Champions Trophy 2025: ಟ್ರೋಲ್‌ಗಳ ಬಗ್ಗೆ ಯೋಚಿಸುವುದಿಲ್ಲ, ವಾಸ್ತವದಲ್ಲಿ ಇರಬೇಕು- ಮೊಹಮ್ಮದ್ ಶಮಿ
ಗಾಯದಿಂದ ಚೇತರಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ವೇಗಿ ಮೊಹಮ್ಮದ್ ಶಮಿ, ನಿಯಮಿತವಾಗಿ ವಿಕೆಟ್‌ಗಳನ್ನು ಪಡೆಯಲೆಂದೇ ಚಾಂಪಿಯನ್ಸ್ ಟ್ರೋಫಿಗೆ ಬಂದಿದ್ದೇನೆ ಎಂದಿದ್ದಾರೆ. ದುಬೈನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್‌ಗಳ ಜಯ ಸಾಧಿಸಿದೆ. ಗಾಯದಿಂದಾಗಿ ಜಸ್ಪ್ರೀತ್ ಬುಮ್ರಾ ಟೂರ್ನಿಯಿಂದ ಹೊರಗುಳಿದಿದ್ದು, 34 ವರ್ಷದ ವೇಗದ ಬೌಲರ್ ಶಮಿಗೆ ಅವಕಾಶ ಸಿಕ್ಕಿದೆ. ಅವಕಾಶವನ್ನು ಬಳಸಿಕೊಂಡ ಶಮಿ ಐದು ವಿಕೆಟ್ ಕಬಳಿಸಿ ತಂಡಕ್ಕೆ ನೆರವಾಗಿದ್ದಾರೆ.
ಶಮಿ ತವರಿನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನಲ್ಲಿ ಏಳು ಪಂದ್ಯಗಳಲ್ಲಿ 24 ವಿಕೆಟ್ ಪಡೆಯುವ ಮೂಲಕ ಭಾರತದ ಸ್ಟಾರ್ ಬೌಲರ್ ಆಗಿದ್ದರು. ಆದರೆ, ತಂಡವು ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತು.
ಉತ್ತಮ ಫಾರ್ಮ್‌ನಲ್ಲಿದ್ದ ಸಮಯದಲ್ಲಿ ಗಾಯದ ಕಾರಣಕ್ಕಾಗಿ ತಂಡದಿಂದ ಹೊರಗುಳಿಯುವುದು ಕಷ್ಟವಾಗಿತ್ತು. ಆ 14 ತಿಂಗಳು ತುಂಬಾ ಕಷ್ಟಕರವಾಗಿತ್ತು. ಏಕೆಂದರೆ, ನಾನು ಎಲ್ಲ ವಿಷಯಗಳನ್ನು ಪುನರಾವರ್ತಿಸಬೇಕಾಗಿತ್ತು. ಅದು ನಿಮ್ಮನ್ನು ಹಿಂಸಿಸುತ್ತದೆ ಮತ್ತು ನೀವು ನೋವನ್ನು ಅನುಭವಿಸುತ್ತೀರಿ. ಆದರೆ, ಆತ್ಮವಿಶ್ವಾಸವನ್ನು ಮರಳಿ ಪಡೆಯಲು ನಾನು ಆ ದೇಶೀಯ ಪಂದ್ಯಗಳು ಮತ್ತು ನಾಲ್ಕು ಅಂತರರಾಷ್ಟ್ರೀಯ ಪಂದ್ಯಗಳನ್ನು (ಇಂಗ್ಲೆಂಡ್ ವಿರುದ್ಧ) ಪಡೆದುಕೊಂಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
'ನಾನು ಯಾವಾಗಲೂ ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ. ವಿಶೇಷವಾಗಿ ಐಸಿಸಿ ಟೂರ್ನಿಗಳಲ್ಲಿ ಸಾಕಷ್ಟು ರನ್ ವಿಚಾರವಾಗಿ ದುಬಾರಿಯಾದರೂ, ಕನಿಷ್ಠ ಕೆಲವು ವಿಕೆಟ್‌ಗಳನ್ನು ಪಡೆಯಬೇಕು ಎಂದು ಬಯಸುತ್ತೇನೆ' ಎಂದರು.
