ಬೆಳೆ ಚೆಲ್ಲಿದಾಗ ಎಲ್ಲಿರುತ್ತೆ ಸರ್ಕಾರ?

ಹೊಲ ಉಳುತ್ತಾನೆ, ಮಳೆ ಬರದೆ ಬೀಜ ಹುಳುಗಳ ಪಾಲಾಗುತ್ತವೆ. ಪೈರು ಬೆಳೆಯುತ್ತದೆ. ಅತಿವೃಷ್ಟಿಯಿಂದ ಬೆಳೆ ಹಾನಿಯಾಗುತ್ತದೆ. ಬೆಳೆ ಬರುತ್ತೆ. ಆದರೆ, ಬೆಲೆ ಸಿಗುವುದಿಲ್ಲ ಇದು ಭಾರತೀಯ ರೈತನ ಸ್ಥಿತಿ ಎಂದು ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ ಕಳವಳ ವ್ಯಕ್ತಪಡಿಸಿದರು...
ಕೃಷಿ ಮೇಳ (ಸಂಗ್ರಹ ಚಿತ್ರ)
ಕೃಷಿ ಮೇಳ (ಸಂಗ್ರಹ ಚಿತ್ರ)

ಬೆಂಗಳೂರು: ಹೊಲ ಉಳುತ್ತಾನೆ, ಮಳೆ ಬರದೆ ಬೀಜ ಹುಳುಗಳ ಪಾಲಾಗುತ್ತವೆ. ಪೈರು ಬೆಳೆಯುತ್ತದೆ. ಅತಿವೃಷ್ಟಿಯಿಂದ ಬೆಳೆ ಹಾನಿಯಾಗುತ್ತದೆ. ಬೆಳೆ ಬರುತ್ತೆ. ಆದರೆ, ಬೆಲೆ ಸಿಗುವುದಿಲ್ಲ ಇದು ಭಾರತೀಯ ರೈತನ ಸ್ಥಿತಿ ಎಂದು ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಕೃಷಿ ಮೇಳದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ಎಂದು ಹೇಳುತ್ತಾರೆ. ಆದರೆ, ದೇಶದ ಜನರಿಗಾಗಿ ಹಗಲಿರುಳು ದುಡಿದು ಆಹಾರ ಒದಗಿಸುವ ರೈತನಿಗೆ ತೊಡಲು ಸರಿಯಾದ ಬಟ್ಟೆಯಿಲ್ಲದ ಪರಿಸ್ಥಿತಿಯಿದೆ ಎಂದು ಹೇಳಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಮಾರುಕಟ್ಟೆಯಲ್ಲಿ ಬೇಳೆ, ಈರುಳ್ಳಿ, ಸಕ್ಕರೆ ಬೆಲೆ ಹೆಚ್ಚಳವಾದಾಗ ಪೇಟೆಯ ಜನರು ಸರ್ಕಾರದ ಮೇಲೆ ಒತ್ತಡ ಹೇರಿ ಆಹಾರ ಪದಾರ್ಥಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವಂತೆ ಮಾಡುತ್ತಾರೆ. ಆದರೆ, ಬೆಲೆ ಕುಸಿತದಿಂದ ರಸ್ತೆಯಲ್ಲಿ ರೈತ ಬೆಳೆ ಚೆಲ್ಲಿದರೆ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ರಾಜಕಾರಣಿಗಳು ರೈತರ ಬಗ್ಗೆ ಬರೀ ಭಾಷಣ ಮಾಡುತ್ತಾರೆ ಹೊರತು ಕೃಷಿಕರ ಒಳಿತಿಗೆ ಚಿಂತನೆ ಮಾಡುವುದಿಲ್ಲ.

ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಎಚ್. ಶಿವಣ್ಣ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಉಪ ಮಹಾನಿರ್ದೇಶಕ ಡಾ. ಜೀತ್ ಸಿಂಗ್ ಸಂಧು, ಬಿಬಿಎಂಪಿ ಸದಸ್ಯೆ ಆರ್. ಪದ್ಮಾವತಿ ಅಮರನಾಥ್, ಧಾರವಾಡ ಕೃಷಿ ವಿವಿ ಕುಲಪತಿ ಡಾ. ಡಿ.ಪಿ. ಬಿರಾದಾರ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಸಿ. ವಾಸುದೇವಪ್ಪ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com