ರಾಜಿನಾಮೆ ಕೊಟ್ಟು ಹೋರಾಟಕ್ಕೆ ಬನ್ನಿ

ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದ ಮೇಲೆ ಅಧಿಕಾರದಲ್ಲಿರೋದ್ಯಾಕೆ? ಜನಪತ್ರಿನಿಧಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೋರಾಟಕ್ಕೆ ಧುಮುಕಬೇಕೆಂದು ನಟ ಶಿವರಾಜ್‍ಕುಮಾರ್ ಆಗ್ರಹಿಸಿದರು...
ನಟ ಶಿವರಾಜ್‍ಕುಮಾರ್ (ಸಂಗ್ರಹ ಚಿತ್ರ)
ನಟ ಶಿವರಾಜ್‍ಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು: ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದ ಮೇಲೆ ಅಧಿಕಾರದಲ್ಲಿರೋದ್ಯಾಕೆ? ಜನಪತ್ರಿನಿಧಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೋರಾಟಕ್ಕೆ ಧುಮುಕಬೇಕೆಂದು ನಟ ಶಿವರಾಜ್‍ಕುಮಾರ್ ಆಗ್ರಹಿಸಿದರು.

ಕಳಸಾ ಬಂಡೂರಿ ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ, ಗೋವಾ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಗೋವಾದಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ
ಚಲನಚಿತ್ರೋತ್ಸವ ಬಹಿಷ್ಕರಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ಹಿರಿಯ-ಕಿರಿಯ ಕಲಾವಿದರು ಶುಕ್ರವಾರ ಪ್ರತಿಭಟನಾ ಧರಣಿ ನಡೆಸಿದ ಸಂದರ್ಭ ಅವರು ಮಾತನಾಡುತ್ತಿದ್ದರು.

ಆವೇಶಭರಿತ ಭಾಷಣ: ಸಮಸ್ಯೆ ಬಗೆಹರಿಸಲು ಉಪಯೋಗಕ್ಕೆ ಬಾರದ ಅಧಿಕಾರವನ್ನು ತೊರೆಯುವುದೇ ಸೂಕ್ತ. ಕಳಸಾ-ಬಂಡೂರಿ ವಿಚಾರದಲ್ಲಿ ರಾಜಕಾರಣಿಗಳು ತಮ್ಮ
ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ. ಇಂಥವರಿಗೆ ಮತ ನೀಡಿ ಗೆಲ್ಲಿಸಿರುವ ಜನ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. ಕುಡಿಯುವ ನೀರಿಗಾಗಿ ರೂಪಿಸಿರುವ ಕಳಸಾ-ಬಂಡೂರಿ ಯೋಜನೆ ಜಾರಿಯಾಗಬೇಕು.

ಅನ್ನ, ನೀರು ಹಂಚಿ ತಿನ್ನದವರು ನನ್ನ ಪ್ರಕಾರ ಮನುಷ್ಯರಲ್ಲ. ಹೀಗಾಗಿ ಯೋಜನೆ ಜಾರಿಯಾಗುವವರೆಗೂ ಹೋರಾಟ ನಿರಂತರ. ಇದರಲ್ಲಿ ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ. ಜನರಿಗಾಗಿಯೇ ಬದುಕಿದ್ದೇವೆ. ಈಗ ಅವರಿಗಾಗಿಯೇ ಸಾಯೋಣ.ಈ ಹೋರಾಟಕ್ಕೆ ಕೇವಲ ಚಿತ್ರರಂಗವಲ್ಲದೇ ಪಕ್ಷಾತೀತವಾಗಿ ರಾಜಕಾರಣಿಗಳೂ ಭಾಗವಹಿಸಬೇಕು. ಎಲ್ಲರೂ ಒಗ್ಗೂಡಿ ಕನ್ನಡಿಗರ ಶಕ್ತಿ ಏನೆಂಬುದನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದರು.

ಈ ವಿಚಾರವಾಗಿ ನಾನೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಹೋರಾಟದಲ್ಲಿ ಭಾಗವಹಿಸಲು ಆಹ್ವಾನ ನೀಡುತ್ತೇನೆ. ಅವರು ಹೋರಾಟಕ್ಕೆ ಕೈಜೋಡಿಸುತ್ತಾರೆ ಎಂಬ ವಿಶ್ವಾಸವಿದೆ. ಮುಂದಿನ ಹೋರಾಟದ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ದಿನಾಂಕ ಗೊತ್ತು ಮಾಡಲಿದ್ದು, ಸಮಸ್ಯೆ ಇರುವ ಜಾಗಕ್ಕೆ ತೆರಳಿ ಪ್ರತಿಭಟನೆ ಮಾಡುತ್ತೇವೆ. ಚಿತ್ರರಂಗದ ಎಲ್ಲಾ ಕಲಾವಿದರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಶಿವರಾಜ್‍ಕುಮಾರ್ ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಕಳಸಾ-ಬಂಡೂರಿ ಯೋಜನೆ ಶೀಘ್ರ ಜಾರಿಯಾಗಬೇಕು. ಈ ವಿಚಾರ ಮೂರು ರಾಜ್ಯಗಳಿಗೆ ಸಂಬಂಧಿಸಿರುವುದರಿಂದ ಪ್ರಧಾನಿ ಮೋದಿ ಅವರು ಮಧ್ಯ ಪ್ರವೇಶಿಸಿ, ಸಮಸ್ಯೆ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದ ಸಂಸದರು ಪಕ್ಷಾತೀತವಾಗಿ ಪ್ರಧಾನಿ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು. ನಂತರ ಸಾ.ರಾ. ಗೋವಿಂದು ನೇತೃತ್ವದಲ್ಲಿ ಕಲಾವಿದರೆಲ್ಲ ಗೃಹಸಚಿವ ಡಾ. ಜಿ.ಪರಮೇಶ್ವರ್ ಗೆ ಮನವಿ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com