IPL 2026 Final: RCB vs GT ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ, ಮ್ಯಾಚ್ ರದ್ದಾದರೆ ಯಾರು ಚಾಂಪಿಯನ್?

ಫೈನಲ್ ಪಂದ್ಯ ಭಾನುವಾರ ಹಾಗೂ ಮೀಸಲು ದಿನವಾದ ಸೋಮವಾರ ಎರಡೂ ದಿನಗಳಲ್ಲೂ ಸಂಪೂರ್ಣವಾಗಿ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.
Will rain play spoilsport in todays RCB vs GT match
ಅಹ್ಮದಾಬಾದ್ ಮೋದಿ ಮೈದಾನ
Updated on

ಅಹ್ಮದಾಬಾದ್: ಐಪಿಎಲ್ 2026 ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.

2ನೇ ಕ್ವಾಲಿಫೈಯರ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಭರ್ಜರಿ 7 ವಿಕೆಟ್ ಗಳ ಅಂತರದಲ್ಲಿ ಮಣಿಸಿ ಫೈನಲ್ ಗೇರಿರುವ ಗುಜರಾತ್ ಟೈಟನ್ಸ್ ತನ್ನ ತವರಿನಲ್ಲೇ ಫೈನಲ್ ಪಂದ್ಯವನ್ನಾಡುತ್ತಿರುವುದರಿಂದ ತುಂಬಾ ಆತ್ಮವಿಶ್ವಾಸದಲ್ಲಿದೆ.

ಆದರೆ ಕಳೆದ ಸೀಸನ್ ಚಾಂಪಿಯನ್ ಆಗಿ ಭರ್ಜರಿ ಪ್ರದರ್ಶನದ ಮೂಲಕ ಫೈನಲ್ ತಲುಪಿದ ಆರ್ ಸಿಬಿಗೆ ತನ್ನ ತವರಿನಲ್ಲಿ ಫೈನಲ್ ಆಡುವ ಭಾಗ್ಯವಿಲ್ಲ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯ ಕಾರಣಾಂತರಗಳಿಂದ ಅಹ್ಮದಾಬಾದ್ ಗೆ ಶಿಫ್ಟ್ ಆಯಿತು.

Will rain play spoilsport in todays RCB vs GT match
GT vs RCB IPL Final 2026: ಸಂಭ್ರಮಾಚರಣೆಗೆ 'NO' ಎಂದ ಬೆಂಗಳೂರು ಪೊಲೀಸರು, ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ..!

ಇದೇ ಮೈದಾನದಲ್ಲಿ ಪಂಜಾಬ್ ಮಣಿಸಿದ್ದ ಆರ್ ಸಿಬಿ

ಇನ್ನು ಕಳೆದ ವರ್ಷ ಇದೇ ಮೈದಾನದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ Punjab Kings ತಂಡವನ್ನು ಮಣಿಸಿದ್ದ ಆರ್ ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಕೊಂಡಿತ್ತು. ನಾಯಕ ರಜತ್ ಪಟಿದಾರ್ (Rajat Patidar) ನೇತೃತ್ವದಲ್ಲಿ ಮತ್ತೊಮ್ಮೆ ಕಿರೀಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, 2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿ ಮೊದಲ ಸೀಸನ್‌ನಲ್ಲೇ ಪ್ರಶಸ್ತಿ ಗೆದ್ದಿದ್ದ ಗುಜರಾತ್ ಟೈಟನ್ಸ್ ತನ್ನ ಎರಡನೇ ಟ್ರೋಫಿಗಾಗಿ ಇಂದು ಕಣಕ್ಕಿಳಿಯಲಿದೆ.

