
ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿ ವಿಭಜನೆಗೆ ಕೈಗೊಂಡ ನಿರ್ಣಯ ಕೌನ್ಸಿಲ್ ಸಭೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತು. ಬಿಬಿಎಂಪಿಯನ್ನು ವಿಭಜಿಸುವ ಸಂಪುಟದ ತೀರ್ಮಾನ ತಿಳಿಯುತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಮೂರು ಬಾರಿ `ಧಿಕ್ಕಾರ' ಎಂದು ಕೂಗುತ್ತಿದ್ದಂತೆ, ವಿರೋಧ ಪಕ್ಷದ ನಾಯಕ ಮಂಜುನಾಥ ರೆಡ್ಡಿ ಸರ್ಕಾರ ಸರಿಯಾದ ತೀರ್ಮಾನ ಕೈಗೊಂಡಿದೆ ಎಂದು ಪ್ರತಿಪಾದಿಸಿದರು. ಇದರಿಂದ ಸಭೆಯಲ್ಲಿ ಪರಸ್ಪರ ವಾಗ್ವಾದ ನಡೆಯಿತು. ಮೊದಲಿಗೆ ಮಾತನಾಡಿದ ಎನ್.ಆರ್. ರಮೇಶ್, ಬಿಬಿಎಂಪಿ ವಿಭಜನೆ ಬಗ್ಗೆ ಪರಿಶೀಲಿಸಲು ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಜೂ.12ಕ್ಕೆ ವರದಿ ನೀಡಲಿದೆ. ಆದರೆ ಇದಕ್ಕೂ ಮುನ್ನವೇ ಸರ್ಕಾರ ವಿಭಜನೆಗೆ ಮುಂದಾಗಿದೆ. ತಜ್ಞರ ಸಮಿತಿಯಲ್ಲಿರುವ ಸಾಮ್ರಾಜ್ಯಶಾಹಿ ಹಾಗೂ ಬಂಡವಾಳಶಾಹಿಗಳ ಪರವಾಗಿ ನಿಂತಿದೆ. ಪಾಲಿಕೆ ವಿಭಜನೆಯಾಗದಂತೆ ಕಳೆದ ಬಾರಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿತ್ತು. ಈಗ ವಿರೋಧ ಪಕ್ಷ ವಿಭಜನೆಗೆ ಬೆಂಬಲ ನೀಡುತ್ತಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಂಜುನಾಥ ರೆಡ್ಡಿ, ಸರ್ಕಾರ ರಚಿಸಿರುವ ಸಮಿತಿ ನಗರದ ಪ್ರಗತಿಯ ಬಗ್ಗೆ ಚಿಂತಿಸಿದ್ದು, ಎಲ್ಲರಿಂದಲೂ ಅಭಿಪ್ರಾಯ ಪಡೆದಿದೆ. ನಗರದ ಬೆಳವಣಿಗೆಯ ಹಿತದೃಷ್ಟಿಯಿಂದಲೇ ಸರ್ಕಾರ ಸೂಕ್ತ ತೀರ್ಮಾನ ಮಾಡಿದೆ ಎಂದರು. ಸದಸ್ಯರು ಪಕ್ಷದ ನಾಯಕರ ಬೆಂಬಲಕ್ಕೆ ನಿಂತು ಪರಸ್ಪರ ದೋಷಾರೋಪಣೆ ಮಾಡಿದರು. ಈ ಚರ್ಚೆ ಇಷ್ಟಕ್ಕೆ ಸಾಕು ಎಂದ ಮೇಯರ್ ಶಾಂತಕುಮಾರಿ ಬೇರೆ ವಿಷಯದ ಬಗ್ಗೆ ಮಾತನಾಡಲು ಸೂಚಿಸಿದರು.
ವಿಸರ್ಜನೆ ನೋಟಿಸ್ ಕಾನೂನಿಗೆ ವಿರುದ್ಧ
ಬಿಬಿಎಂಪಿ ವಿಸರ್ಜನೆ ಕುರಿತು ಸ್ಪಷ್ಟನೆ ನೀಡಲು ಸರ್ಕಾರ ಸದಸ್ಯರಿಗೆ ನೋಟಿಸ್ ಜಾರಿ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮೊದಲಿಗೆ ಮಾತನಾಡಿದ ಸದಸ್ಯ ಪದ್ಮನಾಭರೆಡ್ಡಿ, ಬಿಬಿಎಂಪಿ ವಿಸರ್ಜನೆ ಮಾಡುವುದಿಲ್ಲ ಎಂದು ಸರ್ಕಾರವೇ ಸ್ಪಷ್ಟನೆ ನೀಡಿದೆ. ಆದರೆ ಸ್ಪಷ್ಟನೆ ಕೇಳಿ ಎಲ್ಲ ಸದಸ್ಯರಿಗೆ ನೋಟಿಸ್ ಕಳುಹಿಸಲಾಗಿದೆ. ಕಾನೂನು ಪ್ರಕಾರ ಸರ್ಕಾರ ಆಯುಕ್ತರಿಗೆ ಮಾತ್ರ ನೋಟಿಸ್ ನೀಡಿ ಉತ್ತರ ಕೇಳಬೇಕು. ಹಲವು ವರದಿ ಆಧರಿಸಿ ಈ ನೋಟಿಸ್ ನೀಡಲಾಗಿದೆ. ಈ ವರದಿಗಳಲ್ಲಿ 2008-10ರವರೆಗಿನ ಅಕ್ರಮಗಳೂ ಸೇರಿವೆ. ಆದರೆ ಇಲ್ಲಿನ ಯಾವ ಸದಸ್ಯರೂ ಈ ಅವಧಿಯಲ್ಲಿ ಅಧಿಕಾರದಲ್ಲಿರಲಿಲ್ಲ. ಆಗಿನ ಆಡಳಿತಾಧಿಕಾರಿಗಳು ಮಾಡಿದ ತಪ್ಪಿಗೆ ಸದಸ್ಯರಿಗೆ ನೋಟಿಸ್ ನೀಡಲಾಗಿದೆ ಎಂದರು.
