
ತಮ್ಮ ಅಸಾಧಾರಣ ಪ್ರದರ್ಶನದಿಂದಾಗಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬಹುದು. ಆದರೂ, ಅದು ಅಷ್ಟು ಸುಲಭವಲ್ಲ. ತಂಡದಲ್ಲಿ ಸ್ಥಾನ ಪಡೆದ ಬಳಿಕ ದೀರ್ಘಕಾಲ ಉಳಿಯಲು ಮತ್ತಷ್ಟು ಶ್ರಮ ಅಗತ್ಯವಿರುತ್ತದೆ. ಬಹುತೇಕ ಆಟಗಾರರು ತಮಗೆ ಅವಕಾಶ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕುವುದು ಸಾಮಾನ್ಯ ಎನ್ನುವಂತಾಗಿದೆ. ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ವಿಷಯದಲ್ಲೂ ಇದು ತಪ್ಪಿಲ್ಲ.
ಈಗ ನಿವೃತ್ತಿಯಾಗಿರುವ ಮನೋಜ್ ತಿವಾರಿ ಅವರು 2006-07ರ ರಣಜಿ ಟ್ರೋಫಿಯಲ್ಲಿ 99.50 ಸರಾಸರಿ ಹೊಂದಿದ್ದರು. ಆದರೆ, ಗಾಯದ ಕಾರಣದಿಂದಾಗಿ ಅವರ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯಕ್ಕಾಗಿ ದೀರ್ಘಕಾಲ ಕಾಯಬೇಕಾಯಿತು. ಆದಾಗ್ಯೂ, 2008ರಲ್ಲಿ ಅವರಿಗೆ ಭಾರತ ತಂಡಕ್ಕೆ ಆಡುವ ಅವಕಾಶ ಸಿಕ್ಕಿತು. ಅವರು 2011ರಲ್ಲಿ ಚೆನ್ನೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಚೊಚ್ಚಲ ODI ಶತಕ ಬಾರಿಸಿದ್ದರು. ಇದಾದ ಬಳಿಕವೂ ಅವರು ಹಲವು ತಿಂಗಳುಗಳ ಕಾಲ ಬೆಂಚ್‌ನಲ್ಲಿ ಕೂರುವಂತಾಯಿತು.
'ಭಾರತೀಯ ಕ್ರಿಕೆಟ್ ತಂಡದಲ್ಲಿ ನಾಯಕನಿಗೆ ಮಹತ್ವದ ಪಾತ್ರವನ್ನು ನೀಡಲಾಗಿದೆ. ಟೀಮ್ ಇಂಡಿಯಾದಲ್ಲಿ ನಾಯಕನ ನಿರ್ಧಾರಗಳು ಮತ್ತು ಯೋಜನೆಯು ತಂಡದ ಯಶಸ್ಸಿನ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯ ಮಟ್ಟದ ತಂಡಗಳಲ್ಲಿನ ಡೈನಾಮಿಕ್ಸ್ ವಿಭಿನ್ನವಾಗಿರುತ್ತದೆ. ಕಪಿಲ್ ದೇವ್ ಅವರಿಂದ ಹಿಡಿದು ಸುನೀಲ್ ಗವಾಸ್ಕರ್, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ ಮತ್ತು ಅದರಾಚೆಗಿನ ಪ್ರತಿಯೊಬ್ಬ ನಾಯಕನು ತನ್ನದೇ ಆದ ದೃಷ್ಟಿಕೋನ ಮತ್ತು ನಾಯಕತ್ವದ ಶೈಲಿಗೆ ಅನುಗುಣವಾಗಿ ತಂಡವನ್ನು ಮುನ್ನಡೆಸಿದ್ದಾರೆ' ಎಂದಿದ್ದಾರೆ.
'ಶತಕ ಗಳಿಸಿದ ನಂತರ ನನ್ನನ್ನು 14 ಪಂದ್ಯಗಳಿಂದ ಕೈಬಿಡಲಾಗಿತ್ತು. ಶತಕ ಗಳಿಸಿದ ನಂತರವೂ ಆಟಗಾರನನ್ನು ಕೈಬಿಟ್ಟಿದ್ದು ಏಕೆ ಎಂಬ ಉತ್ತರವನ್ನು ತಿಳಿಯಲು ನಾನು ಬಯಸುತ್ತೇನೆ. ಶತಕ ಬಾರಿಸಿದ ನಂತರ ನನ್ನನ್ನು ಹೊಗಳಲಾಯಿತು. ಆದರೆ, ತಂಡದಿಂದ ಕೈಬಿಡುವ ಕುರಿತು ನನಗೆ ಯಾವುದೇ ಸುಳಿವು ಇರಲಿಲ್ಲ. ಆಗ ನಾನು ಸೇರಿದಂತೆ ಯುವಕರು ಭಯಪಡುತ್ತಿದ್ದರು. ನೀವು ಏನನ್ನಾದರೂ ಕೇಳಿದರೆ, ಅದನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳಬೇಕು ಎಂಬುದು ತಿಳಿದಿರಲಿಲ್ಲ' ಎಂದು ತಿಳಿಸಿದ್ದಾರೆ.
'ಆಗ ತಂಡದಲ್ಲಿ ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮಾ ಇದ್ದರು. ಅದಾದ ನಂತರ, ಅವರುಗಳು ರನ್ ಮಾಡಲಿಲ್ಲ. ಇಲ್ಲಿ ನಾನು ಶತಕ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಂತರವೂ ಆರು ತಿಂಗಳ ಕಾಲ 14 ಪಂದ್ಯಗಳಿಂದ ನನ್ನನ್ನು ಕೈಬಿಡಲಾಯಿತು. ತಂಡದಿಂದ ಕೈಬಿಟ್ಟ ಸಮಯದಲ್ಲಿ ಆಟಗಾರನಿಗೆ ಸಾಕಷ್ಟು ಅಭ್ಯಾಸ ಸಿಗುವುದಿಲ್ಲ. ನಾನು ನಿವೃತ್ತಿ ಹೊಂದಲು ಬಯಸಿದ್ದೆ ಆದರೆ ಕುಟುಂಬದ ಜವಾಬ್ದಾರಿಯಿಂದಾಗಿ ಅದು ಸಾಧ್ಯವಾಗಲಿಲ್ಲ' ಎಂದು ತಿಳಿಸಿದ್ದಾರೆ.
Advertisement