Women's T20 World Cup 2026: ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು; ಕಳಪೆ ತಂತ್ರಗಳಿಂದ ವಿಶ್ವಕಪ್‌ನಿಂದಲೇ ಹೊರಬಿದ್ದ ಭಾರತದ ವನಿತೆಯರು!

ಆಸೀಸ್ (10 ಅಂಕಗಳು) ಎಲ್ಲ ಗೆಲುವಿನ ದಾಖಲೆಯೊಂದಿಗೆ ಗುಂಪು 1 ರಲ್ಲಿ ಅಗ್ರಸ್ಥಾನದಲ್ಲಿದ್ದರೆ, 50 ಓವರ್‌ಗಳ ಚಾಂಪಿಯನ್ ಭಾರತ ಆರು ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತು.
Women's Team
ಟೀಂ ಇಂಡಿಯಾ
Updated on

ಭಾನುವಾರ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಆರು ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಭಾರತವನ್ನು ಸೋಲಿಸುವಲ್ಲಿ ಎಲಿಸ್ ಪೆರ್ರಿ ಮತ್ತು ಆಶ್ಲೀ ಗಾರ್ಡ್ನರ್ ಅವರ ಆಕರ್ಷಕ ಅರ್ಧಶತಕವು ಪ್ರಮುಖ ಪಾತ್ರ ವಹಿಸಿತು. 10ನೇ ವಿಶ್ವಕಪ್ ಆಡುತ್ತಿರುವ ಪೆರ್ರಿ (38 ಎಸೆತಗಳಲ್ಲಿ 56) ಮತ್ತು ಗಾರ್ಡ್ನರ್ (29 ಎಸೆತಗಳಲ್ಲಿ 53) ನಾಲ್ಕನೇ ವಿಕೆಟ್‌ಗೆ 100 ರನ್ ಸೇರಿಸುವ ಮೂಲಕ ಆರು ಬಾರಿಯ ಚಾಂಪಿಯನ್ ತಂಡವು 19 ಓವರ್‌ಗಳಲ್ಲಿ 171 ರನ್‌ಗಳನ್ನು ಬೆನ್ನಟ್ಟಿ ಭಾರತವನ್ನು ಸೆಮಿಫೈನಲ್‌ನಿಂದ ಹೊರಗೆ ಕಳುಹಿಸಿತು.

ಆಸೀಸ್ (10 ಅಂಕಗಳು) ಎಲ್ಲ ಗೆಲುವಿನ ದಾಖಲೆಯೊಂದಿಗೆ ಗುಂಪು 1 ರಲ್ಲಿ ಅಗ್ರಸ್ಥಾನದಲ್ಲಿದ್ದರೆ, 50 ಓವರ್‌ಗಳ ಚಾಂಪಿಯನ್ ಭಾರತ ಆರು ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತು.

ದಿನದ ಆರಂಭದಲ್ಲಿ ಬಾಂಗ್ಲಾದೇಶವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ನಂತರ ದಕ್ಷಿಣ ಆಫ್ರಿಕಾ ಕೂಡ ಎಂಟು ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿತು.

ಆದಾಗ್ಯೂ, ಭಾರತೀಯ ಬೌಲರ್‌ಗಳು ಆರಂಭಿಕ ಆಟಗಾರ್ತಿಯರಾದ ಫೋಬಿ ಲಿಚ್‌ಫೀಲ್ಡ್, ಜಾರ್ಜಿಯಾ ವೋಲ್ ಮತ್ತು ಅನುಭವಿ ಬೆತ್ ಮೂನಿ ಅವರನ್ನು ಅಲ್ಪ ಮೊತ್ತಕ್ಕೆ ಔಟ್ ಮಾಡಿದರು. ಆಗ ಆಸೀಸ್ 9.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 68 ರನ್‌ಗಳೊಂದಿಗೆ ಸಂಕಷ್ಟದಲ್ಲಿತ್ತು.

ಮೊದಲ ಓವರ್‌ನಲ್ಲಿಯೇ ರೇಣುಕಾ ಸಿಂಗ್ ಠಾಕೂರ್ ವೋಲ್ ಅವರ ವಿಕೆಟ್ ಪಡೆದರು. ಆದರೆ ನಂತರ, ಪೆರ್ರಿ ಮತ್ತು ಗಾರ್ಡ್ನರ್ ಭಾರತೀಯ ಬೌಲರ್‌ಗಳ ಬೆವರಿಳಿಸಿದರು. ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳದೆ ತಮ್ಮ ಅನುಭವವನ್ನು ಬಳಸಿ ತಂಡಕ್ಕೆ ರನ್ ಕಲೆಹಾಕಿದರು.

