

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ಭಾರತ ತಂಡಕ್ಕೆ ಮರಳುವ ವಿಚಾರದಲ್ಲಿ ವಿರಾಟ್ ಕೊಹ್ಲಿ ಭರವಸೆ ನೀಡಿದ್ದರೂ ಬಳಿಕ ತಮ್ಮ ದೂರವಾಣಿ ಕರೆ ಹಾಗೂ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನಡೆಸುವ ಬೈಠ್ ಆ್ಯಂಡ್ ಬೋಲ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅಮಿತ್ ಮಿಶ್ರಾ, ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ಬಳಿಕವೂ ತಂಡಕ್ಕೆ ಮರಳುವ ಅವಕಾಶ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಅಮಿತ್ ಮಿಶ್ರಾ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಕೊನೆಯ ದಿನಗಳ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, 2017ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯವೇ ಭಾರತ ಪರ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಗಾಯಗೊಂಡಿರದಿದ್ದರೆ ರಾಷ್ಟ್ರೀಯ ತಂಡದ ಪರ ಇನ್ನಷ್ಟು ಪಂದ್ಯಗಳನ್ನು ಆಡಬಹುದಿತ್ತು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಆಗ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ಗಾಯದಿಂದ ಚೇತರಿಸಿಕೊಂಡ ಬಳಿಕ ತಂಡಕ್ಕೆ ಮರಳುವ ಭರವಸೆ ನೀಡಿದ್ದರು. ಆದರೆ, ತಾವು ಫಿಟ್ ಆದ ಬಳಿಕ ಆ ಭರವಸೆಗಳು ಈಡೇರಲಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.
'ಫಿಟ್ ಆದ ಕೂಡಲೇ ತಂಡಕ್ಕೆ ಮರಳುತ್ತೀಯಾ ಎಂದಿದ್ದರು ಕುಂಬ್ಳೆ'
2017ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವಾಡುವಾಗ ಕಾಲಿಗೆ ಗಾಯವಾಗಿತ್ತು. ಆ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಭಾರತ ತಂಡದ ಕೋಚ್ ಆಗಿದ್ದರು ಎಂದು ಮಿಶ್ರಾ ನೆನಪಿಸಿಕೊಂಡಿದ್ದಾರೆ. “ಆ ಸಮಯದಲ್ಲಿ ಬೆಂಗಳೂರಿನಲ್ಲಿ ನನ್ನ ಕಾಲಿಗೆ ಗಾಯವಾಗಿತ್ತು.
ಗಾಯಗೊಂಡು ಹೊರಡುವಾಗ ಅನಿಲ್ ಕುಂಬ್ಳೆ ಕೋಚ್ ಆಗಿದ್ದರು. ನಾನು ಅವರ ಬಳಿ ಹೋಗಿ ಮಾತನಾಡಿದೆ. ಆಗ ಅವರು, 'ಚಿಂತಿಸಬೇಡ. ನೀನು ಫಿಟ್ ಆದ ಕೂಡಲೇ ಸಹಜವಾಗಿಯೇ ತಂಡಕ್ಕೆ ಮರಳುತ್ತೀಯಾ' ಎಂದು ಭರವಸೆ ನೀಡಿದ್ದರು” ಎಂದು ಮಿಶ್ರಾ ತಿಳಿಸಿದ್ದಾರೆ.
ಕೊಹ್ಲಿ ಕೂಡ ಮಾತುಕೊಟ್ಟಿದ್ದರು
ನಂತರ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದು, ಅವರ ಬಳಿಯೂ ತಂಡಕ್ಕೆ ಮರಳುವ ಕುರಿತು ಮಿಶ್ರಾ ಮಾತನಾಡಿದ್ದರಂತೆ. “ನಾನು ವಿರಾಟ್ ಕೊಹ್ಲಿ ಬಳಿಯೂ ಹೋಗಿ, 'ಅಣ್ಣಾ, ಈಗ ಏನು ಮಾಡಬೇಕು?' ಎಂದು ಕೇಳಿದೆ. ಅದಕ್ಕೆ ಅವರು, 'ನೀನು ಚಿಂತಿಸಬೇಡ. ಸಂಪೂರ್ಣವಾಗಿ ಫಿಟ್ ಆಗಿ, ಆರಾಮವಾಗಿರು. ನೀನು ತಂಡದಲ್ಲಿರುತ್ತೀಯಾ' ಎಂದು ಹೇಳಿದ್ದರು” ಎಂದು ಮಿಶ್ರಾ ವಿವರಿಸಿದ್ದಾರೆ.
ಒಂದು ವಾರದಲ್ಲಿ ಉತ್ತರಿಸುವುದಾಗಿ ಹೇಳಿ ಸುಮ್ಮನಾದರು!
