ಫ್ಲೆಕ್ಸ್ ನಿಷೇಧಿಸುವ ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧ

ಫ್ಲೆಕ್ಸ್ ನಿಷೇಧಿಸುವ ರಾಜ್ಯ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದಿಢೀರನೆ ಫ್ಲೆಕ್ಸ್ ಉದ್ಯಮಗಳಿಗೆ ಬೀಗ ಹಾಕುತ್ತಿದ್ದು...
ಫ್ಲೆಕ್ಸ್ ನಿಷೇಧಕ್ಕೆ ಭಾರಿ ವಿರೋಧ (ಸಂಗ್ರಹ ಚಿತ್ರ)
ಫ್ಲೆಕ್ಸ್ ನಿಷೇಧಕ್ಕೆ ಭಾರಿ ವಿರೋಧ (ಸಂಗ್ರಹ ಚಿತ್ರ)

ಬೆಂಗಳೂರು: ಫ್ಲೆಕ್ಸ್ ನಿಷೇಧಿಸುವ ರಾಜ್ಯ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದಿಢೀರನೆ ಫ್ಲೆಕ್ಸ್ ಉದ್ಯಮಗಳಿಗೆ ಬೀಗ ಹಾಕುತ್ತಿದ್ದು ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

ಇದೊಂದು ಸಣ್ಣ ಕೈಗಾರಿಕೆಯಾಗಿದ್ದು, ಲಕ್ಷಾಂತರ ಜನರು ಇದರಿಂದ ಉದ್ಯೋಗ ಪಡೆದು ಜೀವನ ನಡೆಸುತ್ತಿದ್ದಾರೆ. ಇವರನ್ನು ಬೀದಿಪಾಲು ಮಾಡಬಾರದು ಎಂದು ರಾಜ್ಯ ಡಿಜಿಟಲ್ ಮತ್ತು ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಕಾನೂನು ಪ್ರಕಾರವೇ ಬೆಂಗಳೂರಲ್ಲಿ 550 ಫ್ಲೆಕ್ಸ್ ಉದ್ಯಮಗಳನ್ನು ನಡೆಸಲಾಗುತ್ತಿದೆ. ಇದುವರೆಗೂ ನಿಷೇಧದ ಬಗ್ಗೆ ನಮಗೆ ಅಧಿಕೃತ ನೋಟಿಸ್ ಬಂದಿಲ್ಲ. ಆದರೂ ಜಾಲಹಳ್ಳಿಯ 5 ಫ್ಲೆಕ್ಸ್ ಉದ್ಯಮಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ ಎಂದು ಹೇಳಿದರು.

ಫ್ಲೆಕ್ಸ್ ನಿಂದ ರಾಜಧಾನಿಯ ಸೌಂದರ್ಯವನ್ನೇನೂ ನಾವು ಕೆಡಿಸುತ್ತಿಲ್ಲ. ಬೆಂಗಳೂರಿನ ಸೌಂದರ್ಯ ಹೆಚ್ಚಳಕ್ಕೆ ನಾವೂ ಸರ್ಕಾರದ ಜೊತೆ ಕೈಜೋಡಿಸುತ್ತೇವೆ. ನಿಜವಾಗಿಯೂ ನಗರದ ಅಂದ ಕೆಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಅವರು ಹೇಳಿದರು. ರಾಜಧಾನಿಯಲ್ಲಿ ಆದ ಗತಿಯೇ ನಾಳೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಆಗುವುದಿಲ್ಲ  ಎಂಬುದಕ್ಕೆ ಏನು ಖಾತ್ರಿಯಿದೆ? ಅಲ್ಲಿನ ಫ್ಲೆಕ್ಸ್ ಮಾಲೀಕರು, ನೌಕರರು ಬೀದಿಪಾಲು ಆಗಬೇಕೆ ಎಂದು ಪ್ರಶ್ನಿಸಿದ ಅವರು, ಸರ್ಕಾರ ತಕ್ಷಣವೇ ತನ್ನ ನಿರ್ಧಾರ ವಾಪಸ್ ಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com