
ಚೆನ್ನೈ: ಐಪಿಎಲ್ 2025 ಟೂರ್ನಿಯ ಆರ್ ಸಿಬಿ ಮತ್ತು ಚೆನ್ನೈ ನಡುವಿನ ಮೊದಲ ಹೈವೋಲ್ಟೇಜ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದಿರುವ ಸಿಎಸ್ ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ಆರಂಭವಾಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ 2025ರ 8ನೇ ಪಂದ್ಯ ಇದಾಗಿದೆ. ಉಭಯ ತಂಡಗಳು ಮೊದಲ ಪಂದ್ಯವನ್ನು ಗೆದ್ದು ಬೀಗಿದ್ದು, ಎರಡನೇ ಜಯಕ್ಕೆ ಹಾತೊರೆಯುತ್ತಿದೆ. ಆರ್ಸಿಬಿ ಮೊದಲ ಮ್ಯಾಚ್ನಲ್ಲಿ ಕೆಕೆಆರ್ ವಿರುದ್ಧ ಗೆದ್ದರೆ ಸಿಎಸ್ಕೆ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸಿತ್ತು.
ತವರಿನಲ್ಲೇ DKಗೆ ಅಗ್ನಿ ಪರೀಕ್ಷೆ!
ಇನ್ನು ಆರ್ ಸಿಬಿ ಪರ ಕಾರ್ಯ ನಿರ್ವಹಿಸುತ್ತಿರುವ ದಿನೇಶ್ ಕಾರ್ತಿಕ್ ಗೆ ಚೆನ್ನೈ ತವರು ಮೈದಾನವಾಗಿದ್ದು, ತವರಿನಲ್ಲೇ ಚೆನ್ನೈ ತಂಡದ ಎದುರು ತಂಡ ಆಯ್ಕೆ ಮಾಡಿದ್ದಾರೆ. ಹೀಗಾಗಿ ಈ ಪಂದ್ಯ ತಮಿಳುನಾಡು ಮೂಲದ ದಿನೇಶ್ ಕಾರ್ತಿಕ್ ಗೂ ಅಗ್ನಿ ಪರೀಕ್ಷೆಯಾಗಿದೆ.
ಉಭಯ ತಂಡಗಳಲ್ಲಿ ಬದಲಾವಣೆ
ಇನ್ನು ಈ ಪಂದ್ಯಕ್ಕಾಗಿ ಚೆನ್ಮೈ ಮತ್ತು ಬೆಂಗಳೂರು ಎರಡೂ ತಂಡಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಚೆನ್ನೈ ಪರ ರಾಹುಲ್ ತ್ರಿಪಾಠಿ ಮತ್ತು ರಚಿನ್ ರವೀಂದ್ರ ಓಪನರ್ಗಳಾದರೆ ಮೂರನೇ ಕ್ರಮಾಂಕದಲ್ಲಿ ರುತುರಾಜ್ ಗಾಯಕ್ವಾಡ್ ಆಡಲಿದ್ದಾರೆ. ನಂತರದಲ್ಲಿ ಶಿವಂ ದುಬೆ, ದೀಪಕ್ ಕೂಡ ಇದ್ದಾರೆ.
ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕುರ್ರನ್ ಇದ್ದರೆ ಫಿನಿಶಿಂಗ್ ಜವಾಬ್ದಾರಿ ಎಂಎಸ್ ಧೋನಿ ಹೊರಲಿದ್ದಾರೆ. ಉಳಿದಂತೆ ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್ ಹಾಗೂ ಖಲೀಲ್ ಅಹ್ಮದ್ ಪ್ಲೇಯಿಂಗ್ ಇಲೆವೆನ್ನಲ್ಲಿದ್ದಾರೆ. ಅಂತೆಯೇ ಎಲ್ಲಿಸ್ ಬದಲಾಗಿ ಮಹೇಶ್ ಪಥಿರನಾ ತಂಡ ಸೇರ್ಪಡೆಯಾಗಿದ್ದಾರೆ.
ಇತ್ತ ಆರ್ ಸಿಬಿ ತಂಡದಲ್ಲೂ ಬದಲಾವಣೆ ಮಾಡಲಾಗಿದ್ದು, ಆರ್ಸಿಬಿ ಪರ ಓಪನರ್ಗಳಾಗಿ ವಿರಾಟ್ ಕೊಹ್ಲಿ ಜೊತೆ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರೆ. ಇವರು ಕಳೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಇಬ್ಬರೂ ಅರ್ಧಶತಕ ಸಿಡಿಸಿದ್ದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ದೇವದತ್ ಪಡಿಕ್ಕಲ್ ಮೂರನೇ ಸ್ಥಾನದಲ್ಲಿ ಆಡಲಿದ್ದಾರೆ.
ನಾಯಕನ ಪಟ್ಟ ಅಲಂಕರಿಸಿರುವ ರಜತ್ ಪಾಟಿದರ್ ನಾಲ್ಕನೇ ಕ್ರಮಾಂಕದಲ್ಲಿ ಬರಲಿದ್ದಾರೆ. ವಿದೇಶಿ ಸ್ಪೋಟಕ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇವರು ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ವಿಕೆಟ್ ಕೀಪರ್ ಜವಾಬ್ದಾರಿ ಜಿತೇಶ್ ಶರ್ಮಾ ಅವರಿಗೆ ನೀಡಲಾಗಿದ್ದು, ಆಲ್ರೌಂಡರ್ಗಳಾದ ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ನಂತರದ ಸ್ಥಾನದಲ್ಲಿ ಬರಲಿದ್ದಾರೆ. ರಸಿಕ್ ಬದಲಾಗಿ ಭುವನೇಶ್ವರ್ ಕುಮಾರ್ ಸ್ಥಾನ ಪಡೆದಿದ್ದಾರೆ.
ತಂಡಗಳು ಇಂತಿವೆ
ಆರ್ ಸಿಬಿ
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.
ಚೆನ್ನೈ ಸೂಪರ್ ಕಿಂಗ್ಸ್
ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ದೀಪಕ್ ಹೂಡ, ಎಂಎಸ್ ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಧೋನಿ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮಹೇಶ್ ಪಥಿರನಾ, ಖಲೀಲ್ ಅಹ್ಮದ್.
Advertisement