

ನವದೆಹಲಿ: ಮುಂಬರುವ ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು ಆಫ್ಘನ್ ಸರಣಿಯಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ ಮತ್ತು ಜಸ್ ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಭಾರತ ತಂಡವನ್ನು ಪ್ರಕಟಿಸಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿರುವುದು ತಂಡದ ಬಲ ಹೆಚ್ಚಿಸುವಂತೆ ಮಾಡಿದೆ.
ಗಾಯದ ಸಮಸ್ಯೆಯಿಂದಾಗಿ ಅಫ್ಘಾನಿಸ್ತಾನ ವಿರುದ್ಧದ ಇತ್ತೀಚಿನ ಏಕದಿನ ಸರಣಿಯಿಂದ ಹೊರಗುಳಿದಿದ್ದ ಕೊಹ್ಲಿ, ಸಂಪೂರ್ಣ ಫಿಟ್ ಆಗಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಮರು ಆಯ್ಕೆಯಾಗಿದ್ದಾರೆ.
ಮತ್ತೊಂದೆಡೆ, 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಮೊದಲ ಬಾರಿಗೆ ಬುಮ್ರಾ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ಭಾರತದ ವೇಗದ ದಾಳಿಗೆ ಮತ್ತಷ್ಟು ಬಲ ತುಂಬುವ ನಿರೀಕ್ಷೆಯಿದೆ.
ಆಯ್ಕೆ ಸಮಿತಿಯು ಅಫ್ಘಾನಿಸ್ತಾನ ವಿರುದ್ಧ ಆಡಿದ್ದ ತಂಡದ ಬಹುತೇಕ ಆಟಗಾರರನ್ನು ಉಳಿಸಿಕೊಂಡಿದ್ದು, ಕೆಲವು ಮಹತ್ವದ ಬದಲಾವಣೆಗಳೂ ಗಮನ ಸೆಳೆದಿವೆ. ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ಈ ಬಾರಿ ಅವಕಾಶ ಸಿಕ್ಕಿಲ್ಲ ಎನ್ನಲಾಗಿದೆ. ಅನುಭವಿ ಬ್ಯಾಟರ್‌ಗಳ ಸಂಯೋಜನೆಗೆ ಆದ್ಯತೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕೊಹ್ಲಿಯ ವಾಪಸಾತಿಯಿಂದ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಸ್ಥಿರತೆ ದೊರೆಯಲಿದ್ದು, ಬುಮ್ರಾ ಅವರ ಮರಳುವಿಕೆ ತಂಡದ ಬೌಲಿಂಗ್ ದಾಳಿಗೆ ಹೆಚ್ಚುವರಿ ಬಲ ನೀಡಲಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಪ್ರಮುಖ ಐಸಿಸಿ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈ ಸರಣಿಯನ್ನು ಭಾರತ ಮಹತ್ವದ ಸಿದ್ಧತಾ ಹಂತವಾಗಿ ಪರಿಗಣಿಸಿದೆ.
ಅಂದಹಾಗೆ ಭಾರತ ತಂಡ ಜುಲೈ 14ರಿಂದ 19ರವರೆಗೆ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಯು ತಂಡದ ಸಂಯೋಜನೆ ಹಾಗೂ ಬೆಂಚ್ ಬಲವನ್ನು ಪರೀಕ್ಷಿಸಲು ಉತ್ತಮ ಅವಕಾಶವಾಗಲಿದೆ.
ಬ್ರಾರ್ ಗೆ ಮತ್ತೊಂದು ಅವಕಾಶ
ಇನ್ನು ಆಫ್ಘಾನಿಸ್ತಾನ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಗುರ್ನೂರ್ ಬ್ರಾರ್ ಅಮೋಘ ಪ್ರದರ್ಶನ ನೀಡಿದ್ದರು. ಇದೇ ಪ್ರದರ್ಶನ ಅವರಿಗೆ ಮತ್ತೊಂದು ಪ್ರಮುಖ ಅವಕಾಶ ದೊರೆಯುವಂತೆ ಮಾಡಿದ್ದು, ಇಂಗ್ಲೆಂಡ್ ಪ್ರವಾಸಕ್ಕೂ ಬ್ರಾರ್ ಆಯ್ಕೆಯಾಗಿದ್ದಾರೆ. ಉಳಿದಂತೆ ಅನುಭವಿ ಆಟಗಾರ ಶ್ರೇಯಸ್ ಅಯ್ಯರ್, ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಇಂತಿದೆ
ಶುಭ್ ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಶ್ ದೀಪ್ ಸಿಂಗ್ ಮತ್ತು ಗುರ್ನೂರ್ ಬ್ರಾರ್
ಜುಲೈ 14, 2026 (ಮಂಗಳವಾರ) ಮೊದಲ ಏಕದಿನ ಪಂದ್ಯ
ಸ್ಥಳ: ಎಡ್ಜ್‌ಬಾಸ್ಟನ್, ಬರ್ಮಿಂಗ್‌ಹ್ಯಾಮ್
ಸಮಯ: ಭಾರತೀಯ ಕಾಲಮಾನ ಸಂಜೆ 3:30 ಗಂಟೆಗೆ ಆರಂಭ
ಜುಲೈ 16, 2026 (ಗುರುವಾರ) ಎರಡನೇ ಏಕದಿನ ಪಂದ್ಯ
ಸ್ಥಳ: ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
ಸಮಯ: ಭಾರತೀಯ ಕಾಲಮಾನ ಸಂಜೆ 5:30 ಗಂಟೆಗೆ ಆರಂಭ
ಜುಲೈ 19, 2026 (ಭಾನುವಾರ) – ಮೂರನೇ ಏಕದಿನ ಪಂದ್ಯ
ಸ್ಥಳ: ಲಾರ್ಡ್ಸ್ ಕ್ರೀಡಾಂಗಣ, ಲಂಡನ್
ಸಮಯ: ಭಾರತೀಯ ಕಾಲಮಾನ ಸಂಜೆ 3:30 ಗಂಟೆಗೆ ಆರಂಭ
Advertisement