

ಜೂನ್ ಮತ್ತು ಜುಲೈನಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ಮುಂಚಿತವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಭಾರತದ T20I ನಾಯಕ ಸ್ಥಾನದಿಂದ ವಜಾಗೊಳಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ಧರಿಸಿದೆ. ಮಾರ್ಚ್‌ನಲ್ಲಿ ತವರಿನಲ್ಲಿ ಭಾರತದ T20 ವಿಶ್ವಕಪ್ ಪ್ರಶಸ್ತಿಗೆ ಸೂರ್ಯಕುಮಾರ್ ತಂಡವನ್ನು ಮುನ್ನಡೆಸಿದ್ದರೂ, ಅವರ ಫಾರ್ಮ್ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಗುರುವಾರ ಸಭೆ ಸೇರಲಿದ್ದು, ಅಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಪದಚ್ಯುತಗೊಳಿಸುವ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಲಾಗುವುದು ಎನ್ನಲಾಗಿದೆ.
ಭಾರತದ ಹೊಸ T20I ನಾಯಕನ ಘೋಷಣೆ
ಜುಲೈ 2024 ರಲ್ಲಿ ನಾಯಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಸೂರ್ಯಕುಮಾರ್ ಅವರ ಪ್ರದರ್ಶನ ಕುಸಿದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. 13 ಇನಿಂಗ್ಸ್‌ಗಳಲ್ಲಿ ಕೇವಲ 270 ರನ್ ಗಳಿಸಿದ್ದಾರೆ.
ಇದರಿಂದಾಗಿ ಆಯ್ಕೆದಾರರಿಗೆ ದಿಕ್ಕು ತೋಚದಂತಾಗಿದೆ. ಸೂರ್ಯಕುಮಾರ್ ಅವರನ್ನು ನಾಯಕ ಸ್ಥಾನದಿಂದ ತೆಗೆದುಹಾಕುವುದಲ್ಲದೆ, ಅವರು ಬ್ಯಾಟ್ಸ್‌ಮನ್ ಆಗಿ ಕೂಡ ತಂಡಕ್ಕೆ ಆಯ್ಕೆಯಾಗುವುದಿಲ್ಲ. ಅವರ ಬದಲಿ ಆಟಗಾರನನ್ನು ಘೋಷಿಸಲು ಬಿಸಿಸಿಐ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯೊಂದಿಗೆ ಸಮಾಲೋಚಿಸಲಿದೆ.
'ಆಯ್ಕೆ ಸಮಿತಿ, ಬಿಸಿಸಿಐ ಮತ್ತು ತಂಡದ ಆಡಳಿತ ಮಂಡಳಿ, ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಸಮಾಲೋಚಿಸಿ, ಭಾರತಕ್ಕೆ ಹೊಸ ನಾಯಕನ ಅಗತ್ಯವಿದೆ ಎಂದು ನಿರ್ಧರಿಸಿದೆ. ಸೂರ್ಯ ನಾಯಕತ್ವದಲ್ಲಿ ತಂಡ ಟಿ20 ವಿಶ್ವಕಪ್ ಗೆದ್ದಿತು. ಆದರೆ, ಅವರ ಫಾರ್ಮ್ ಮತ್ತು ತಂಡದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಮುಂದುವರಿಯುವ ಸಮಯ ಬಂದಿದೆ ಎಂದು ಭಾವಿಸಲಾಗಿದೆ. ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಮತ್ತು ಈ ನಿರ್ಧಾರವನ್ನು ಶೀಘ್ರದಲ್ಲೇ ಸೂರ್ಯ ಅವರಿಗೆ ತಿಳಿಸಲಾಗುವುದು' ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಮೂವರು ಆಟಗಾರರು
ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಾರ, ಭಾರತದ ಮುಂದಿನ ಟಿ20 ನಾಯಕರನ್ನಾಗಿ ನೇಮಿಸಲು ಇಬ್ಬರು ಸ್ಪರ್ಧಿಗಳಿದ್ದಾರೆ. ಶ್ರೇಯಸ್ ಅಯ್ಯರ್ ಮತ್ತು ತಿಲಕ್ ವರ್ಮಾ ಮುಂದಿನ ಟಿ20 ನಾಯಕರಾಗಲು ಸ್ಪರ್ಧಿಗಳಾಗಿದ್ದಾರೆ. ಆದಾಗ್ಯೂ, ನಾಯಕತ್ವದ ಆಯ್ಕೆ ಸರಳವಾದದ್ದಲ್ಲ.