ಐಸಿಸಿ ODI ಪಂದ್ಯಾವಳಿಗಳಲ್ಲಿ 60 ವಿಕೆಟ್‌ಗಳೊಂದಿಗೆ ಪ್ರಮುಖ ಬೌಲರ್ ಆಗಿರುವ ಶಮಿ, ಮಾಜಿ ವೇಗದ ಜಹೀರ್ ಖಾನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಜಹೀರ್ 59 ವಿಕೆಟ್ ಗಳಿಸಿದ್ದರು.
'ತಂಡದ ಭಾಗವಾಗಿಲ್ಲದಿದ್ದಾಗ ತಂಡದ ಆಟವನ್ನು ನೋಡುವುದು ನನಗೆ ಕಠಿಣವಾಗಿತ್ತು. ನೀವು ಯಾವಾಗಲೂ ನಿಮ್ಮ ಬೌಲಿಂಗ್ ಘಟಕವನ್ನು ಮತ್ತು ತಂಡದ ಸದಸ್ಯರನ್ನು ಮಿಸ್ ಮಾಡಿಕೊಳ್ಳುವಿರಿ. ನಾನು ಸಹ ತಂಡಕ್ಕೆ ಕೊಡುಗೆ ನೀಡಬೇಕು ಎಂದು ಅಂದುಕೊಳ್ಳುತ್ತೇವೆ. ಆದರೆ, ಗಾಯಗೊಂಡಾಗ ಪಂದ್ಯಗಳನ್ನು ನೋಡುವುದನ್ನು ಬಿಟ್ಟು, ಬೇರೇನನ್ನೂ ಮಾಡಲು ಸಾಧ್ಯವಿಲ್ಲ. ಇದು ತುಂಬಾ ನೋವಿನ ವಿಚಾರ' ಎಂದರು
2021ರಲ್ಲಿ ಯುಎಇ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಸೂಪರ್ 12 ಹಂತದಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಎದುರು ಸೋಲು ಕಂಡು ನಾಕ್‌ಔಟ್‌ನಿಂದ ಹೊರಬಿತ್ತು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಭಾರತ ತಂಡದ ಆಟಗಾರರನ್ನು ಟ್ರೋಲ್ ಮಾಡಲಾಗಿತ್ತು. ಮೊಹಮ್ಮದ್ ಶಮಿ ಅವರನ್ನು ಪಾಕಿಸ್ತಾನಕ್ಕೆ ಹೋಗುವಂತೆ ಕೆಲವರು ಹೇಳಿದ್ದರು. ಅಂದಿನ ನಾಯಕ ವಿರಾಟ್ ಕೊಹ್ಲಿ ಮತ್ತು ಅನೇಕ ಮಾಜಿ ಆಟಗಾರರು ಅನುಭವಿ ಬೌಲರ್ ಪರವಾಗಿ ನಿಂತಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಶಮಿ, 'ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮವು ನಿಮ್ಮ ಮನಸ್ಸಿನಲ್ಲಿ ಕೆಲವು ಅನಗತ್ಯ ವಿಚಾರಗಳಿಗೆ ಜಾಗ ಕೊಡುತ್ತದೆ. ನಾನು ಅಂತಹ ವಿಷಯಗಳ ಬಗ್ಗೆ ಯೋಚಿಸಲು ಇಷ್ಟಪಡುವುದಿಲ್ಲ. ಕಳಪೆ ಪ್ರದರ್ಶನದ ಬಗ್ಗೆ ಮಾತ್ರ ಜನರು ನಿಮಗೆ ನೆನಪಿಸುತ್ತಾರೆ ಮತ್ತು ಅದು ನಿಮ್ಮನ್ನು ಹಿಂಸಿಸುತ್ತದೆ. ಆದರೆ, ಒಬ್ಬ ಕ್ರಿಕೆಟಿಗ ಮತ್ತು ಕ್ರೀಡಾಪಟುವಾಗಿ ನಾನು ಹೆಚ್ಚು ಹಿಂತಿರುಗಿ ನೋಡಬಾರದು ಮತ್ತು ವಾಸ್ತವದಲ್ಲಿರಬೇಕು ಮತ್ತು ಭವಿಷ್ಯಕ್ಕಾಗಿ ಯೋಜಿಸಬೇಕು ಎಂದು ನಾನು ಭಾವಿಸುತ್ತೇನೆ' ಎಂದರು.
ಈಗಾಗಲೇ ಬಾಂಗ್ಲಾದೇಶದ ವಿರುದ್ಧ ಜಯ ಸಾಧಿಸಿರುವ ಟೀಂ ಇಂಡಿಯಾ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