

ಕ್ರೈಸ್ಟ್ ಚರ್ಚ್: ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ನ್ಯೂಜಿಲೆಂಡ್ ತಂಡ ಟೀಂ ಇಂಡಿಯಾಗೆ ಗೆಲ್ಲಲು 226 ರನ್ ಗಳ ಬೃಹತ್ ಗುರಿ ನೀಡಿದೆ.
ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡ ಗ್ಲೇನ್ ಫಿಲಿಪ್ಸ್ (ಅಜೇಯ 82) ಮತ್ತು ಫಿನ್ ಅಲೆನ್ (45 ರನ್) ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು.
ಆ ಮೂಲಕ ಭಾರತಕ್ಕೆ ಗೆಲ್ಲಲು 226 ರನ್ ಗಳ ಬೃಹತ್ ಗುರಿ ನೀಡಿತು. ಕಿವೀಸ್ ಪರ ಟಿಮ್ ಸೈಫರ್ಟ್ 24, ಫಿನ್ ಅಲೆನ್ 45, ಡರಿಲ್ ಮೆಚೆಲ್ 28, ಬೆವಾನ್ ಜೇಕಬ್ಸ್ 31, ಮೈಕೆಲ್ ಬ್ರೇಸ್ ವೆಲ್ ಅಜೇಯ 7ರನ್ ಗಳಿಸಿದರು.
ಗ್ಲೇನ್ ಫಿಲಿಪ್ಸ್ ಸಿಡಿಲಬ್ಬರದ ಬ್ಯಾಟಿಂಗ್
ಇನ್ನು ಈ ಪಂದ್ಯದಲ್ಲಿ ಕಿವೀಸ್ ಪರ ಗ್ಲೇನ್ ಫಿಲಿಪ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 40 ಎಸೆತಗಳನ್ನು ಎದುರಿಸಿದ ಅವರು 3 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ ಅಜೇಯ 82 ರನ್ ಕಲೆಹಾಕಿ ನ್ಯೂಜಿಲೆಂಡ್ ಬೃಹತ್ ಮೊತ್ತದಲ್ಲಿ ಮಹತ್ತರ ಪಾತ್ರವಹಿಸಿದರು.
ಉಳಿದಂತೆ ಭಾರತದ ಪರ ಅರ್ಶ್ ದೀಪ್ ಸಿಂಗ್, ಮಯಾಂಕ್ ಯಾದವ್ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು.