
ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಮುಂದುವರೆದಿರುವಂತೆಯೇ ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಆಯೋಜನೆಯಾಗಿದ್ದು, ಈ ಸಂಬಂಧ ಐಸಿಸಿ ವೇಳಾಪಟ್ಟಿ ಪ್ರಕಟವಾಗಿದೆ.
ಹೌದು.. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಂದರೆ ಐಸಿಸಿ (ICC), ಮಹಿಳಾ ಏಕದಿನ ವಿಶ್ವಕಪ್ ( Womens Cricket World Cup 2025) ವೇಳಾಪಟ್ಟಿಯನ್ನು ಪ್ರಕಟಿಸಿದ್ದು,ಈ ಪಂದ್ಯಾವಳಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿವೆ.
ಈ ಪಂದ್ಯಾವಳಿ ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗಲಿದ್ದು, ಇದರ ಫೈನಲ್ ಪಂದ್ಯವು ನವೆಂಬರ್ 2 ರಂದು ನಡೆಯಲಿದೆ.
ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಲ್ಲದೆ ಈ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಪಾಕಿಸ್ತಾನ ಫೈನಲ್‌ಗೆ ಅರ್ಹತೆ ಪಡೆದರೆ, ಈ ಫೈನಲ್ ಪಂದ್ಯ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ.
ಪಂದ್ಯಗಳು ಬೆಂಗಳೂರು, ಇಂದೋರ್, ವಿಶಾಖಪಟ್ಟಣಂ ಮತ್ತು ಗುವಾಹಟಿಯಲ್ಲಿ ನಡೆಯಲಿವೆ. ಪಾಕಿಸ್ತಾನದ ಪಂದ್ಯಗಳು ಕೊಲಂಬೊದಲ್ಲಿ ನಡೆಯಲಿವೆ. ಫೈನಲ್ ಪಂದ್ಯ ಬೆಂಗಳೂರು ಅಥವಾ ಕೊಲಂಬೊದಲ್ಲಿ ನಡೆಯುವಂತೆ ವೇಳಾಪಟ್ಟಿ ರಚಿಸಲಾಗಿದೆ.
2025 ರ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ಐದು ಸ್ಥಳಗಳಲ್ಲಿ ನಡೆಯಲಿದ್ದು, ಬೆಂಗಳೂರಿನ ಎಂ, ಚಿನ್ನಸ್ವಾಮಿ ಕ್ರೀಡಾಂಗಣ, ಎಸಿಎ ಕ್ರೀಡಾಂಗಣ, ಇಂದೋರ್‌ನ ಹೋಳ್ಕರ್ ಕ್ರೀಡಾಂಗಣ, ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಗಣ ಮತ್ತು ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ. ಈ ಪಂದ್ಯಾವಳಿ ಒಂದು ತಿಂಗಳ ಕಾಲ ನಡೆಯಲಿದ್ದು, 8 ತಂಡಗಳು ಭಾಗವಹಿಸಲಿವೆ.
ಟೂರ್ನಿಯ ನಾಕೌಟ್ ಸುತ್ತಿನ ಪಂದ್ಯಗಳು ಅಕ್ಟೋಬರ್ 29 ರಂದು ಗುವಾಹಟಿ ಅಥವಾ ಕೊಲಂಬೊದಲ್ಲಿ ನಡೆಯಲಿವೆ. ಎರಡನೇ ಸೆಮಿಫೈನಲ್ ಪಂದ್ಯ ಅಕ್ಟೋಬರ್ 30 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
8 ತಂಡಗಳು
ಮಹಿಳಾ ವಿಶ್ವಕಪ್‌ಗೆ 8 ತಂಡಗಳು ಅರ್ಹತೆ ಪಡೆದಿದ್ದು, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಭಾಗವಹಿಸಲಿವೆ.
ಶ್ರೀಲಂಕಾದಲ್ಲಿ ಪಾಕ್ ಪಂದ್ಯಗಳು
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನಲೆಯಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಬರುವುದಿಲ್ಲ. ಬದಲಿಗೆ ಪಾಕಿಸ್ತಾನ ತಂಡವು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ತನ್ನ ವಿಶ್ವಕಪ್ ಪಂದ್ಯಗಳನ್ನು ಆಡಲಿದೆ.
ಅದೇ ಸಮಯದಲ್ಲಿ, ಭಾರತ ಸೆಪ್ಟೆಂಬರ್ 30 ರಂದು ಬೆಂಗಳೂರಿನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯಾವಳಿಯನ್ನು ರೌಂಡ್-ರಾಬಿನ್ ಆಧಾರದ ಮೇಲೆ ಆಡಲಾಗುತ್ತದೆ, ಇದರಲ್ಲಿ ಒಟ್ಟು 28 ಲೀಗ್ ಹಂತದ ಪಂದ್ಯಗಳು ಇರುತ್ತವೆ. ಇದರ ನಂತರ, 2 ಸೆಮಿಫೈನಲ್‌ಗಳು ಮತ್ತು ಫೈನಲ್ ಆಡಲಾಗುತ್ತದೆ.
ಅಂದಹಾಗೆ ಇದು 13ನೇ ಮಹಿಳಾ ವಿಶ್ವಕಪ್ ಆಗಿದ್ದು, 2016ರಲ್ಲಿ ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್ ನಡೆದಿತ್ತು. ಇನ್ನು ಕೊನೆಯ ಬಾರಿಗೆ ಅಂದರೆ 2022 ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ಹಾಲಿ ಚಾಂಪಿಯನ್ ಆಗಿ ಪಂದ್ಯಾವಳಿಯನ್ನು ಪ್ರವೇಶಿಸಲಿದೆ. ಏಳು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ.
Advertisement