
ಬೆಂಗಳೂರು: ಕುಷ್ಠರೋಗದಿಂದ ವಿಮುಕ್ತವಾದ ವ್ಯಕ್ತಿಯ ಬಾಳಲ್ಲಿ ಬೆಳಕು ಮೂಡಿದ್ದು, ಆತನನ್ನು ಬೆಂಗಳೂರಿನ ಚಿಕ್ಕನಾಯ ಕನಹಳ್ಳಿಯ ಯುವತಿ ಲಕ್ಷ್ಮೀ ಕೈ ಹಿಡಿಯುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.
ಬೆಂಗಳೂರಿನ ಜೈನ್ ಅಸೋಸಿಯೇಷನ್‍ನಲ್ಲಿ ಶನಿವಾರ ನಡೆದ ವಿವಾಹಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಿ ಹಾರೈಸಿದರು. ಹಲವು ವರ್ಷಗಳಿಂದ ಕುಷ್ಠರೋಗದಿಂದ ಬಳಲುತ್ತಿದ್ದ ಕನಕಪುರದ ಗುಂಡಪ್ಪ ಈಗ ಕುಷ್ಠರೋಗ ದಿಂದ ಮುಕ್ತವಾಗಿದ್ದು ಆತನಿಗೆ ಸಂಸಾರದ ಹೊಣೆ ಕಟ್ಟಿಕೊಟ್ಟದ್ದು ಚಾರುಕೀರ್ತಿ ಭಟ್ಟಾರಕರ ವೇದಿಕೆ. ಗುಂಡಪ್ಪ ಸುಮನಹಳ್ಳಿ ಕುಷ್ಠರೋಗಿಗಳ ಪುನರ್ ವಸತಿ ಕೇಂದ್ರ ದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಜಯನಗರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕುಷ್ಠ ರೋಗ ಅಂಟು ಕಾಯಿಲೆಯಲ್ಲ ಎಂಬುದನ್ನು ಈತ ನಿರೂಪಿಸಿದ್ದಾನೆ, ಜತೆಗೆ ಇಂಥದೇ ಸಮಸ್ಯೆ ಎದುರಿಸುತ್ತಿರುವ ನೂರಾರು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಚಾರುಕೀರ್ತಿ ಭಟ್ಟಾರಕರ ವೇದಿಕೆ ಹಲವು ದಶಕಗಳಿಂದ ವಿಕಲಚೇತನರು, ಕುಷ್ಠರೋಗಿಗಳಿಗೆ ಮದುವೆ ಯನ್ನು ಮಾಡಿಸಿಕೊಂಡು ಬಂದಿದ್ದು, ಇದು 26ನೇ ಮದುವೆಯಾಗಿದೆ. ಗುಂಡಪ್ಪನ ಮದುವೆ ಸಾಮಾನ್ಯರ ಮದುವೆಯಂತೆಯೇ ಅದ್ಧೂರಿಯಾಗಿ ನಡೆಯಿತು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಶಾಸಕ ರವಿಸುಬ್ರಹ್ಮಣ್ಯ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಗಾಯಕ ಶಿವಮೊಗ್ಗ ಸುಬ್ಬಣ್ಣ, ವೇದಿಕೆಯ ಅಧ್ಯಕ್ಷ ಡಾ.ನಾಗೇಂದ್ರ ಪ್ರಸಾದ್ ಸೇರಿದಂತೆ 350ಕ್ಕೂ ಜನರು ಈ ಅಪರೂಪದ ಮದುವೆಯನ್ನು ಕಣ್ತುಂಬಿಕೊಂಡರು.
Advertisement