಡಿದರು. ಆದರೆ, ಗುಜರಾತ್‌ನ ಶಿಸ್ತಿನ ಬೌಲಿಂಗ್ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೋಫ್ರಾ ಆರ್ಚರ್ ಅವರ ಅದ್ಭುತ ಆರಂಭಕ್ಕೆ ಆರ್‌ಆರ್ ನಾಯಕ ಪ್ರಶಂಸೆ ವ್ಯಕ್ತಪಡಿಸಿದರು.
Advertisement