ಗಾಯದಿಂದ ಚೇತರಿಸಿಕೊಂಡು ಸಂಪೂರ್ಣ ಫಿಟ್ ಆದ ಬಳಿಕ ಅಮಿತ್ ಮಿಶ್ರಾ, ತಂಡಕ್ಕೆ ಮರಳುವ ವಿಚಾರವಾಗಿ ಕೊಹ್ಲಿಯನ್ನು ಸಂಪರ್ಕಿಸಿದ್ದರು. ಆದರೆ, ಒಂದು ವಾರದಿಂದ ಹತ್ತು ದಿನಗಳಲ್ಲಿ ಮಾಹಿತಿ ನೀಡುವುದಾಗಿ ಹೇಳಿದ್ದ ಕೊಹ್ಲಿ ಬಳಿಕ ಪ್ರತಿಕ್ರಿಯಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ನಾನು ಮತ್ತೆ ಅವರ ಬಳಿ ಹೋಗಿ, 'ಅಣ್ಣಾ, ಈಗ ಪರಿಸ್ಥಿತಿ ಏನು?' ಎಂದು ಕೇಳಿದೆ. ಅದಕ್ಕೆ ಅವರು ಒಂದು ವಾರದಿಂದ ಹತ್ತು ದಿನಗಳಲ್ಲಿ ತಿಳಿಸುತ್ತೇನೆ ಎಂದರು. ಆದರೆ ಒಂದು ವಾರ, ಎರಡು ವಾರ, ಮೂರು ವಾರ ಕಳೆದರೂ ಯಾವುದೇ ಮಾಹಿತಿ ಬರಲಿಲ್ಲ. ನಾನು ಅವರಿಗೆ ಕರೆ ಮಾಡಿದೆ. ಅವರು ಕರೆ ಸ್ವೀಕರಿಸಲಿಲ್ಲ. ಸಂದೇಶ ಕಳುಹಿಸಿದೆ, ಅದಕ್ಕೂ ಉತ್ತರ ಬರಲಿಲ್ಲ. ಮತ್ತೆ ಕರೆ ಮಾಡಿದೆ. ಆಗಲೂ ಪ್ರತಿಕ್ರಿಯೆ ಇರಲಿಲ್ಲ. ಎರಡು ಬಾರಿ ಮತ್ತಷ್ಟು ಪ್ರಯತ್ನಿಸಿದೆ. ಆದರೂ ಯಾವುದೇ ಉತ್ತರ ಸಿಗಲಿಲ್ಲ. ಕೊನೆಗೆ ನಾನೇ ಸುಮ್ಮನಾದೆ” ಎಂದು ಮಿಶ್ರಾ ಹೇಳಿದ್ದಾರೆ.
'ಬೇರೆ ಆಟಗಾರರು ಗಾಯದಿಂದ ಮರಳಿದರೂ ನನಗೆ ಮಾತ್ರ ಉತ್ತರ ಸಿಗಲಿಲ್ಲ'
ಗಾಯದಿಂದ ಚೇತರಿಸಿಕೊಂಡ ಬಳಿಕವೂ ತಮ್ಮನ್ನು ತಂಡಕ್ಕೆ ಮರಳಿ ಆಯ್ಕೆ ಮಾಡದಿರುವುದರ ಬಗ್ಗೆ ಮಿಶ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ತಮಗಿಂತ ಗಂಭೀರ ಗಾಯಗಳಿಗೆ ಒಳಗಾದ ಹಾಗೂ ದೀರ್ಘಕಾಲ ತಂಡದಿಂದ ಹೊರಗುಳಿದಿದ್ದ ಇತರ ಆಟಗಾರರು ಫಿಟ್ ಆದ ಕೂಡಲೇ ತಂಡಕ್ಕೆ ಮರಳಿದ್ದರು.
ಯಾರಿಗಾದರೂ ನಿಮ್ಮನ್ನು ತಂಡದಲ್ಲಿ ಸೇರಿಸಿಕೊಳ್ಳುವ ಆಸಕ್ತಿ ಇಲ್ಲದಿದ್ದರೆ ನೀವೇನು ಮಾಡಲು ಸಾಧ್ಯ? ನನಗಿಂತ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದ ಆಟಗಾರರು, ನನ್ನಿಂದ ಹೆಚ್ಚು ಕಾಲ ತಂಡದಿಂದ ಹೊರಗಿದ್ದವರು ಕೂಡ ಚೇತರಿಸಿಕೊಂಡ ಬಳಿಕ ಮರಳಿದರು. ಆದರೆ, ನನಗೆ ಮಾತ್ರ ಇಂದಿನವರೆಗೂ ಯಾವುದೇ ಉತ್ತರ ಸಿಕ್ಕಿಲ್ಲ” ಎಂದು ಅಮಿತ್ ಮಿಶ್ರಾ ಅಸಮಾಧಾನ ಹೊರಹಾಕಿದ್ದಾರೆ.
ಭಾರತದ ಪರ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಆಡಿದ್ದ ಅನುಭವಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ಈ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.