
ಮುಂಬೈ: 2025ನೇ ಸಾಲಿನ ಐಪಿಎಲ್ ಟೂರ್ನಿ ಅರ್ಧ ದಾರಿ ಸವೆಸಿರುವಂತೆಯೇ ಇದೀಗ ಭಾರತದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಮೇಲೆ ಮತ್ತೆ ಫಿಕ್ಸಿಂಗ್ ನೆರಳು ಬಿದ್ದಂತಿದೆ. ಇದೇ ಕಾರಣಕ್ಕೆ ಬಿಸಿಸಿಐ ಆಟಗಾರರಿಗೆ ಎಚ್ಚರಿಕೆ ನೀಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 31 ಪಂದ್ಯಗಳು ಪೂರ್ಣಗೊಂಡಿದ್ದು, ಟೂರ್ನಿ ನಡುವೆಯೇ ಇದೀಗ ಫಿಕ್ಸಿಂಗ್ ಪ್ರಯತ್ನ ನಡೆಸಲಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಈ ಬಗ್ಗೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಈಗಾಗಲೇ ಲೀಗ್‌ನ ಎಲ್ಲಾ 10 ತಂಡಗಳಿಗೆ ಎಚ್ಚರಿಕೆ ನೀಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ಫಿಕ್ಸಿಂಗ್ ಭೀತಿ ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಫಿಕ್ಸಿಂಗ್ ಪ್ರಕರಣದ ಅಡಿಯಲ್ಲಿ 2 ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಆಗಿತ್ತು. ಇದೀಗ ಐಪಿಎಲ್ 2025 ಕ್ಕೂ ಮ್ಯಾಚ್ ಫಿಕ್ಸಿಂಗ್ ಭೀತಿ ಎದುರಾಗಿದೆ.
ಆಟಗಾರರಿಗೆ ಎಚ್ಚರಿಕೆ
ಇನ್ನು ಐಪಿಎಲ್ ನ ಎಲ್ಲ ತಂಡಗಳು ಮತ್ತು ಆಟಗಾರರಿಗೆ ಎಚ್ಚರಿಕೆ ನೀಡಿರುವ ಬಿಸಿಸಿಐ, 'ಯಾರಾದರೂ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ತಕ್ಷಣ ವರದಿ ಮಾಡಬೇಕೆಂದು ಸೂಚಿಸಿದೆ. ACSU ಪ್ರಕಾರ, ಪ್ರಸ್ತುತ ಪಂದ್ಯಾವಳಿಯ ಮೇಲೆ ಭ್ರಷ್ಟಾಚಾರದ ಮೋಡಗಳು ಕವಿದಿವೆ. ಇದಕ್ಕಾಗಿ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ, ತಂಡದ ಮಾಲೀಕರು ಮತ್ತು ವೀಕ್ಷಕರ ಕುಟುಂಬಗಳ ಸದಸ್ಯರ ಜೊತೆ ಅಭಿಮಾನಿಗಳಂತೆ ನಟಿಸಿ ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕ ಅವರನ್ನು ಓಲೈಸುವ ಪ್ರಯತ್ನಗಳು ನಡೆಯುತ್ತಿವೆ. ಈ ಮೂಲಕ ಫಿಕ್ಸಿಂಗ್ ನಡೆಸಲು ಯತ್ನಿಸಲಾಗಿದೆ ಎಂದು ವರದಿಯೊಂದು ಹೇಳಿದೆ.
ಯಾರದು ಹೈದರಾಬಾದ್ ಉದ್ಯಮಿ?
ಈ ಕುರಿತು ವರದಿ ಮಾಡಿರುವ ಕ್ರಿಕ್ ಬಜ್ ಸಂಸ್ಥೆ 'ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಪಂದ್ಯಾವಳಿಯಲ್ಲಿ ಭಾಗವಹಿಸುವವರೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಈ ಉದ್ಯಮಿಯು ಈ ಹಿಂದೆಯೂ ಇಂತಹ ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಹೀಗಾಗಿಯೇ ಇದೀಗ ಐಪಿಎಲ್‌ನೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರಿಗೂ ACSU ಎಚ್ಚರಿಕೆ ನೀಡಿದೆ.