ಗಾರ್ಡ್ನರ್ ಎಡಗೈ ಸ್ಪಿನ್ನರ್ ಶ್ರೀ ಚರಣಿ ಮತ್ತು ಶಫಾಲಿ ವರ್ಮಾ ಅವರ ಎಸೆತಗಳಲ್ಲಿ ಸಿಕ್ಸರ್‌ ಬಾರಿಸಿ ದಂಡಿಸಿದರು. ಈ ವೇಳೆ ಪೆರ್ರಿ ಸಾಥ್ ನೀಡಿದರು. ಶ್ರೀ ಚರಣಿ, ಶಫಾಲಿ ಮತ್ತು ದೀಪ್ತಿ ಶರ್ಮಾ ಅವರನ್ನು ಸುಲಭವಾಗಿ ಟಾರ್ಗೆಟ್ ಮಾಡಿದರು. ಅವರ ಇನಿಂಗ್ಸ್‌ನಲ್ಲಿ ಎಂಟು ಬೌಂಡರಿಗಳು ಬಂದವು. ಆದರೆ, ಪೆರ್ರಿ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು ಮತ್ತು ಗಾರ್ಡ್ನರ್ ನಾಲ್ಕು ಎಸೆತಗಳು ಕಡಿಮೆ ಇರುವಾಗಲೇ ಅರ್ಧಶತಕ ಗಳಿಸಿದರು.

ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಶ್ರೀ ಚರಣಿಗೆ ಪೆರ್ರಿ ವಿಕೆಟ್ ಒಪ್ಪಿಸಿದರು. ಆದರೆ, ಆ ಹೊತ್ತಿಗೆ ಆಸೀಸ್ ತಂಡವು ಗೆಲುವಿನ ಸನಿಹದಲ್ಲಿತ್ತು.

ಇದಕ್ಕೂ ಮೊದಲು, ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ 27 ಎಸೆತಗಳಲ್ಲಿ 56 ರನ್ ಗಳಿಸಿದರು. ಅಂತಿಮವಾಗಿ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. 171 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಎಲ್ಲಿಸ್ ಪೆರ್ರಿ ಮತ್ತು ಆ್ಯಶ್ ಗಾರ್ಡ್ನರ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 19 ಓವರ್‌ಗಳಲ್ಲಿಯೇ ಗುರಿಯನ್ನು ಬೆನ್ನಟ್ಟಿತು.

ಭಾರತವು ಆರಂಭಿಕರಾದ ಸ್ಮೃತಿ ಮಂಧಾನ (38) ಮತ್ತು ಶಫಾಲಿ ವರ್ಮಾ (34) ಅವರಿಂದ ಉತ್ತಮ ಆರಂಭವನ್ನು ಪಡೆಯಿತು. ಅವರು 66 ರನ್‌ಗಳ ಜೊತೆಯಾಟವಾಡಿದರು. ಆದರೆ, ರನ್ ರೇಟ್ ಉತ್ತಮವಾಗಿರಲಿಲ್ಲ. ಆಫ್-ಸ್ಪಿನ್ನರ್ ಆಶ್ಲೀ ಗಾರ್ಡ್ನರ್ ಬೌಲಿಂಗ್‌ನಲ್ಲಿ ಶಫಾಲಿ ಎರಡು ಸಿಕ್ಸರ್‌ಗಳು ಅಥವಾ ವೇಗಿ ಕಿಮ್ ಗಾರ್ತ್ ಬೌಲಿಂಗ್‌ನಲ್ಲಿ ಮಂಧಾನ ಸತತ ಬೌಂಡರಿಗಳ ಹೊರತಾಗಿಯೂ ತಂಡ ಉತ್ತಮ ಮೊತ್ತ ಕಲೆಹಾಕಲು ವಿಫಲವಾಯಿತು.

ಜೆಮಿಮಾ ರೋಡ್ರಿಗಸ್ (28 ಎಸೆತಗಳಲ್ಲಿ 34) ಜೊತೆಗಿನ ಗೊಂದಲದಿಂದಾಗಿ ಮಂಧಾನಾ ರನೌಟ್ ಆದರು.

ಅಂತಿಮ ಓವರ್‌ಗೆ ಮುನ್ನವೇ ಜೆಮಿಮಾ ಅವರನ್ನು ರಿಟೈರ್ಡ್ ಔಟ್ ಮಾಡಲಾಯಿತು. ಇದರಿಂದಾಗಿ ಬಿಗ್-ಹಿಟ್ಟರ್ ರಿಚಾ ಘೋಷ್‌ಗೆ ಅವಕಾಶ ದೊರೆಯಿತು. ಆದರೆ, ಅವರು ಎದುರಿಸಿದ್ದು ಕೇವಲ ಒಂದು ಎಸೆತ ಮಾತ್ರ. ಆ ಸಮಯದಲ್ಲಿ ಸ್ಟ್ರೈಕ್‌ಗೆ ಬಂದ ನಾಯಕಿ ಹರ್ಮನ್‌ಪ್ರೀತ್ ಸತತ ಮೂರು ಸಿಕ್ಸರ್ ಬಾರಿಸಿ ತಂಡ 170 ರನ್ ಕಲೆಹಾಕಲು ನೆರವಾದರು. ಆದರೆ, ಅವರ ಅರ್ಧಶತಕದ ಹೋರಾಟ ವ್ಯರ್ಥವಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com