ಸೂರ್ಯ ಬದಲಿಗೆ ಶ್ರೇಯಸ್ ಅಯ್ಯರ್ ಇದೀಗ ಸ್ಪಷ್ಟ ಆಯ್ಕೆಯಾಗಿ ಕಾಣುತ್ತಿದ್ದಾರೆ. ಅಯ್ಯರ್ ಸದ್ಯ ಪಂಜಾಬ್ ಕಿಂಗ್ಸ್ (PBKS) ತಂಡದ ನಾಯಕರಾಗಿದ್ದಾರೆ. ಅವರು ಕೂಡ ಸೂರ್ಯಕುಮಾರ್ ಯಾದವ್ ಸಾಮಾನ್ಯವಾಗಿ ಆಡುವ 4ನೇ ಕ್ರಮಾಂಕದಲ್ಲಿ ಆಡುತ್ತಾರೆ. ಅಯ್ಯರ್ ಇಲ್ಲಿಯವರೆಗೆ 14 ಟೆಸ್ಟ್, 76 ಏಕದಿನ ಮತ್ತು 51 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಯಾದವ್‌ಗೆ ಹತ್ತಿರದ ಬದಲಿ ಆಟಗಾರನಾಗಿ ಕಾಣುತ್ತಿದ್ದಾರೆ.
ಮತ್ತೊಂದೆಡೆ, ಎಡಗೈ ಬ್ಯಾಟರ್ ತಿಲಕ್ ವರ್ಮಾ ಕೂಡ ಆಗಿರಬಹುದು. ಅವರ ವಯಸ್ಸನ್ನು ಪರಿಗಣಿಸಿ ಆಯ್ಕೆ ಸಮಿತಿಯಲ್ಲಿ ಹಲವರು ಅವರನ್ನು ಸೂಕ್ತ ಅಭ್ಯರ್ಥಿ ಎಂದು ಭಾವಿಸುತ್ತಿದ್ದಾರೆ ಎನ್ನಲಾಗಿದೆ.
'ಶ್ರೀಲಂಕಾದಲ್ಲಿ ನಡೆಯಲಿರುವ ಭಾರತ ಎ ಸರಣಿಗೆ ತಿಲಕ್ ಅವರನ್ನು ನಾಯಕನನ್ನಾಗಿ ಮಾಡಲಾಗಿದೆ. ಇದರಿಂದಾಗಿ ಅವರ ನಾಯಕತ್ವದ ಅರ್ಹತೆಯನ್ನು ಪರಿಶೀಲಿಸಬಹುದು' ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. 23 ವರ್ಷದ ವರ್ಮಾ ಮುಂಬೈ ಇಂಡಿಯನ್ಸ್ ತಂಡದ ದೀರ್ಘಕಾಲೀನ ಸದಸ್ಯರಾಗಿದ್ದಾರೆ. ಪಾಕಿಸ್ತಾನ ವಿರುದ್ಧ ಭಾರತದ 2025ರ ಏಷ್ಯಾ ಕಪ್ ಫೈನಲ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಗೆಲುವಿಗೆ ಕಾರಣರಾಗಿದ್ದರು.
2024ರಲ್ಲಿ ಕೆಕೆಆರ್ ತಂಡದ ನಾಯಕರಾಗಿದ್ದ ಶ್ರೇಯಸ್ ಬಗ್ಗೆ ಗಂಭೀರ್ ಕೆಲವು ಅನುಮಾನಗಳನ್ನು ಹೊಂದಿದ್ದಾರೆಂದು ತಿಳಿದುಬಂದಿದೆ. ಆಗ ಅವರು ಕೆಕೆಆರ್‌ನ ಮೆಂಟರ್ ಆಗಿದ್ದರು.
ಇನ್ನು ಈ ರೇಸ್‌ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಕೂಡ ಇದ್ದು, ಇವರಿಬ್ಬರು ದೀರ್ಘಕಾಲದವರೆಗೆ ಸ್ಥಿರವಾಗಿರಬಹುದೆಂದು ಆಯ್ಕೆದಾರರು ಮನವರಿಕೆ ಮಾಡಿಕೊಂಡಿಲ್ಲ ಎಂದು ವರದಿ ತಿಳಿಸಿದೆ.
Advertisement