'ಕರೆಂಟ್‌ ಇಲ್ಲ, ನೀರಿಲ್ಲ, ತೀವ್ರ ಬಡತನ, ಕಷ್ಟ, ಸಹೋದರಿಯ ಸಾವು, ಆದರೂ ಛಲ ಬಿಡದೆ 5 ವಿಕೆಟ್ ಪಡೆದ'; Ian Bishop ಹೇಳಿದ್ದು ಯಾರ ಬಗ್ಗೆ?

ದೊಡ್ಡ ಕುಟುಂಬ, ಸಣ್ಣ ಮನೆ, ಆರ್ಥಿಕ ಸಂಕಷ್ಟಗಳ ನಡುವೆಯೇ ಬೆಳೆದ ಕೀಮೋ ಪಾಲ್‌ ಅವರ ಬಾಲ್ಯ ಸುಲಭವಾಗಿರಲಿಲ್ಲ. ಅವರ ಮನೆಯಲ್ಲಿ ವಿದ್ಯುತ್‌ ಸಂಪರ್ಕವಿರಲಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ.
Keemo Paul’s Inspiring Story
ಇಯಾನ್ ಬಿಷಪ್
Updated on: 

ಪುಣೆ: ಬಡತನ, ಕೌಟುಂಬಿಕ ಸಂಕಷ್ಟ, ಸಹೋದರಿಯನ್ನು ಕಳೆದುಕೊಂಡ ನೋವು... ಇಂತಹ ಸವಾಲುಗಳ ನಡುವೆಯೂ ಕ್ರಿಕೆಟಿಗನಾಗುವ ಕನಸನ್ನು ಕೈಬಿಡದೆ ವೆಸ್ಟ್‌ ಇಂಡೀಸ್‌ ತಂಡದಲ್ಲಿ ಸ್ಥಾನ ಪಡೆದ ಆಟಗಾರ ಕೀಮೋ ಪಾಲ್‌ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಭಾರತದ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ ಕಬಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಕೀಮೋ ಪಾಲ್‌ ಅವರ ಬದುಕಿನ ಹೋರಾಟದ ಕಥೆಯನ್ನು ವೆಸ್ಟ್‌ ಇಂಡೀಸ್‌ನ ಮಾಜಿ ವೇಗದ ಬೌಲರ್‌ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಇಯಾನ್‌ ಬಿಷಪ್‌ ಹಂಚಿಕೊಂಡಿದ್ದಾರೆ.

ದೊಡ್ಡ ಕುಟುಂಬ, ಸಣ್ಣ ಮನೆ, ಆರ್ಥಿಕ ಸಂಕಷ್ಟಗಳ ನಡುವೆಯೇ ಬೆಳೆದ ಕೀಮೋ ಪಾಲ್‌ ಅವರ ಬಾಲ್ಯ ಸುಲಭವಾಗಿರಲಿಲ್ಲ. ಅವರ ಮನೆಯಲ್ಲಿ ವಿದ್ಯುತ್‌ ಸಂಪರ್ಕವಿರಲಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ. ಕುಟುಂಬವನ್ನು ಸಾಕಲು ಅವರ ತಂದೆ ಕೃಷಿ ಮತ್ತು ಮೀನುಗಾರಿಕೆಯಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರು.

ಇದರ ನಡುವೆ ಕೀಮೋ ತಮ್ಮ ಸಹೋದರಿಯನ್ನು ಕಳೆದುಕೊಂಡ ನೋವನ್ನೂ ಅನುಭವಿಸಿದ್ದರು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಕ್ರಿಕೆಟಿಗನಾಗುವ ಕನಸನ್ನು ಬೆನ್ನಟ್ಟಿದ ಕೀಮೋ ಪಾಲ್‌, ಇಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಇಯಾನ್ ಬಿಷಪ್ ಹೇಳಿದ್ದಾರೆ.

Keemo Paul’s Inspiring Story
ಹೊಸ ಮಾದರಿಯ ಕ್ರಿಕೆಟ್ 'ಟೆಸ್ಟ್ ಟ್ವೆಂಟಿ': ನವೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ಚೊಚ್ಚಲ ಪಂದ್ಯ ಆರಂಭ!

ಟೀಕಿಸಿದವರಿಗೆ ಐದು ವಿಕೆಟ್‌ಗಳ ಮೂಲಕ ಉತ್ತರ!

ಕೀಮೋ ಪಾಲ್‌ ಅವರ ಪ್ರದರ್ಶನದ ಬಗ್ಗೆ ಆಗಾಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದವು. ಬ್ಯಾಟಿಂಗ್‌ನಲ್ಲೂ ಗಮನಾರ್ಹ ಪ್ರದರ್ಶನವಿಲ್ಲ, ಬೌಲಿಂಗ್‌ನಲ್ಲೂ ನಿರೀಕ್ಷಿತ ಮಟ್ಟದ ಯಶಸ್ಸಿಲ್ಲ; ಹೀಗಿರುವಾಗ ಅವರನ್ನು ತಂಡದಲ್ಲಿ ಏಕೆ ಉಳಿಸಿಕೊಳ್ಳಬೇಕು ಎಂಬ ಪ್ರಶ್ನೆಗಳು ಕೇಳಿಬರುತ್ತಿದ್ದವು. ಆದರೆ, ಭಾರತದ ವಿರುದ್ಧದ ಪಂದ್ಯದಲ್ಲಿ ಕೀಮೋ ತಮ್ಮ ಬೌಲಿಂಗ್‌ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

