ವಡೋದರಾ: ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದ ವೇಳೆ ಡಬ್ಲ್ಯುಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿಕೆಟ್ ಕೀಪರ್-ಬ್ಯಾಟರ್ ಲಿಜೆಲ್ಲೆ ಲೀ ಅವರಿಗೆ ಬುಧವಾರ ಪಂದ್ಯ ಶುಲ್ಕದ ಶೇ 10ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.
'ಪಂದ್ಯದ ವೇಳೆ ಕ್ರಿಕೆಟ್ ಉಪಕರಣಗಳ ದುರುಪಯೋಗಕ್ಕೆ ಸಂಬಂಧಿಸಿದ ನೀತಿ ಸಂಹಿತೆಯ ಆರ್ಟಿಕಲ್ 2.2ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಲೀ ಒಪ್ಪಿಕೊಂಡಿದ್ದಾರೆ. ಲೆವೆಲ್ 1 ಉಲ್ಲಂಘನೆಗಳಿಗೆ, ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ' ಎಂದು WPL ಪ್ರಕಟಣೆ ತಿಳಿಸಿದೆ.
ಮುಂಬೈ ಇಂಡಿಯನ್ಸ್ ನೀಡಿದ್ದ 155 ರನ್‌ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಲೀ ಅವರನ್ನು ಮೂರನೇ ಅಂಪೈರ್ ಪರಿಶೀಲನೆಯ ನಂತರ 46 ರನ್‌ಗಳಿಗೆ ಸ್ಟಂಪ್ಡ್ ಔಟ್ ಎಂದು ಘೋಷಿಸಲಾಯಿತು.
ವಿಕೆಟ್ ಕೀಪರ್ ರಾಹಿಲಾ ಫಿರ್ದೌಸ್ ಬೇಲ್ಸ್ ಔಟ್ ಮಾಡಿದಾಗ ಲೀ ಅವರ ಬ್ಯಾಟ್ ಕ್ಷಣಾರ್ಧದಲ್ಲಿ ಕ್ರೀಸ್‌ನಿಂದ ಮೇಲಕ್ಕೆತ್ತಲ್ಪಟ್ಟಿತ್ತು. ಇದರಿಂದಾಗಿ ಈ ಆವೃತ್ತಿಯ ಮೂರನೇ ಅರ್ಧಶತಕಕ್ಕೆ ನಾಲ್ಕು ರನ್‌ಗಳು ಬಾಕಿ ಇರುವಾಗ ಅವರು ಔಟ್ ಆದರು.
ಈ ನಿರ್ಧಾರದಿಂದ ಅತೃಪ್ತರಾದ ಲೀ, ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದ ವೇಳೆ ಪ್ರತಿಕ್ರಿಯೆ ನೀಡಿದ ಅವರು, 'ನೋಡಿ, ಇದು ಕೀಪರ್‌ನಿಂದ ಉತ್ತಮ ನಿರ್ಧಾರವಾಗಿತ್ತು. ಆದರೆ ಅದರ ಬಗ್ಗೆ ನಾನು ಹೇಳಲು ಬಯಸುವುದಿಲ್ಲ' ಎಂದಿದ್ದರು.
ಆದಾಗ್ಯೂ, ನಾಯಕಿ ಜೆಮಿಮಾ ರೊಡ್ರಿಗಸ್ 37 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ವಿರುದ್ಧ ಗೆಲುವಿನ ನಗೆ ಬೀರಿತು. ಏಳು ವಿಕೆಟ್‌ಗಳ ಗೆಲುವಿನತ್ತ ತಂಡವನ್ನು ಮುನ್ನಡೆಸಿದರು.
ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ ಸ್ಥಾನಕ್ಕಾಗಿ ದೃಢ ಪೈಪೋಟಿಯಲ್ಲಿದೆ. ನಾಲ್ಕು ತಂಡಗಳು ಸದ್ಯ ತಲಾ ಎರಡೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ನಾಲ್ಕು ಅಂಕಗಳನ್ನು ಗಳಿಸಿವೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ 5 ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
Advertisement