ಈ ಉದ್ಯಮಿ ಯಾವುದೇ ರೀತಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೆ ತಕ್ಷಣ ವರದಿ ಮಾಡಿ ಎಂದು ತಿಳಿಸಲಾಗಿದೆ ಎಂದು ವರದಿ ಮಾಡಿದೆ. ಆದರೆ ಆ ಉದ್ಯಮಿ ಯಾರೆಂಬುದನ್ನು ಇನ್ನೂ ಸಹ ಬಹಿರಂಗಪಡಿಸಲಾಗಿಲ್ಲ. ಆದರೆ ಈ ಉದ್ಯಮಿ ಬುಕ್ಕಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎಂಬುದು ಈಗಾಗಲೇ ಖಚಿತವಾಗಿದೆ ಎಂದು ಹೇಳಲಾಗಿದೆ.
ಈ ವ್ಯಕ್ತಿ ತನ್ನನ್ನು ತಾನು ಅಭಿಮಾನಿ ಎಂದು ಹೇಳಿಕೊಂಡು ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಫ್ರಾಂಚೈಸ್ ಮಾಲೀಕರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾನೆ. ಅವರು ತಂಡದ ಹೋಟೆಲ್ ಮತ್ತು ಪಂದ್ಯಗಳ ವೇಳೆಯೂ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಈ ವೇಳೆ ಆಟಗಾರರನ್ನು ಅಥವಾ ಆಟಗಾರರಿಗೆ ಆಪ್ತರಾಗಿರುವವರನ್ನು ತನ್ನ ಖಾಸಗಿ ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದಾನೆ. ತಂಡದ ಸದಸ್ಯರಿಗೆ ಮಾತ್ರವಲ್ಲದೆ ಅವರ ಕುಟುಂಬಗಳಿಗೂ ಉಡುಗೊರೆಗಳನ್ನು ನೀಡಿ ಅವರೊಂದಿಗೆ ಆಪ್ತತೆ ಬೆಳೆಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಆಮಿಷ
ಆಟಗಾರರು, ತರಬೇತುದಾರರು ಮತ್ತು ವೀಕ್ಷಕ ವಿವರಣೆಗಾರರ ಕುಟುಂಬ ಸದಸ್ಯರನ್ನು ಆಭರಣ ಅಂಗಡಿಗಳು ಮತ್ತು ದುಬಾರಿ ಹೋಟೆಲ್‌ಗಳಿಗೆ ಕರೆದೊಯ್ಯಲು ಮುಂದಾಗುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ, ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ವಿದೇಶದಲ್ಲಿ ವಾಸಿಸುವ ಐಪಿಎಲ್ನಲ್ಲಿರುವವರು ಸಂಬಂಧಿಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಹೀಗಾಗಿಯೇ ಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ ಲೀಗ್‌ನ ಎಲ್ಲಾ 10 ತಂಡಗಳಿಗೆ ಎಚ್ಚರಿಕೆ ರವಾನಿಸಿದೆ ಎಂದು ವರದಿಯಾಗಿದೆ.
ಐಪಿಎಲ್ ಫಿಕ್ಸಿಂಗ್ ಇತಿಹಾಸ
2013 ರಲ್ಲಿ ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಗಳು ನಡೆದಿದ್ದವು. ಈ ಸಂಬಂಧ ಕ್ರಿಕೆಟಿಗರಾದ ಶ್ರೀಶಾಂತ್ , ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಲಾಗಿತ್ತು. ಅಲ್ಲದೆ ಫಿಕ್ಸಿಂಗ್ ಸಾಬೀತಾದ ಹಿನ್ನಲೆಯಲ್ಲಿ 2016 ಮತ್ತು 2017 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಲಾಗಿತ್ತು.
Advertisement