ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಒಂದು ವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಅನ್ನು ಸ್ಥಗಿತಗೊಳಿಸಿದ್ದು, ಕದನ ವಿರಾಮ ಘೋಷಣೆ ಹಿನ್ನೆಲೆಯಲ್ಲಿ ಇದೀಗ ಐಪಿಎಲ್ ಪುನರಾರಂಭಿಸಲು ಯೋಜಿಸಲಾಗುತ್ತಿದೆ. ಇದಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಕ್ಕೆ ಆಘಾತ ಎದುರಾಗಿದ್ದು, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಭಾರತಕ್ಕೆ ಮರಳುವುದು ಅನುಮಾನ ವ್ಯಕ್ತವಾಗಿದೆ.
ಆಸ್ಟ್ರೇಲಿಯಾದ ಹೆಚ್ಚಿನ ಕ್ರಿಕೆಟಿಗರು ಐಪಿಎಲ್ ಅನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಐಪಿಎಲ್ ಮೇ 16ರ ಹೊತ್ತಿಗೆ ಪುನರಾರಂಭವಾಗುವ ಸಾಧ್ಯತೆ ಇದ್ದು, ಫೈನಲ್ ಪಂದ್ಯವನ್ನು ಮೇ 25 ರ ಬದಲಿಗೆ ಮೇ 30ಕ್ಕೆ ನಡೆಸುವ ಸಾಧ್ಯತೆಯಿದೆ ಎಂದು ಬಿಸಿಸಿಐಗೆ ಹತ್ತಿರವಿರುವ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.
ಐಪಿಎಲ್ ತಾತ್ಕಾಲಿಕವಾಗಿ ಸ್ಥಗಿತಗೊಂಡ ನಂತರ ಆಸ್ಟ್ರೇಲಿಯಾದ ಕ್ರಿಕೆಟಿಗರು ತಮ್ಮ ತಮ್ಮ ತವರು ದೇಶಗಳಿಗೆ ಹಿಂತಿರುಗಿದ್ದರು. ಸ್ಟಾರ್ಕ್ ಅವರು ತಮ್ಮ ಪತ್ನಿ ಅಲಿಸಾ ಹೀಲಿ ಅವರೊಂದಿಗೆ ಸಿಡ್ನಿಗೆ ಮರಳಿದ್ದರು. ಈ ವಿಷಯದ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.
ಸ್ಟಾರ್ಕ್ ಅವರ ಮ್ಯಾನೇಜರ್ ನಂತರ ಆಸ್ಟ್ರೇಲಿಯಾದ ನೈನ್ ನ್ಯೂಸ್‌ಗೆ ಐಪಿಎಲ್ ಪಂದ್ಯಾವಳಿ ಪುನರಾರಂಭವಾದರೆ ಅವರು ಭಾರತಕ್ಕೆ ಹಿಂತಿರುಗದೇ ಇರಬಹುದು ಎಂದಿದ್ದಾರೆ.
ದಿ ಏಜ್ ಪ್ರಕಾರ, ಐಪಿಎಲ್ ಪುನರಾರಂಭವಾದಾಗ ಭಾರತಕ್ಕೆ ಹಿಂತಿರುಗದಿರಲು ನಿರ್ಧರಿಸಿದರೆ, ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತನ್ನ ಆಟಗಾರರ ಬೆಂಬಲಕ್ಕೆ ನಿಲ್ಲುತ್ತದೆ ಎನ್ನಲಾಗಿದೆ.
ಈಗಾಗಲೇ ಪ್ಲೇಆಫ್‌ನಿಂದ ಹೊರಗುಳಿದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ಯಾಟ್ ಕಮ್ಮಿನ್ಸ್ ಮತ್ತು ಟ್ರಾವಿಸ್ ಹೆಡ್ ಕೂಡ ಐಪಿಎಲ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಜೂನ್ 11ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ಗೆ ತಯಾರಿ ನಡೆಸಲು ಆಸ್ಟ್ರೇಲಿಯಾದಲ್ಲಿಯೇ ಉಳಿಯಲು ನಿರ್ಧರಿಸಬಹುದು.
ನ್ಯೂಜಿಲೆಂಡ್ ತಂಡದ ಹೆಚ್ಚಿನ ಸದಸ್ಯರು ಈಗಾಗಲೇ ತವರಿಗೆ ಮರಳಿದ್ದು, ಕ್ರಿಕೆಟ್ ದಕ್ಷಿಣ ಆಫ್ರಿಕಾ ತನ್ನ ಆಟಗಾರರು ಮೇ 25 ರ NOC ಗಡುವನ್ನು ಮೀರಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಬಹುದೇ ಎಂದು ಇನ್ನೂ ನಿರ್ಧರಿಸಿಲ್ಲ.
Advertisement