ಕಾಂಗ್ರೆಸ್‍ನ ಮಂಜುನಾಥ ರೆಡ್ಡಿ ಮಾತನಾಡಿ, ಅಕ್ರಮಗಳು ನಡೆದಿವೆಯೇ ಎಂದು ತಿಳಿಯಲು ಸರ್ಕಾರ ನೋಟಿಸ್ ನೀಡಿದೆ. ಚುನಾವಣೆ ಮುಂದೂಡಲು ನೋಟಿಸ್ ನೀಡಿಲ್ಲ. ಎಲ್ಲ ಸದಸ್ಯರಿಗೂ ಈ ನೋಟಿಸ್ ಬಂದಿಲ್ಲ ಎಂದರು. ಕಾಂಗ್ರೆಸ್‍ನ ಗುಣಶೇಖರ್ ಮಾತನಾಡಿ, ಕೆಎಂಸಿ ಕಾಯ್ದೆಯ ಪ್ರಕಾರ ಎಲ್ಲ ಸದಸ್ಯರಿಗೂ ಮಾಹಿತಿ ನೀಡಬೇಕು. ಮಾ.30ರವರೆಗೆ ಉತ್ತರಿಸಲು ಅವಕಾಶವಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದರು. ಕಾನೂನುಬಾಹಿರವಾದ ನೋಟಿಸ್ ಹಿಂಪಡೆಯಬೇಕು ಎಂದು ಪದ್ಮನಾಭ ರೆಡ್ಡಿ ಒತ್ತಾಯಿಸಿದರು. ಇದಕ್ಕೆ ಜೆಡಿಎಸ್‍ನ ಆರ್.ಪ್ರಕಾಶ್ ಹಾಗೂ ಬಿಜೆಪಿಯ ಸಿ.ಕೆ.ರಾಮಮೂರ್ತಿ ದನಿಗೂಡಿಸಿದರು.
ಮಾಹಿತಿಗೆ ಮಾತ್ರ
ಉತ್ತರ ನೀಡಿದ ಆಯುಕ್ತ ಎಂ.ಲಕ್ಷ್ಮೀನಾರಾಯಣ, ವೈಯಕ್ತಿಕ ಹಾಗೂ ಸಾಮೂಹಿಕ ಜವಾಬ್ದಾರಿಯನ್ನಾಧರಿಸಿ ನೋಟಿಸ್ ನೀಡಲಾಗುತ್ತದೆ. ಕೆಎಂಸಿ ಸೆಕ್ಷನ್ 99 ಪ್ರಕಾರ ವಿಸರ್ಜನೆಯಿಂದ ಪರಿಣಾಮಕ್ಕೊಳಗಾಗುವರಿಗೂ ನೋಟಿಸ್ ಕಳುಹಿಸಬೇಕು. ಶಾಸಕರು, ಸಂಸದರು, ಬಿಬಿಎಂಪಿಯ ಪ್ರಾಥಮಿಕ ಜವಾಬ್ದಾರಿ ಹೊಂದಿಲ್ಲ ಹಾಗೂ ವಿಸರ್ಜನೆಯಿಂದ ಯಾವುದೇ ಪರಿಣಾಮವಾಗದಿರುವುದರಿಂದ ನೋಟಿಸ್ ನೀಡಿಲ್ಲ. ಮಾಹಿತಿ ನೀಡುವ ಉದ್ದೇಶದಿಂದ ನೋಟಿಸ್ ನೀಡಲಾಗಿದೆ ಎಂದರು. ಆಯುಕ್ತರ ಉತ್ತರದಿಂದ ಸಮಾಧಾನವಾಗಿಲ್ಲ ಎಂದ ಪದ್ಮನಾಭರೆಡ್ಡಿ ಹಾಗೂ ಸಿ.ಕೆ.ರಾಮಮೂರ್ತಿ ಸಭಾತ್ಯಾಗ ಮಾಡಿದರು.
Advertisement