ವೆಸ್ಟ್‌ ಇಂಡೀಸ್‌ ಭಾರತಕ್ಕೆ 248 ರನ್‌ಗಳ ಸವಾಲಿನ ಗುರಿ ನೀಡಿತ್ತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್‌ ಭರ್ಜರಿ ಬ್ಯಾಟಿಂಗ್‌ ನಡೆಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಅವರು ಔಟಾದ ಬಳಿಕವೂ ಭಾರತೀಯ ತಂಡ ಗೆಲುವಿನ ಹಾದಿಯಲ್ಲಿರುವಂತೆ ಕಂಡುಬಂದಿತ್ತು. ಆದರೆ, ಕೀಮೋ ಪಾಲ್‌ ದಾಳಿಗಿಳಿದ ಬಳಿಕ ಪಂದ್ಯದ ಚಿತ್ರಣ ಬದಲಾಯಿತು.

ಕೀಮೋ ಐದು ವಿಕೆಟ್‌ಗಳನ್ನು ಕಬಳಿಸಿ ಭಾರತದ ಬ್ಯಾಟಿಂಗ್‌ ಪಡೆಗೆ ದೊಡ್ಡ ಹೊಡೆತ ನೀಡಿದರು. ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌, ನಿತೀಶ್‌ ಕುಮಾರ್‌ ರೆಡ್ಡಿ, ಅಕ್ಷರ್‌ ಪಟೇಲ್‌ ಮತ್ತು ಪ್ರಿನ್ಸ್‌ ಯಾದವ್‌ ಅವರನ್ನು ಔಟ್‌ ಮಾಡಿ ವೆಸ್ಟ್‌ ಇಂಡೀಸ್‌ ತಂಡಕ್ಕೆ ಮಹತ್ವದ ಕೊಡುಗೆ ನೀಡಿದರು.

ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ

28 ವರ್ಷದ ಕೀಮೋ ಪಾಲ್‌ ವೆಸ್ಟ್‌ ಇಂಡೀಸ್‌ ಪರ ಮೂರು ಟೆಸ್ಟ್‌, 33 ಏಕದಿನ ಹಾಗೂ 25 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರು 197 ರನ್‌ ಗಳಿಸಿದ್ದು, 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಎರಡು ಬಾರಿ ಒಂದೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ವೆಸ್ಟ್‌ ಇಂಡೀಸ್‌ನ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.

ಆದರೆ, ಅವರ ಆಟದ ನಿಖರ ಸ್ವರೂಪದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಉತ್ತಮ ಬ್ಯಾಟಿಂಗ್‌ ಮಾಡುವ ಬೌಲರ್‌ ಎನ್ನಬೇಕೋ ಅಥವಾ ಬೌಲಿಂಗ್‌ ಮಾಡಬಲ್ಲ ಬ್ಯಾಟರ್‌ ಎನ್ನಬೇಕೋ ಎಂಬ ಗೊಂದಲದ ನಡುವೆ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ವೆಸ್ಟ್‌ ಇಂಡೀಸ್‌ ತಂಡದಲ್ಲಿ ವೇಗದ ಬೌಲರ್‌ಗಳ ಪೈಪೋಟಿ ಹೆಚ್ಚಿರುವುದರಿಂದ ಮಧ್ಯಮ ವೇಗದ ಬೌಲರ್‌ ಕೀಮೋಗೆ ನಿರಂತರ ಅವಕಾಶಗಳು ಸಿಗುವುದು ಸುಲಭವಲ್ಲ.

ಐಪಿಎಲ್‌ನಲ್ಲೂ ಆಡಿದ್ದ ಕೀಮೋ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಕೀಮೋ ಪಾಲ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ಬಳಗಕ್ಕೆ ಸೇರಿಸಿಕೊಂಡಿತ್ತು. ಆದರೆ, ಅವರ ಸಾಮರ್ಥ್ಯವನ್ನು ತಂಡ ನಿರೀಕ್ಷಿತ ಮಟ್ಟದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಅಭಿಪ್ರಾಯಗಳಿವೆ. ಬಡತನದ ನಡುವೆಯೂ ಕನಸು ಕಂಡು, ವೈಯಕ್ತಿಕ ನೋವುಗಳನ್ನು ಮೆಟ್ಟಿ ನಿಂತು, ಟೀಕೆಗಳ ನಡುವೆಯೂ ಕ್ರಿಕೆಟ್‌ ಕ್ಷೇತ್ರದಲ್ಲಿ ಮುಂದುವರಿದ ಕೀಮೋ ಪಾಲ್‌ ಅವರ ಪಯಣ ಅನೇಕ ಯುವ ಆಟಗಾರರಿಗೆ ಸ್ಫೂರ್ತಿಯಾಗಿದೆ. ಭಾರತದ ವಿರುದ್ಧದ ಐದು ವಿಕೆಟ್‌ಗಳ ಪ್ರದರ್ಶನವು ಅವರ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com