
ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಗೆ ಭಾರತ ಪುರುಷರ ತಂಡವನ್ನು ಪ್ರಕಟಿಸಲಾಗಿದ್ದು, ಟೆಸ್ಟ್ ತಂಡದ ನಾಯಕ ಶುಭ್ ಮನ್ ಗಿಲ್ ಕುರಿತು ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.
ಬಹುನಿರೀಕ್ಷಿತ ಏಷ್ಯಾಕಪ್ (Asia Cup 2025) ಟೂರ್ನಿಗೆ ಭಾರತ ತಂಡವನ್ನು (India Squad) ಪ್ರಕಟಿಸಲಾಗಿದ್ದು, ನಾಯಕ ಸೂರ್ಯ ಕುಮಾರ್ ಯಾದವ್ ನೇತೃತ್ವದ 15 ಸದಸ್ಯರುಗಳ ತಂಡವನ್ನು ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮಂಗಳವಾರ ಘೋಷಣೆ ಮಾಡಿದೆ.
ತಂಡದ ಆಯ್ಕೆ ಸಭೆಯಲ್ಲಿ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಟಿ20ಐ ನಾಯಕ ಸೂರ್ಯಕುಮಾರ್ ಯಾದವ್, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಉಪಸ್ಥಿತರಿದ್ದರು. ಬಿಸಿಸಿಐ ಆಯ್ಕೆದಾರರೊಂದಿಗೆ ನಡೆಸಿದ ಸಭೆಯ ನಂತರ ತಂಡವನ್ನು ಘೋಷಿಸಲಾಗಿದೆ.
ಶುಭ್ ಮನ್ ಗಿಲ್ ಗೊಂದಲ ನಿವಾರಣೆ
ತಂಡ ಆಯ್ಕೆ ವಿಚಾರದಲ್ಲಿ ತೀವ್ರ ಗೊಂದಲಕ್ಕೆ ಕಾರಣವಾಗಿದ್ದು ಶುಭ್ ಮನ್ ಗಿಲ್ ಆಯ್ಕೆ. ಗಿಲ್ ರನ್ನು ಆಡಿಸಬೇಕೇ ಅಥವಾ ಬೇಡವೇ ಎಂಬ ಗೊಂದಲವಿತ್ತು. ಆದರೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಈ ಗೊಂದಲಕ್ಕೆ ತೆರೆ ಎಳೆದಿದೆ. ಶುಭಮನ್ ಗಿಲ್ ಅವರನ್ನು ತಂಡದ ಉಪನಾಯಕರನ್ನಾಗಿ ಹೆಸರಿಸಲಾಗಿದೆ.
'ಸ್ಟಾರ್' ಆಟಗಾರನಿಗೆ ಮಣೆ
ಇನ್ನು ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಚ್ಚರಿ ಆಯ್ಕೆ ಎಂಬಂತೆ ವೇಗಿ ಜಸ್ಪ್ರೀತ್ ಬುಮ್ರಾ ರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೆಲ ಪಂದ್ಯಗಳಿಂದ ದೂರ ಉಳಿದಿದ್ದ ಬುಮ್ರಾ ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗುವುದು ಅನಿಶ್ಚಿತತೆಯಲ್ಲಿತ್ತು. ಆದರೆ ಬುಮ್ರಾರನ್ನು ಆಯ್ಕೆಸಮಿತಿ ತಂಡಕ್ಕೆ ಸೇರ್ಪಡೆ ಮಾಡಿದೆ.
ಶ್ರೇಯಸ್ ಅಯ್ಯರ್ ಗೆ ಮತ್ತೆ ನಿರಾಶೆ, ಜೈಸ್ವಾಲ್ ಗೂ ಶಾಕ್
ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್ ಗೆ ಆಯ್ಕೆ ಸಮಿತಿ ಶಾಕ್ ನೀಡಿದ್ದು, ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಿಲ್ಲ. ಅಯ್ಯರ್ ಮಾತ್ರವಲ್ಲದೇ ಯಶಸ್ವಿ ಜೈಸಾಲ್ ಗೂ ಶಾಕ್ ನೀಡಲಾಗಿದೆಯಾದರೂ ಮೀಸಲು ಐವರು ಆಟಗಾರರಲ್ಲಿ ಜೈಸ್ವಾಲ್ ಗೆ ಸ್ಥಾನ ನೀಡಲಾಗಿದೆ.
RCB ಸ್ಟಾರ್ ಗೆ ಖುಲಾಯಿಸಿದ ಅದೃಷ್ಟ
ಇನ್ನು ಕಳೆದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಭರ್ಜರಿ ಪ್ರದರ್ಶನ ನೀಡಿ ತಂಡ ತನ್ನ ಚೊಚ್ಚಲ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಕಾರಣರಾದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಅಂದಹಾಗೆ ಈ ಬಾರಿಯ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಅದರಂತೆ ಭಾರತ, ಪಾಕಿಸ್ತಾನ್, ಯುಎಇ, ಒಮಾನ್ ತಂಡಗಳು ಗ್ರೂಪ್ ಎ ನಲ್ಲಿ ಕಣಕ್ಕಿಳಿದರೆ, ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್ ಹಾಗೂ ಹಾಂಗ್ಕಾಂಗ್ ತಂಡಗಳು ಗ್ರೂಪ್ ಬಿ ನಲ್ಲಿ ಸೆಣಲಿಸಲಿದೆ. ಈ ತಂಡಗಳಲ್ಲಿ 4 ಟೀಮ್ಗಳು ಸೂಪರ್-4 ಹಂತಕ್ಕೇರಲಿದೆ.
ತಂಡ ಇಂತಿದೆ
ಸೂರ್ಯ ಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ್ ಸಿಂಗ್ ರಾಣಾ
Advertisement