

ನವದೆಹಲಿ: ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಅವರಿಗೆ ವಿಜಯ್ ಹಜಾರೆ ಟ್ರೋಫಿ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದ ಬಿಸಿಸಿಐ ಇದೀಗ ಟೀಂ ಇಂಡಿಯಾದ ಎಲ್ಲ ಆಟಗಾರರಿಗೂ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದನ್ನು ಕಡ್ಡಾಯಗೊಳಿಸಿದೆ.
ಹೌದು.. ರೋ-ಕೋ ಮಾತ್ರವಲ್ಲ, ಭಾರತದ ಎಲ್ಲಾ ಪ್ರಸ್ತುತ ಆಟಗಾರರು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳನ್ನು ಆಡುವುದು ಕಡ್ಡಾಯ ಎಂದು ಬಿಸಿಸಿಐ ಹೇಳಿದ್ದು, ಡಿಸೆಂಬರ್ 24 ರಿಂದ ಪ್ರಾರಂಭವಾಗುವ ಮುಂಬರುವ ವಿಜಯ್ ಹಜಾರೆ ಟ್ರೋಫಿಯ ಕನಿಷ್ಠ ಎರಡು ಏಕದಿನ ಪಂದ್ಯಗಳನ್ನು ಆಡುವುದನ್ನು ಕಡ್ಡಾಯಗೊಳಿಸಿದೆ.
ಇದು ಪ್ರಸ್ತುತ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡುವ ಎಲ್ಲಾ ಆಟಗಾರರಿಗೆ ಅನ್ವಯವಾಗಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯ ಡಿಸೆಂಬರ್ 19ರಂದು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಬಳಿಕ ಜನವರಿ 11, 2026ರಂದು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ನಡೆಯಲಿದೆ. ಹೀಗಾಗಿ ಈ 2 ಪಂದ್ಯಗಳ ನಡುವೆ ಮೂರು ವಾರಗಳ ಅಂತರವಿದ್ದು, ಹೀಗಾಗಿ ಕ್ರಿಕೆಟ್ ಮಂಡಳಿಯು ತನ್ನ ಎಲ್ಲಾ ಆಟಗಾರರು ದೇಶೀಯ ಕ್ರಿಕೆಟ್ ಆಡಬೇಕೆಂದು ಬಯಸುತ್ತದೆ ಎಂದು ತಿಳಿದುಬಂದಿದೆ.
ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ಈ ಆದೇಶವನ್ನು ಆಟಗಾರರಿಗೆ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸೋಲಿನ ನಂತರ ಕೈಗೊಂಡ ಪರಿಶೀಲನೆಯ ಶಿಫಾರಸುಗಳಿಗೆ ಇದು ಅನುಗುಣವಾಗಿದೆ ಎಂದು ಹೇಳಲಾಗಿದೆ. ಪರಿಶೀಲನೆಯು ಎಲ್ಲಾ ಸ್ವರೂಪಗಳ ದೇಶೀಯ ಕ್ರಿಕೆಟ್‌ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಲಾಗಿದೆ.
ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈಗಾಗಲೇ ಪಂದ್ಯಾವಳಿಗೆ ಲಭ್ಯತೆಯ ಬಗ್ಗೆ ತಿಳಿಸಿದ್ದರೆ, ಇತರ ಸ್ಟಾರ್ ಆಟಗಾರರಾದ ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸಹ ತಮ್ಮ ತಂಡಗಳ ಪರವಾಗಿ ಕನಿಷ್ಠ ಎರಡು ಪಂದ್ಯಗಳನ್ನಾದರೂ ಆಡುವಂತೆ ಕೇಳಲಾಗಿದೆ.
ಶ್ರೇಯಸ್ ಅಯ್ಯರ್ ಭವಿಷ್ಯ
ಏತನ್ಮಧ್ಯೆ ಗಾಯಾಳು ಶ್ರೇಯಸ್ ಅಯ್ಯರ್ ಅವರಿಗೂ ಈ ನಿಯಮ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆಗೂ ಬಿಸಿಸಿಐ ಉತ್ತರಿಸಿದ್ದು, ಗಾಯಾಳು ಶ್ರೇಯಸ್ ಅಯ್ಯರ್ ಫಿಟ್ ಆಗಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಹೇಳಿದೆ.
ಬಿಸಿಸಿಐ ಹೇಳಿದ್ದೇನು?
"ಡಿಸೆಂಬರ್ 24 ರಿಂದ ನ್ಯೂಜಿಲೆಂಡ್ ಏಕದಿನ ಪಂದ್ಯಗಳ ಆರಂಭದವರೆಗೆ ವಿಜಯ್ ಹಜಾರೆ ಟ್ರೋಫಿಯ ಆರು ಸುತ್ತುಗಳನ್ನು ನಿಗದಿಪಡಿಸಲಾಗಿದೆ. ಅವರು ಯಾವ ಎರಡು ಸುತ್ತುಗಳನ್ನು ಆಡಲು ಬಯಸುತ್ತಾರೆ ಎಂಬುದನ್ನು ಆಟಗಾರರು ಮತ್ತು ಅವರ ರಾಜ್ಯ ಸಂಘಗಳು ನಿರ್ಧರಿಸುತ್ತವೆ.
ಆದರೆ ಮುಲ್ಲನ್‌ಪುರದಲ್ಲಿ ನಡೆಯುವ ಎರಡನೇ ಟಿ20ಐ ನಂತರ, ಹಜಾರೆಯನ್ನು ಆಡುವುದು ಐಚ್ಛಿಕವಲ್ಲ ಎಂದು ಆಟಗಾರರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ" ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೆಂಟರ್ ಆಫ್ ಎಕ್ಸಲೆನ್ಸ್ ಆಟಗಾರನನ್ನು ಅನರ್ಹ ಎಂದು ಘೋಷಿಸಿದರೆ ಮಾತ್ರ ವಿನಾಯಿತಿ ನೀಡಲಾಗುತ್ತದೆ. ಆದರೆ ದಕ್ಷಿಣ ಆಫ್ರಿಕಾ ಸರಣಿಯ ನಂತರ ಚೇತರಿಸಿಕೊಳ್ಳಲು ಸಾಕಷ್ಟು ಸಮಯವಿದೆ. ಆಯ್ಕೆ ಸಮಿತಿ ಮತ್ತು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ಕೊಹ್ಲಿ ಮತ್ತು ರೋಹಿತ್ ಅವರನ್ನು ಮಾತ್ರ ಉದಾಹರಣೆಯಾಗಿ ಇತರೆ ಆಟಗಾರರಿಗೆ ತೋರಿಸಲು ಬಯಸುತ್ತಾರೆ ಎಂಬ ನಿರೂಪಣೆಯನ್ನು ವಿರೋಧಿಸಲು ಬಿಸಿಸಿಐನ ಈ ಆದೇಶ ಸಹಾಯ ಮಾಡುತ್ತದೆ ಎನ್ನಲಾಗಿದೆ.
Advertisement