ಅಮಾಯಕನ ಬಂಧಿಸಿದ್ದಕ್ಕೆ ಖಾಕಿಗೆ ರು. 25 ಸಾವಿರ ದಂಡ

ವಂಚನೆ, ದರೋಡೆಯಂಥ ಆರೋಪಗಳಲ್ಲಿ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು ಕೆಲ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚದೆ ಪ್ರಕರಣಕ್ಕೆ ಸಂಬಂಧವಿಲ್ಲದ ಅಮಾಯಕರನ್ನು ಬಂಧಿಸಿ ವಿನಾಕಾರಣ ಹಿಂಸೆ ನೀಡುತ್ತಿರುತ್ತಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ವಂಚನೆ, ದರೋಡೆಯಂಥ ಆರೋಪಗಳಲ್ಲಿ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು ಕೆಲ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚದೆ ಪ್ರಕರಣಕ್ಕೆ ಸಂಬಂಧವಿಲ್ಲದ ಅಮಾಯಕರನ್ನು ಬಂಧಿಸಿ ವಿನಾಕಾರಣ ಹಿಂಸೆ ನೀಡುತ್ತಿರುತ್ತಾರೆ.

ಅದೇ ರೀತಿ, ಮನೆಯಲ್ಲಿ ಕೆಲಸ ಮಾಡುವ ಮನೆಕೆಲಸದಾಕೆ ಕಳ್ಳತನ ಮಾಡಿರುವ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಕೈಗೆ ಸಿಕ್ಕ ಅಮಾಯಕನೊಬ್ಬನನ್ನು ಬಂಧಿಸಿ, ಚಿತ್ರಹಿಂಸೆ ನೀಡಿದ ಪೊಲೀಸರಿಗೆ ರು.25 ಸಾವಿರ ದಂಡ ವಿಧಿಸಿರುವ ರಾಜ್ಯ ಮಾನವ ಹಕ್ಕುಗಳ ಆಯೋಗ, ಮುಂದಿನ ನಾಲ್ಕು ತಿಂಗಳಲ್ಲಿ ಈ ಕೃತ್ಯಕ್ಕೆ ಕಾರಣವಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ದಂಡದ ಮೊತ್ತವನ್ನು ತಕ್ಷಣ ಪೊಲೀಸ್ ಆಯುಕ್ತರು ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಪಾವತಿಸಬೇಕು. ಬಳಿಕ ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡುವಂತೆ ಸೂಚಿಸಿದೆ. ಅಲ್ಲದೆ, ಒಬ್ಬ ವ್ಯಕ್ತಿಯನ್ನು ಅಧಿಕಾರಿಗಳ ವೈಯಕ್ತಿಕ ಉದ್ದೇಶದಿಂದ ಬಳಸಿಕೊಳ್ಳುವುದು ಕೆಟ್ಟ ಸಂಪ್ರದಾಯ, ಪೊಲೀಸರೆಂದರೆ ಸಮಾಜದಲ್ಲಿ ಭಯ ಹುಟ್ಟಿಸುವುದಕ್ಕಾಗಿ ಅಮಾಕರಿಗೆ ವಿನಾಕಾರಣ ಹಿಂಸೆ ನೀಡುವುದು ವ್ಯಕ್ತಿಯ ಹಕ್ಕನ್ನು ಕಸಿದುಕೊಂಡಂತೆ. ಕಾನೂನು ಕಾಪಾಡುವವರು ಈ ರೀತಿ ವರ್ತಿಸುವುದು ಅಪಾಯಕಾರಿಯಾಗಿದೆ ಎಂದು ಮಾನವ ಹಕ್ಕು ಆಯೋಗದ ಹಂಗಾಮಿ ಅಧ್ಯಕ್ಷೆಯಾಗಿರುವ ಮೀರಾ ಸಕ್ಸೇನಾ ತಮ್ಮ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.


ಪ್ರಕರಣದ ಹಿನ್ನೆಲೆ: ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಿಲಿಟರಿ ಸೇನಾಧಿಕಾರಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕಳವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಆದರೆ, ದೂರಿಗೂ ಪ್ರಕರಣಕ್ಕೂ ಸಂಬಂಧವಿಲ್ಲದ ವ್ಯಕ್ತಿಯಾದ ವಿದ್ಯಾರಣ್ಯಪುರ ನಿವಾಸಿ ಓವೈಸಿ ಸಬೀರ್ ಹುಸೈನ್ ಎಂಬುವರನ್ನು ಕಾರಣ ನೀಡದೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧನದ ಬಗ್ಗೆ ಮಾಹಿತಿಯಿಲ್ಲದ ಸಬೀರ್ ಕುಟುಂಬದವರು ಹೈ ಕೋರ್ಟ್ ಮೆಟ್ಟಿಲೇರಿ ಹೇಬಿಯಸ್ ಕಾರ್ಪ್ ಸ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಸಬೀರ್ ನನ್ನು ಕಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ಕಳ್ಳತನದ ಆರೋಪದಲ್ಲಿ ದಾಖಲಾಗಿದ್ದ ದೂರಿನ ಸಂಬಂಧ ಆರೋಪಿಯು ಇಲ್ಲಿಯವರೆಗೂ ಪತ್ತೆಯಾಗಿಲ್ಲ ಎಂದು ನಗರದ ಒಂದನೆ ಎಸಿಎಂಎಂ ನ್ಯಾಯಾಲಯಕ್ಕೆ ಸಿ-ವರದಿ ಸಲ್ಲಿಸಿದ್ದಾರೆ.

ಈ ಅಂಶವನ್ನು ಪತ್ತೆಹಚ್ಚಿದ ಹುಸೈನ್ ಪರ ವಕೀಲ ಎಂ.ಆರ್.ಬಾಲಕೃಷ್ಣ ಸುಳ್ಳು ಆರೋಪ ಹೊರಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದ ಪೊಲೀಸ್ ಅಧಿಕಾರಿಗಳ ಈ ವರ್ತನೆ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ನಂತರ ದೂರನ್ನು ಪರಿಶೀಲಿಸಿದ ಆಯೋಗ, ಪ್ರಕರಣಕ್ಕೆ ಸಂಬಂಧ ಎಲ್ಲ ದಾಖಲೆಗಳನ್ನು ಪಡೆದು, ಉದ್ದೇಶ ಪೂರ್ವಕವಾಗಿ ಪೊಲೀಸರು ಈ ಕೃತ್ಯವೆಸಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com