

ಟೀಂ ಇಂಡಿಯಾ ಟಿ20 ಕ್ರಿಕೆಟ್ ಇದೀಗ ಸಾಕಷ್ಟು ಕ್ರಾಂತಿಯನ್ನು ಮಾಡುತ್ತಿದೆ. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ, ನಿರ್ಭೀತ ಮತ್ತು ನಿಸ್ವಾರ್ಥ ಬ್ರಾಂಡ್ ಕ್ರಿಕೆಟ್ ಅನ್ನು ಅಳವಡಿಸಿಕೊಳ್ಳಲಾಗಿದೆ. ಆಟಗಾರರು ವೈಯಕ್ತಿಕ ಮೈಲಿಗಲ್ಲುಗಳನ್ನು ಮರೆತು, ತಂಡಕ್ಕಾಗಿ ತಂಡವಾಗಿ ಆಡಲು ಹೇಳಲಾಗಿದೆ. 2026ರ ಟಿ20 ವಿಶ್ವಕಪ್‌ನ ಸೆಮಿ-ಫೈನಲ್ ಮತ್ತು ಫೈನಲ್ ಎರಡರಲ್ಲೂ ಗೆಲುವಿನ ಹಾದಿಯಲ್ಲಿ ಭಾರತವು 250ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದೆ. ಸೂರ್ಯಕುಮಾರ್ ಯಾದವ್ ಅವರು 2024ರಲ್ಲಿ T20 ವಿಶ್ವಕಪ್ ಅನ್ನು ಎತ್ತಿಹಿಡಿದ ನಂತರ ಈ ಬದಲಾವಣೆಯು ಪ್ರಾರಂಭವಾಯಿತು ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2024ರ ಆವೃತ್ತಿಯನ್ನು ಗೆದ್ದುಕೊಂಡಿತ್ತು. ಆಗ, ವಿರಾಟ್ ಕೊಹ್ಲಿ ಫೈನಲ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಾದ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ T20I ಗೆ ನಿವೃತ್ತಿ ಘೋಷಿಸಿದರು. ಬಳಿಕ ಭಾರತವು ತನ್ನ T20 ವಿಧಾನವನ್ನು ಬದಲಿಸಿತು. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್‌ರಂತಹ ಕಿರಿಯ ಆಟಗಾರರು ಹೆಚ್ಚು ಆಕ್ರಮಣಕಾರಿ ಮತ್ತು ಹೊಸ ಶೈಲಿಯ ಆಟದ ಮೂಲಕ ತಂಡವನ್ನು ಮುನ್ನಡೆಸಿದರು.
ರೋಹಿತ್ ನಿವೃತ್ತಿ ನಂತರ ತಂಡದ ನಾಯಕತ್ವವನ್ನು ವಹಿಸಿಕೊಂಡ ಸೂರ್ಯಕುಮಾರ್, ಹೊಸ ತಂತ್ರ ಮತ್ತು ಆಟದ ಶೈಲಿಯ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್ ಪಂದ್ಯಾವಳಿಯ ನಂತರ ತಕ್ಷಣವೇ ತಂಡಕ್ಕೆ ತಿಳಿಸಿತು ಎಂದು ಬಹಿರಂಗಪಡಿಸಿದರು.
ನಾವು 2024ರ ಟಿ20 ವಿಶ್ವಕಪ್ ಆಡಿದ ರೀತಿಯ ಬ್ರಾಂಡ್ ಕ್ರಿಕೆಟ್ ಇನ್ಮುಂದೆ ಕೆಲಸ ಮಾಡುವುದಿಲ್ಲ ಎಂದು ನಮಗೆ ಆಗಲೇ ತಿಳಿದಿತ್ತು. ಆಗಲೇ ನಾವು ಇಲ್ಲಿಂದ ಮುಂದಕ್ಕೆ ನಾವು ವೈಯಕ್ತಿಕ ಮೈಲಿಗಲ್ಲುಗಳಿಗೆ ಗಮನ ಕೊಡುವುದಿಲ್ಲ, ಪಂದ್ಯಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದು ನಾವು ನಿರ್ಧರಿಸಿದೆವು. ನೀವು ಗಮನಿಸಿದರೆ, ಸೆಮಿಫೈನಲ್‌ನವರೆಗೆ ನಮ್ಮ ಯಾವುದೇ ಆಟಗಾರರು ಅಗ್ರ ರನ್ ಸ್ಕೋರರ್ ಆಗಿರಲಿಲ್ಲ ಅಥವಾ ಅಗ್ರ ವಿಕೆಟ್ ಪಡೆದವರಾಗಿರಲಿಲ್ಲ. ಆದರೆ, ನಾವು ಅರ್ಹತೆ ಗಳಿಸಿದ್ದೇವೆ ಮತ್ತು ಗೆಲ್ಲುತ್ತಲೇ ಇದ್ದೆವು. ಪ್ರತಿ ಪಂದ್ಯಕ್ಕೂ, ಪ್ರತಿಯೊಬ್ಬ ಆಟಗಾರನು ಕೊಡುಗೆ ನೀಡಿದ್ದಾರೆ' ಎಂದು ಸೂರ್ಯಕುಮಾರ್ ಯಾದವ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
'ಮೊದಲಿನಿಂದಲೂ ಈ ವಿಷಯವನ್ನು ತಂಡದಲ್ಲಿ ವೈರಸ್‌ನಂತೆ ಹರಡುವುದು ಬಹಳ ಮುಖ್ಯವಾಗಿತ್ತು. ನಾವು ಈ ತಂಡದ ಸಂಸ್ಕೃತಿಯನ್ನು 18 ತಿಂಗಳ ಹಿಂದೆ ನೆಟ್ಟಿದ್ದೇವೆ' ಎಂದು ಅವರು ಹೇಳಿದರು.
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ T20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಡಿಫೆಂಡ್ ಮಾಡಿಕೊಂಡ, ಮೂರನೇ ಬಾರಿಗೆ ಟ್ರೋಫಿಯನ್ನು ಗೆದ್ದ ಮೊದಲ ತಂಡ ಮತ್ತು ತವರು ನೆಲದಲ್ಲಿ ಪ್ರಶಸ್ತಿ ಗೆದ್ದ ತಂಡವಾಗಿ ದಾಖಲೆ ಬರೆದಿದೆ.
Advertisement