ಮಳೆ ಸಾಧ್ಯತೆ

ಐಪಿಎಲ್ ಫೈನಲ್‌ಗಾಗಿ ದೇಶದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಂತೆಯೇ ಅಹ್ಮದಾಬಾದ್‌ನ ಹವಾಮಾನ ಅಭಿಮಾನಿಗಳಿಗೆ ಆತಂಕವನ್ನುಂಟು ಮಾಡಿದೆ. ನಿನ್ನೆ ರಾತ್ರಿ ಅಹ್ಮದಾಬಾದ್ ನಲ್ಲಿ ಭಾರಿ ಮಳೆಯಾಗಿದ್ದು, ಇಂದು ಸಂಜೆ ಕೂಡ ಮಳೆಯಾಗುವ ಭೀತಿಯಲ್ಲಿದ್ದಾರೆ ಅಭಿಮಾನಿಗಳು. ಆದರೆ ಹವಾಮಾನ ಮುನ್ಸೂಚನೆಗಳ ಪ್ರಕಾರ, ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಅತ್ಯಂತ ಕಡಿಮೆ ಎನ್ನಲಾಗಿದೆ. ಪಂದ್ಯದ ವೇಳೆಯಲ್ಲಿ ಕೇವಲ 5 ಪ್ರತಿಶತ ಮಳೆಯ ಸಾಧ್ಯತೆ ಮಾತ್ರ ಇದೆ ಎಂದು ಅಂದಾಜಿಸಲಾಗಿದೆ.

ಹಗಲಿನಲ್ಲಿ ತಾಪಮಾನ ಸುಮಾರು 41 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಲಿದ್ದು, ಸೂರ್ಯಾಸ್ತದ ಬಳಿಕ ಸುಮಾರು 30 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ. ಒಟ್ಟಾರೆ ಹವಾಮಾನ ಅನುಕೂಲಕರವಾಗಿರುವುದರಿಂದ ಯಾವುದೇ ಅಡಚಣೆಯಿಲ್ಲದೆ ಪೂರ್ಣ 40 ಓವರ್‌ಗಳ ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಮುಂದೇನು?

ಕ್ವಾಲಿಫೈಯರ್-1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್-2 ಪಂದ್ಯಗಳಿಗಿಂತ ಭಿನ್ನವಾಗಿ, ಫೈನಲ್‌ಗಾಗಿ ಬಿಸಿಸಿಐ ಮೀಸಲು ದಿನವನ್ನು (ರಿಸರ್ವ್ ಡೇ) ಕಾಯ್ದಿರಿಸಿದೆ. ಭಾನುವಾರ ಪಂದ್ಯ ಆರಂಭವಾಗಿ ಬಳಿಕ ಮಳೆ ಅಥವಾ ಇತರ ಕಾರಣಗಳಿಂದ ಸ್ಥಗಿತಗೊಂಡರೆ, ಜೂನ್ 1ರ ಸೋಮವಾರ ಪಂದ್ಯವನ್ನು ನಿಂತಿದ್ದ ಅದೇ ಸ್ಕೋರ್ ಮತ್ತು ಅದೇ ಎಸೆತದಿಂದ ಮುಂದುವರಿಸಲಾಗುತ್ತದೆ.

ಮೀಸಲು ದಿನವೂ ಮಳೆಗೆ ಆಹುತಿಯಾದರೆ?

ಫೈನಲ್ ಪಂದ್ಯ ಭಾನುವಾರ ಹಾಗೂ ಮೀಸಲು ದಿನವಾದ ಸೋಮವಾರ ಎರಡೂ ದಿನಗಳಲ್ಲೂ ಸಂಪೂರ್ಣವಾಗಿ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಅದರಂತೆ ಗುಜರಾತ್ ಟೈಟನ್ಸ್‌ಗಿಂತ ಮೇಲಿದ್ದ ಕಾರಣ ಆರ್‌ಸಿಬಿಯನ್ನು ಐಪಿಎಲ್ 2026ರ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

ಹೀಗಾಗಿ, ಹವಾಮಾನ ವರದಿಗಳ ಪ್ರಕಾರ ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ. ಅಹ್ಮದಾಬಾದ್‌ನಲ್ಲಿ ಭರ್ಜರಿ ಹಾಗೂ ನಿರ್ಣಾಯಕ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಿದ್ದು, ಆರ್‌ಸಿಬಿ ಮತ್ತು ಜಿಟಿ ನಡುವಿನ ಪ್ರಶಸ್ತಿ ಸಮರಕ್ಕೆ ವೇದಿಕೆ ಸಜ್ಜಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com