ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದ ಮಹೇಲಾ ಜಯವರ್ಧನೆ; ಹೊಸ ಕೋಚ್‌ಗಾಗಿ MI ಹುಡುಕಾಟ!

ವರ್ಷಗಳ ಕಾಲ ನನ್ನ ಮೇಲೆ ಅಚಲವಾದ ನಂಬಿಕೆ, ಬೆಂಬಲ ಮತ್ತು ಸ್ನೇಹವನ್ನು ತೋರಿದ ಶ್ರೀಮತಿ ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಜಯವರ್ಧನೆ ಹೇಳಿದರು.
Mahela Jayawardene
ಮಹೇಲಾ ಜಯವರ್ಧನೆ
Updated on: 

ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿದ್ದ ಶ್ರೀಲಂಕಾದ ದಿಗ್ಗಜ ಆಟಗಾರ ಮಹೇಲಾ ಜಯವರ್ಧನೆ ಅವರು ತಂಡದಿಂದ ನಿರ್ಗಮಿಸಿರುವುದನ್ನು ಫ್ರಾಂಚೈಸಿ ಶನಿವಾರ ಖಚಿತಪಡಿಸಿದೆ.

ತಮ್ಮ ಮೊದಲ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವು ಮೂರು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 49 ವರ್ಷದ ಜಯವರ್ಧನೆ, 2025ರ ಆವೃತ್ತಿ ಸಮೀಪಿಸುತ್ತಿದ್ದಂತೆ ಮತ್ತೆ ತಂಡದ ಮುಖ್ಯ ಕೋಚ್ ಆಗಿ ಮರಳಿದ್ದರು. ಇದೀಗ ಅವರ ಈ ಎರಡನೇ ಅವಧಿಯೂ ಮುಕ್ತಾಯಗೊಂಡಿದೆ. ಅವರು ಈ ಹಿಂದೆ 2017 ರಿಂದ 2022 ರವರೆಗೆ ಮುಂಬೈ ಇಂಡಿಯನ್ಸ್‌ಗೆ (MI) ತರಬೇತುದಾರರಾಗಿದ್ದರು.

'ಮಹೇಲಾ ಕಳೆದ ಹಲವು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್‌ಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಶಾಂತ ನಾಯಕತ್ವ, ಪ್ರಾಮಾಣಿಕತೆ ಮತ್ತು ಆಟದ ಮೇಲಿನ ಅಪಾರ ಪ್ರೀತಿ ನಮಗೆ ಬಹಳ ಮುಖ್ಯವಾಗಿವೆ' ಎಂದು ಮುಂಬೈ ಇಂಡಿಯನ್ಸ್ ಮಾಲೀಕರಾದ ನೀತಾ ಅಂಬಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಸಂಪೂರ್ಣ 'MI' ಕುಟುಂಬದ ಪರವಾಗಿ, ಕಳೆದ ವರ್ಷಗಳಲ್ಲಿ ಮಹೇಲಾ ನೀಡಿರುವ ಅಪಾರ ಕೊಡುಗೆ ಮತ್ತು ಅವರ ಅಚಲ ಬದ್ಧತೆಗಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಾವು ಒಟ್ಟಾಗಿ ಸಾಗಿದ ಈ ಪಯಣವನ್ನು ಮತ್ತು ಸೃಷ್ಟಿಸಿದ ನೆನಪುಗಳನ್ನು ನಾವು ಸದಾ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ. ಮಹೇಲಾ ಯಾವಾಗಲೂ ನಮ್ಮ 'ಒನ್ ಫ್ಯಾಮಿಲಿ'ಯ (OneFamily) ಭಾಗವಾಗಿಯೇ ಇರುತ್ತಾರೆ. ಅವರ ಮುಂದಿನ ಪಯಣದಲ್ಲಿ ಅವರಿಗೆ ಎಲ್ಲ ರೀತಿಯ ಸಂತೋಷ ಮತ್ತು ಯಶಸ್ಸು ಸಿಗಲಿ ಎಂದು ನಾವು ಹಾರೈಸುತ್ತೇವೆ' ಎಂದಿದ್ದಾರೆ.

ಜಯವರ್ಧನೆ ಅವರು, 'ಮುಂಬೈ ಇಂಡಿಯನ್ಸ್' ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನನ್ನ ಪಯಣದ ಅತ್ಯಂತ ವಿಶೇಷ ಭಾಗವಾಗಿದೆ. ಆಟಗಾರರು, ಕೋಚಿಂಗ್ ತಂಡ, 'ಒನ್ ಫ್ಯಾಮಿಲಿ'ಯ ಅದ್ಭುತ ಬೆಂಬಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳು, ಈ ಅನುಭವವನ್ನು ನಾನೆಂದಿಗೂ ಮರೆಯಲಾಗದಂತಹ ವಿಶೇಷ ನೆನಪನ್ನಾಗಿ ಮಾಡಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕೆಲವು ಮರೆಯಲಾಗದ ಕ್ಷಣಗಳನ್ನು ಹಂಚಿಕೊಂಡಿದ್ದೇವೆ, ಸವಾಲುಗಳನ್ನು ಎದುರಿಸಿದ್ದೇವೆ ಮತ್ತು ನಾವೆಲ್ಲರೂ ಹೆಮ್ಮೆಪಡುವಂತಹದ್ದನ್ನು ನಿರ್ಮಿಸಿದ್ದೇವೆ' ಎಂದು ತಿಳಿಸಿದ್ದಾರೆ.

