
ಕೋಲ್ಕತಾ: ಅಭಿಮಾನದ ಹುಚ್ಚು ಹೆಚ್ಚಾದರೆ ಏನೆಲ್ಲಾ ಅನಾಹುತವಾಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದ್ದು, ತಮ್ಮ ನೆಚ್ಚಿನ ಆಟಗಾರನ ನೋಡಲು ಭದ್ರತಾ ಸಿಬ್ಬಂದಿಯನ್ನು ವಂಚಿಸಿ ಕ್ರೀಡಾಂಗಣದೊಳಗೆ ಪ್ರವೇಶ ಮಾಡಿದ್ದ ಅಭಿಮಾನಿ ಇದೀಗ ಜೈಲು ಪಾಲಾಗಿದ್ದಾನೆ.
ಹೌದು.. ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿತು.
ಆರ್ಸಿಬಿ ಪರ ವಿರಾಟ್ ಕೊಹ್ಲಿ 31 ಎಸೆತಗಳಲ್ಲಿ 59 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಯೋರ್ವ ಕ್ರೀಡಾಂಗಣದೊಳಗೆ ನುಗ್ಗಿ ಕೆಲಕಾಲ ಆತಂಕ ಮೂಡಿಸಿದ್ದ.
ಭದ್ರತಾ ಸಿಬ್ಬಂದಿಗೇ ಚಳ್ಳೆಹಣ್ಣು ತಿನ್ನಿಸಿದ ಅಭಿಮಾನಿ!
ಆರ್ ಸಿಬಿ ಪರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಅಭಿಮಾನಿಯೋರ್ವ ವಿರಾಟ್ ಕೊಹ್ಲಿ ಓಡಿ ಬಂದು ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ಈ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಯನ್ನು ತಬ್ಬಿಕೊಂಡು ತಿಳಿ ಹೇಳಿ ವಾಪಸ್ ಕಳುಹಿಸಿದ್ದಾರೆ.
ಭದ್ರತಾ ಸಿಬ್ಬಂದಿ ತಬ್ಬಿಬ್ಬು
ಈ ವೇಳೆ ಕೆಲಕಾಲ ತಬ್ಬಿಬ್ಬಾದ ಸಿಬ್ಬಂದಿಗಳು ಆತನನ್ನು ಹಿಡಿದು ಹೊರಕ್ಕೆ ಕರೆದೊಯ್ದರು. ಈ ವೇಳೆ ಕೊಹ್ಲಿ ಭದ್ರತಾ ಸಿಬ್ಬಂದಿಗೆ ಆತನಿಗೆ ಏನು ಮಾಡಬೇಡಿ ಎಂದು ಸೂಚಿಸಿದರು.
ಕಂಬಿ ಹಾರಿದವ ಈಗ ಕಂಬಿ ಹಿಂದೆ!
ಇದೀಗ ಕ್ರೀಡಾಂಗಣದೊಳಗೆ ಭದ್ರತಾ ನಿಯಮ ಉಲ್ಲಂಘಿಸಿ ಬಂದಿದ್ದ ಅಭಿಮಾನಿಯನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಸೆಕ್ಷನ್ 329 ರ ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ.
ಅಂದಹಾಗೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 175 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಮೊದಲ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ಆಡಿದರು. ಸಾಲ್ಟ್ ಔಟಾದ ನಂತರವೂ ಆಟ ಮುಂದುವರೆಸಿದ ಕೊಹ್ಲಿ ಕೊನೆಯವರೆಗೂ ಇದ್ದು, 36 ಎಸೆತಗಳಲ್ಲಿ 163 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 59 ರನ್ ಗಳಿಸಿ ಇನ್ನೂ 22 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
Advertisement