

ಮುಂಬೈ: ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಕುರಿತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಮಾರ್ಮಿಕ ಉತ್ತರ ನೀಡಿದ್ದಾರೆ.
2027ರ ಅಕ್ಟೋಬರ್ ಇನ್ನೂ ಬಹಳ ದೂರವಿದೆ. ಆ ವೇಳೆಗೆ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ತಾವು ಆಡುತ್ತಾರೆಯೇ ಎಂಬ ಪ್ರಶ್ನೆಗೆ ಭಾರತ ತಂಡದ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಮುಂಬೈನಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರ ವೇಳೆ ಪ್ರೇಕ್ಷಕರೊಬ್ಬರು ರೋಹಿತ್ ಅವರ 2027ರ ಏಕದಿನ ವಿಶ್ವಕಪ್ ಭಾಗವಹಿಸುವಿಕೆ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಅವರು ಒಂದೇ ಸಾಲಿನಲ್ಲಿ ಉತ್ತರಿಸಿದರು.
ರೋಹಿತ್ ಹೇಳಿದ್ದೇನು?
2027ರ ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯ ವಹಿಸಲಿವೆ. ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ನಿಂದ ಈಗಾಗಲೇ ದೂರ ಉಳಿದಿರುವ ರೋಹಿತ್ ಅವರ ಮುಂದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಈ ಹೇಳಿಕೆ ಬಂದಿದೆ.
ಹೀಗಾಗಿ 2027ರ ವಿಶ್ವಕಪ್‌ನಲ್ಲಿ ಅವರು ಆಡುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮುಂದುವರಿದಿದೆ.
ಈ ನಡುವೆ ರೋಹಿತ್ ಶರ್ಮಾ, ‘2027ರ ಅಕ್ಟೋಬರ್ ಇನ್ನೂ ಬಹಳ ದೂರವಿದೆ. ಆಗ ಅದರ ಬಗ್ಗೆ ನೋಡೋಣ’ ಎಂದು ಹೇಳಿದ್ದಾರೆ.
‘ಬಸ್ ಪರೇಡ್ ಸಾಧ್ಯವಿಲ್ಲ’
ಒಂದು ವೇಳೆ ಭಾರತ 2027ರ ವಿಶ್ವಕಪ್ ಗೆದ್ದರೆ, 2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ಮುಂಬೈನಲ್ಲಿ ನಡೆದಿದ್ದಂತೆ ಅಭಿಮಾನಿಗಳೊಂದಿಗೆ ಸಂಭ್ರಮಿಸಲು ಓಪನ್ ಬಸ್ ವಿಜಯೋತ್ಸವ ನಡೆಸಲಾಗುತ್ತದೆಯೇ ಎಂದು ರೋಹಿತ್ ಅವರಿಗೆ ಮತ್ತೊಂದು ಪ್ರಶ್ನೆ ಕೇಳಲಾಯಿತು.
ಇದಕ್ಕೆ ರೋಹಿತ್, ‘ಈಗ ಬಸ್ ಪರೇಡ್ ಸಾಧ್ಯವಾಗುತ್ತದೆ ಎಂದು ನನಗೆ ಅನಿಸುವುದಿಲ್ಲ’ ಎಂದು ಉತ್ತರಿಸಿದರು. 2024ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದ ಬಳಿಕ ಮುಂಬೈನಲ್ಲಿ ಭರ್ಜರಿ ಓಪನ್ ಬಸ್ ವಿಜಯೋತ್ಸವ ನಡೆಸಲಾಗಿತ್ತು.
‘ರೋಹಿತ್ ಬಗ್ಗೆ ಊಹಾಪೋಹ ಬೇಡ’
ಇದೇ ವೇಳೆ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ನಡೆಯುತ್ತಿರುವ ಊಹಾಪೋಹಗಳಿಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇತ್ತೀಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.
ರೋಹಿತ್ ಉತ್ತಮ ಫಾರ್ಮ್‌ನಲ್ಲಿರುವಾಗ ಅವರ ಬಗ್ಗೆ ಏಕೆ ಇಂತಹ ಚರ್ಚೆಗಳು ನಡೆಯುತ್ತಿವೆ ಎಂದು ಅವರು ಪ್ರಶ್ನಿಸಿದ್ದರು. ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ 138 ರನ್‌ಗಳ ಭರ್ಜರಿ ಶತಕ ಸಿಡಿಸಿದ್ದರು.
‘ಅವರು ಎಲ್ಲಾ ಪಂದ್ಯಗಳಲ್ಲೂ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಹಾಗಿರುವಾಗ ಇನ್ನೇನು ಬೇಕು? ಕೊನೆಯ ಪಂದ್ಯದಲ್ಲಿ (ಇಂಗ್ಲೆಂಡ್ ವಿರುದ್ಧ) ಅವರು 138 ರನ್ ಗಳಿಸಿದ್ದಾರೆ. ಹೀಗಿರುವಾಗ ಅವರ ಬಗ್ಗೆ ಏಕೆ ಊಹಾಪೋಹಗಳು ನಡೆಯುತ್ತಿವೆ?’ ಎಂದು ಸೈಕಿಯಾ ಪ್ರಶ್ನಿಸಿದ್ದರು.
‘ಊಹಾಪೋಹ ಮಾಡುವವರಿಗೆ ಮತ್ತಷ್ಟು ವಿಷಯ ನೀಡಲು ನಾನು ಬಯಸುವುದಿಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದ್ದರು.