ಕಲಾಸಿಪಾಳ್ಯ ಫೈರಿಂಗ್: ದರೋಡೆಕೋರನ ಮೇಲೆ ಪೊಲೀಸರ ಗುಂಡೇಟು

ಕೊಲೆ, ಸುಲಿಗೆ, ದರೋಡೆ ಸೇರಿದಂತೆ 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯೊಬ್ಬನನ್ನು ಬಂಧಿಸಲು ಹೋದಾಗ, ಆತ ಪೊಲೀಸರ ಮೇಲೆಯೇ ಪ್ರತಿದಾಳಿ ನಡೆಸಿದ್ದು, ಆತನನ್ನು ಬಂಧಿಸುವಲ್ಲಿ ಕಲಾಸಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ...
ಗುಂಡು ಹಾರಿಸಿದ ಸ್ಥಳ ಪರಿಶೀಲನೆ ಮಾಡುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳು
ಗುಂಡು ಹಾರಿಸಿದ ಸ್ಥಳ ಪರಿಶೀಲನೆ ಮಾಡುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳು

ಬೆಂಗಳೂರು: ಕೊಲೆ, ಸುಲಿಗೆ, ದರೋಡೆ ಸೇರಿದಂತೆ 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯೊಬ್ಬನನ್ನು ಬಂಧಿಸಲು ಹೋದಾಗ, ಆತ ಪೊಲೀಸರ ಮೇಲೆಯೇ ಪ್ರತಿದಾಳಿ ನಡೆಸಿದ್ದು, ಆತನನ್ನು ಬಂಧಿಸುವಲ್ಲಿ ಕಲಾಸಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಭಾನುವಾರ ರಾತ್ರಿ 10.15ರ ವೇಳೆಗೆ ಈ ಘಟನೆ ನಡೆದಿದೆ. ಆರೋಪಿ ಸಲೀಂನ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಸದ್ಯ ಆತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಸಲೀಂ ವಿರುದ್ಧ ನ್ಯಾಯಾಲಯವು ಬಂಧನ ವಾರಂಟ್ ಜಾರಿ ಮಾಡಿತ್ತು. ಭಾನುವಾರ ರಾತ್ರಿ ಸಲೀಂ ಕಲಾಸಿಪಾಳ್ಯದ ನ್ಯೂ ಎಕ್ಸ್ ಟೆನ್ಶನ್ ನ 4ನೇ ಕ್ರಾಸ್‍ನಲ್ಲಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಲಾಸಿಪಾಳ್ಯ ಠಾಣೆಯ ಕಾನ್‍ಸ್ಟೇಬಲ್ ರೆಹಮಾನ್ ಹಾಗೂ ಅಪರಾಧ ದಳದ ಇಬ್ಬರು ಪೆÇಲೀಸರು ಅಲ್ಲಿಗೆ ತೆರಳಿದ್ದರು.

ಪೊಲೀಸರು ಆಗಮಿಸಿದ ವಿಚಾರ ಗೊತ್ತಾದೊಡನೆ ಆರೋಪಿ ಸಲೀಂ ಶರಣಾಗಲು ನಿರಾಕರಿಸಿ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ತಕ್ಷಣ ರೆಹಮಾನ್ ಅವರು ಕಲಾಸಿಪಾಳ್ಯ ಠಾಣೆಯ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅನಿಲ್‍ಕುಮಾರ್ ಅವರು ಆರೋಪಿಯನ್ನು ಬಂಧಿಸಲು ಮುಂದಾದಾಗ ಸಲೀಂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಕಾನ್‍ಸ್ಟೇಬಲ್ ರೆಹಮಾನ್ ಗಾಯಗೊಂಡಿದ್ದಾರೆ. ಕೂಡಲೇ ಅನಿಲ್‍ಕುಮಾರ್ ಅವರು ತಮ್ಮ ಸರ್ವೀಸ್ ರಿವಾಲ್ವರ್‍ನಿಂದ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಸಲೀಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com