
ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬೆಂಗಳೂರನಲ್ಲಿ ನಡೆದ ಐಪಿಎಲ್ ಪಂದ್ಯ ಹಲವು ನಾಟಕೀಯ ಸನ್ನಿವೇಶಗಳಿಗೆ ವೇದಿಕೆಯಾಗಿತ್ತು. ಒಂದೆಡೆ ಭರ್ಜರಿ ಆರಂಭ ಪಡೆದ ಆರ್ ಸಿಬಿ ಅಲ್ಪ ಮೊತ್ತಕ್ಕೆ ಕುಸಿದರೆ ಮತ್ತೊಂದೆಡೆ ಕಳಪೆ ಆರಂಭದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಜಯ ಗಳಿಸಿತು.
ಈ ನಡುವೆ ಮೈದಾನದಲ್ಲಿ ವಿರಾಟ್ ಕೊಹ್ಲಿ ತಮ್ಮದೇ ತಂಡದ ಆಟಗಾರರ ವಿರುದ್ಧ ಕೋಪಗೊಂಡ ಘಟನೆ ಕೂಡ ನಡೆಯಿತು.
ಹೌದು.. ಡೆಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಕನ್ನಡಿಗ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಡೆಲ್ಲಿ ತಂಡದ ನೆರವಿಗೆ ನಿಂತಿದ್ದರು. ಡೆಲ್ಲಿ ಕೇವಲ 30 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಕ್ರೀಸ್ ಗೆ ಬಂದ ಕೆಎಲ್ ರಾಹುಲ್ ತಮಗೆ ಸಿಕ್ಕ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡರು.
ಆರಂಭದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದರಾದರೂ, ಬಳಿಕ ತಮ್ಮ ಎಂದಿನ ಸ್ಫೋಟಕ ಆಟ ಮುಂದುವರೆಸಿದರು. ಒಂದು ಹಂತದಲ್ಲಿ ತಾವಾಡಿದ ಮೊದಲ 28 ಎಸೆತಗಳಲ್ಲಿ 29 ರನ್ ಗಳಿಸಿದ್ದ ಕೆಎಲ್ ರಾಹುಲ್ ಬಳಿಕ ಕೇವಲ 25 ಎಸೆತಗಳಲ್ಲಿ ಬರೊಬ್ಬರಿ 64 ರನ್ ಚಚ್ಚಿದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಮೋಘ ಜಯತಂದಿತ್ತರು.
ಪಟಿದಾರ್ ನಾಯಕತ್ವದ ವಿರುದ್ಧ ಕೊಹ್ಲಿ ಕೋಪ
ಇನ್ನು ಈ ಪಂದ್ಯದಲ್ಲಿ ಆರ್ ಸಿಬಿ ನಾಯಕ ರಜತ್ ಪಟಿದಾರ್ ಕೈಗೊಂಡ ನಿರ್ಣಯಗಳು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದವು. ಇದೇ ವಿಚಾರವಾಗಿ ವಿರಾಟ್ ಕೊಹ್ಲಿ ಕೂಡ ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ರೊಂದಿಗೆ ವಾಗ್ವಾದ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಪಂದ್ಯದ ಕೊನೆಯ ಹಂತದಲ್ಲಿ ರಾಹುಲ್ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ವಿರಾಟ್ ಕೊಹ್ಲಿ ಕೋಚ್ ದಿನೇಶ್ ಕಾರ್ತಿಕ್ ಅವರೊಂದಿಗೆ ಏನೋ ಜೋರಾಗಿ ಕೋಪದಿಂದ ಮಾತನಾಡುತ್ತಿರುವುದು ಕಂಡುಬಂದಿತು. ಪ್ರಮುಖವಾಗಿ ಬೌಲಿಂಗ್ ಬದಲಾವಣೆ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗಿದೆ.
ಸ್ಟ್ರಾಟೆಜಿಕ್ ಟೈಮ್ ಔಟ್ ಸಭೆಯಲ್ಲೂ ಪಾಲ್ಗೊಳ್ಳದ ಕೊಹ್ಲಿ
ಇನ್ನು ಇದು ಇಷ್ಟಕ್ಕೇ ನಿಂತಿಲ್ಲ.. ಅದಾಗಲೇ ಕೋಪಗೊಂಡಿದ್ದ ಕೊಹ್ಲಿ ಅಂತಿಮಸ್ಟ್ರಾಟೆಜಿಕ್ ಟೈಮ್ ಔಟ್ ವೇಳೆ ನಡೆದ ಆರ್ ಸಿಬಿ ತಂಡದ ಚರ್ಚೆಯಲ್ಲೂ ಪಾಲ್ಗೊಳ್ಳಲಿಲ್ಲ. ಅವರು ಹಿಂದೆಯೇ ನಿಂತು ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ.
ವಿಡಿಯೋದಲ್ಲಿ, ಕೊಹ್ಲಿ ಕೆಲವು ನಿರ್ಧಾರಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುವುದನ್ನು ಕಾಣಬಹುದು. ಈ ಬಗ್ಗೆ ಕಾಮೆಂಟೇಟರ್ ಆಕಾಶ್ ಚೋಪ್ರಾ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಮಾತನಾಡಿದರು. ಕೊಹ್ಲಿಗೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾಯಕ ಪಾಟಿದಾರ್ ಅವರಿಗೆ ಹೇಳಬೇಕು, ಏಕೆಂದರೆ ಈಗ ಕೊಹ್ಲಿ ತಂಡದ ನಾಯಕನಲ್ಲ ಎಂದು ಅವರು ಹೇಳಿದ್ದಾರೆ.
Advertisement