Mahela Jayawardene
ಮುಂಬೈ ಇಂಡಿಯನ್ಸ್ ನಾಯಕತ್ವ ತ್ಯಜಿಸಿದ ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಅಂಗಳದಲ್ಲಿ ಚೆಂಡು; ಯಾರಾಗ್ತಾರೆ ನಾಯಕ?

'ವರ್ಷಗಳ ಕಾಲ ನನ್ನ ಮೇಲೆ ಅಚಲವಾದ ನಂಬಿಕೆ, ಬೆಂಬಲ ಮತ್ತು ಸ್ನೇಹವನ್ನು ತೋರಿದ ಶ್ರೀಮತಿ ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾವಿಬ್ಬರೂ ಒಟ್ಟಾಗಿ ಸಾಧಿಸಿದ ವಿಷಯಗಳ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ. ನನ್ನ ಹೃದಯದಲ್ಲಿ 'ಎಂಐ' ತಂಡಕ್ಕೆ ಯಾವಾಗಲೂ ವಿಶೇಷ ಸ್ಥಾನವಿರುತ್ತದೆ. ಮುಂದಿನ ವರ್ಷಗಳಲ್ಲಿ ತಂಡವು ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತೇನೆ' ಎಂದು 2007ರ ವಿಶ್ವಕಪ್ ಫೈನಲ್‌ಗೆ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದ ಜಯವರ್ಧನೆ ಹೇಳಿದರು.

ತಮ್ಮ ಮೊದಲ ಅವಧಿಯಲ್ಲಿ ಮುಖ್ಯ ಕೋಚ್ ಆಗಿದ್ದ ಜಯವರ್ಧನೆ, ಮುಂಬೈ ಇಂಡಿಯನ್ಸ್ ತಂಡವು 2017, 2019 ಮತ್ತು 2020ರಲ್ಲಿ ಐಪಿಎಲ್ (IPL) ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಮಾರ್ಗದರ್ಶನ ನೀಡಿದ್ದರು.

2022 ರಿಂದ 2024ರವರೆಗೆ ಫ್ರಾಂಚೈಸಿಯ 'ಗ್ಲೋಬಲ್ ಹೆಡ್ ಆಫ್ ಪರ್ಫಾರ್ಮೆನ್ಸ್' ಆಗಿ ಸೇವೆ ಸಲ್ಲಿಸಿದ ನಂತರ, ಮಾರ್ಕ್ ಬೌಚರ್ ಅವರ ಸ್ಥಾನಕ್ಕೆ ಬಂದು, 2025ರ ಆವೃತ್ತಿಗೂ ಮುನ್ನ ಅವರು ಮತ್ತೆ ಈ ಜವಾಬ್ದಾರಿಯನ್ನು ವಹಿಸಿಕೊಂಡರು.

ಜಯವರ್ಧನೆ ಅವರು ಎಂಐನ ಇತರ ಫ್ರಾಂಚೈಸಿಗಳಾದ ಐಎಲ್‌ಟಿ20ಯಲ್ಲಿನ 'ಎಂಐ ಎಮಿರೇಟ್ಸ್', ಮೇಜರ್ ಲೀಗ್ ಕ್ರಿಕೆಟ್‌ನಲ್ಲಿನ 'ಎಂಐ ನ್ಯೂಯಾರ್ಕ್' ಮತ್ತು ಎಸ್‌ಎ20ನಲ್ಲಿನ 'ಎಂಐ ಕೇಪ್ ಟೌನ್' ತಂಡಗಳ ಮೇಲ್ವಿಚಾರಣೆಯನ್ನೂ ನಡೆಸಿದರು.

2025ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (MI) ನಾಲ್ಕನೇ ಸ್ಥಾನ ಪಡೆದಿತ್ತು. 2026ರ ಆವೃತ್ತಿಯಲ್ಲಿ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ; ಐದು ಬಾರಿ ಚಾಂಪಿಯನ್ ಆಗಿದ್ದ ಈ ತಂಡವು ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ನವೆಂಬರ್ 15ರ ಐಪಿಎಲ್ 'ರಿಟೆನ್ಷನ್' ಗಡುವಿಗೆ ಇನ್ನು ಒಂದು ತಿಂಗಳಿಗಿಂತ ಕಡಿಮೆ ಸಮಯವಷ್ಟೇ ಬಾಕಿಯಿದ್ದು, ಈ ಅವಧಿಯೊಳಗೆ ಮುಂಬೈ ಇಂಡಿಯನ್ಸ್ ಹೊಸ ಹೆಡ್ ಕೋಚ್ ಅನ್ನು ನೇಮಿಸಿಕೊಳ್ಳಬೇಕಿದೆ. ಡಿಸೆಂಬರ್ ಮಧ್ಯಭಾಗದಲ್ಲಿ ಗೋವಾದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com