

ಮುಂಬೈ: ಕೋಚ್ ಗೌತಮ್ ಗಂಭೀರ್ ಮತ್ತು ಟೀಂ ಇಂಡಿಯಾ ಆಟಗಾರರ ನಡುವಿನ ಶೀಥಲ ಸಮರ ಮುಂದುವರೆದಿರುವಂತೆಯೇ ತಂಡದಲ್ಲಿ ಮಹತ್ವದ ಬದಲಾವಣೆಗೆ ಬಿಸಿಸಿಐ ಮುಂದಾಗಿದ್ದು, ತಂಡದ ಮೆಂಟರ್ ಆಗಿ ಎಂಎಸ್ ಧೋನಿ ಅವರನ್ನು ಕರೆತರುವ ಚಿಂತನೆಯಲ್ಲಿದೆ ಎಂದು ಹೇಳಲಾಗಿದೆ.
ಈ ಕುರಿತು ಕ್ರಿಕೆಟಿಂಗ್ ಮೈಂಡ್ಸ್ ವರದಿ ಮಾಡಿದ್ದು, ಆಟಗಾರರು ಮತ್ತು ಕೋಚ್ ಗೌತಮ್ ಗಂಭೀರ್ ನಡುವಿನ ಹಗ್ಗಜಗ್ಗಾಟ ಮುಂದುವರೆದಿರುವಂತೆಯೇ 2026ರ ಟಿ20 ವಿಶ್ವಕಪ್ ಗೆ ತಂಡವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಿಸಿಸಿಐ ತಂಡದ ಮೆಂಟರ್ ಆಗಿ ಎಂಎಸ್ ಧೋನಿ ಅವರನ್ನು ಕರೆತರುವ ಚಿಂತನೆಯಲ್ಲಿದೆ ಎಂದು ಹೇಳಲಾಗಿದೆ.
2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಎಂಬ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ಭಾರತೀಯ ನಾಯಕ ಎಂಎಸ್ ಧೋನಿ. ಈಗಲೂ ಅವರ ಪರಂಪರೆ ಜೀವಂತವಾಗಿದ್ದು, ಆಟಗಾರರು ಮತ್ತು ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತದೆ.
ಮೂಲಗಳ ಪ್ರಕಾರ 2026ರ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಬಿಸಿಸಿಐ ಈಗಾಗಲೇ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಸಂಪರ್ಕಿಸಿದ್ದು, ತಮ್ಮ ಉದ್ದೇಶ ಸ್ಪಷ್ಟಪಡಿಸಿದೆ ಎಂದು ಹೇಳಲಾಗಿದ್ದು, ಎಂಎಸ್ ಧೋನಿ ಕಡೆಯಿಂದ ಯಾವುದೇ ನಿರ್ಧಾರ ಹೊರಬಿದ್ದಲ್ಲ ಎನ್ನಲಾಗಿದೆ.
ಧೋನಿ ಈಗಾಗಲೇ ಒಮ್ಮೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದು, ಈ ಹಿಂದೆ ಯುಎಇಯಲ್ಲಿ ನಡೆದ 2021 ರ ಟಿ 20 ವಿಶ್ವಕಪ್‌ನಲ್ಲಿ ಅವರು ತಂಡ ಭಾರತಕ್ಕೆ ಮಾರ್ಗದರ್ಶನ ನೀಡಿದ್ದರು. ಆ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ತಲುಪದಿದ್ದರೂ, ಆಟಗಾರರು ಅವರ ಶಾಂತ ಸಲಹೆ ಮತ್ತು ಬುದ್ಧಿವಂತ ಮಾರ್ಗದರ್ಶನವನ್ನು ಶ್ಲಾಘಿಸಿದ್ದರು.
2026ರ ಟಿ20 ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ಈ ಮಹತ್ವದ ಟೂರ್ನಿಯಲ್ಲಿ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಲು ಧೋನಿ ನೆರವಾಗಲಿದ್ದಾರೆ ಎಂಬ ಕಾರಣಕ್ಕೆ ಅವರನ್ನು ತಂಡದ ಮಾರ್ಗದರ್ಶಕರಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಲ್ಲದೆ ಹಾಲಿ ಪ್ರಧಾನ ಕೋಚ್ ಗೌತಮ್ ಗಂಭೀರ್ ಮತ್ತು ತಂಡದ ಆಟಗಾರರ ನಡುವಿನ ಸಂಬಂಧ ಉತ್ತಮವಾಗಿಲ್ಲದ ಕಾರಣ ತಂಡದಲ್ಲಿ ಸಮನ್ವಯತೆ ತರುವ ನಿಟ್ಟಿನಲ್ಲಿ ಧೋನಿಯಂತಹ ತಾಳ್ಮೆಯ ಮಾರ್ಗದರ್ಶಕರ ಅಗತ್ಯವಿದೆ ಎಂಬ ಆಭಿಪ್ರಾಯವೂ ಇದೆ.
ಧೋನಿ-ಗಂಭೀರ್ ಜೋಡಿಗೆ ಬೆಂಬಲ
ಇನ್ನು ಧೋನಿ ಮತ್ತು ಗೌತಮ್ ಗಂಭೀರ್ ಇಬ್ಬರೂ ಈ ಹಿಂದೆ 2011ರ ಏಕದಿನ ವಿಶ್ವಕಪ್ ಟೂರ್ನಿ ಆಡಿದ್ದರು. ಆ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಲು ಇಬ್ಬರೂ ತಮ್ಮದೇ ಪಾತ್ರ ನಿಭಾಯಿಸಿದ್ದರು. ಧೋನಿ ಶಾಂತ ನಾಯಕತ್ವ, ಗಂಭೀರ್ ಆಕ್ರಮಣಶೀಲ ಆಟದ ಸಂಯೋಜನೆ ತಂಡಕ್ಕೆ ನೆರವಾಗಲಿದೆ ಎಂದು ಕೆಲ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಧೋನಿಯ ಅಪ್ರತಿಮ ಗುಣಗಳಿಂದಾಗಿ ಅವರನ್ನು ನೋಡುತ್ತಲೇ ಇದೆ. ಅವರು ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ ಮತ್ತು ಯುವ ಆಟಗಾರರು ಅವರನ್ನು ಆಳವಾಗಿ ಗೌರವಿಸುತ್ತಾರೆ. ಅವರ ಉಪಸ್ಥಿತಿ ಮಾತ್ರ ತಂಡದಲ್ಲಿ ನಂಬಿಕೆಯನ್ನು ಸೃಷ್ಟಿಸುತ್ತದೆ ಎಂದು ಮತ್ತೆಕೆಲವರು ಅಭಿಪ್ರಾಯಪಟ್ಟಿದ್ದಾರೆ.
Advertisement