ಬೆಂಗಳೂರು ಗ್ರಾಮಾಂತರ

ಧರ್ಮ, ಸಂಸ್ಕೃತಿಯಲ್ಲಿ ಆಡಂಬರ ಅಪಾಯಕಾರಿ

Published On :


ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಧರ್ಮ ಮತ್ತು ಸಂಸ್ಕೃತಿಯಲ್ಲಿ ಆಡಂಬರ ಮೇಳೈಸುತ್ತಿದ್ದು ಇದು ಅಪಾಯಕಾರಿ ಬೆಳವಣಿಗೆ ಎಂದು ಆದಿ ಚುಂಚನಗಿರಿ ಅಂಧರ ಶಾಲೆಯ ಅನ್ನದಾನೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಚನ್ನಮ್ಮ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ನೂತನ ಗಣಪತಿ ದೇವಾಲಯದ ಉದ್ಘಾಟನೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಎಲ್ಲರೂ ಮುಕ್ತವಾಗಿ ದೇವರು ಮತ್ತು ಧರ್ಮದಲ್ಲಿ ಪಾಲ್ಗೊಳ್ಳುವಂತಹ ವಾತಾವರಣ ನಿರ್ಮಾಣಗೊಳ್ಳಬೇಕೆಂದು ತಿಳಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡಕುಟುಂಬಗಳು ಜೀವನಸಾಗಿಸುವುದೇ ದುಸ್ಥರ ಎನಿಸಿದ್ದು, ಇಂತಹ ದಿನಗಳಲ್ಲಿ ಮದುವೆ ಮಾಡುವುದು ನಿಜಕ್ಕೂ ಅಸಾಧ್ಯವೆನಿಸಿದ್ದು ಉಳ್ಳವರು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಬಡ ಜನತೆಗೆ ನೆರವಾಗಬೇಕೆಂದು ಕರೆ ನೀಡಿದರು.ಸಾಮೂಹಿಕ ವಿವಾಹಗಳಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಬೀಳಲಿದ್ದು, ಮದುವೆಯಂತಹ ಪವಿತ್ರ ಬಂಧನದ ದುಬಾರಿ ಎನಿಸಿ ಜೀವನ ಪರ್ಯಂತ ಮದುವೆಗೆ ಮಾಡಿದ ಸಾಲ ತೀರಿಸುವ ಸಂದಿಗ್ಧ ಪರಿಸ್ಥಿತಿ ತಪ್ಪುತ್ತದೆ ಎಂದರು.
ಪವಿತ್ರ ಬಂಧನ: ಹುಟ್ಟು ಸಾವಿನ ನಡುವೆ ಎದುರಾಗುವ ಬದುಕನ್ನು ಸಮರ್ಥವಾಗಿ ರೂಪಿಸಿಕೊಳ್ಳುವ ಬದುಕಿನ ಉನ್ನತ ಗುರಿಯನ್ನು ತಲುಪಬೇಕೆಂದು ಕರೆ ನೀಡಿದ ಅವರು ಮದುವೆ ಇಂತಹ ಸಾಧನೆಗೈಯುವ ವ್ಯಕ್ತಿಗಳಿಗೆ ಸಾಂಗತ್ಯವನ್ನು ದೊರಕಿಸಿ ಕೊಡುವ ಪವಿತ್ರ ಬಂಧನ ಎಂದು ತಿಳಿಸಿದರು.ಮದುವೆ ಎಂಬುದು ಕೇವಲ ದೈಹಿಕ ಸಂಬಂಧವಲ್ಲ, ಅದು ಎರಡು ಆತ್ಮಗಳ ಅನುಸಂದಾನ ಎಂಬುದನ್ನು ಅರಿತು ನೂತನ ದಂಪತಿಗಳು ಜೀವನ ನಡೆಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹಿತವಚನಗಳನ್ನೇಳಿದರು.ಶ್ರದ್ಧೆ, ಭಕ್ತಿ ಅತ್ಯಗತ್ಯ: ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗ ಸಂಸ್ಥಾನದ ಪೀಠಾಧ್ಯಕ್ಷ ಕುಮಾರಚಂದ್ರಶೇಖರ್ ಸ್ವಾಮಿ, ಸಂಸ್ಕಾರವಂತನಾಗಿ ಬದುಕಿದಾಗ ಮಾತ್ರ ಮಾನವ ಜೀವನದಲ್ಲಿ ಏಳಿಗೆ ಕಾಣಬಹುದಾಗಿದ್ದು, ನಮ್ಮ ವೇದ ಉಪನಿಷತ್ತುಗಳು ಸಾರಿರುವ ಸಂಸ್ಕಾರಗಳಲ್ಲಿ ಮದುವೆಗೆ ತನ್ನದೇ ಆದ ಪ್ರಾಧಾನ್ಯತೆ ಇದೆ ಎಂದು ತಿಳಿಸಿದರು. ಜೀವನದಲ್ಲಿ ಮುಂದುವರೆಯಲು ದೇವರಲ್ಲಿ ಶ್ರದ್ಧೆ ಮತ್ತು ಭಕ್ತಿ ಅತ್ಯಗತ್ಯವೆನಿಸಿದ್ದು ಜಾತಿ ಮತಗಳ ಬೇಧವಿಲ್ಲದೆ ಎಲ್ಲರೂ ಭಗವಂತನ ಸಾಕ್ಷಾತ್ಕಾರಕ್ಕೆ ಶ್ರಮಿಸ ಪ್ರಾರ್ಥನೆ ಸಲ್ಲಿಸ ಬೇಕೆಂದು ಅವರು ತಿಳಿಸಿದರು.ಸಾರ್ವಜನಿಕ ಕಾರ್ಯಗಳಿಗೆ ವಿನಯೋಗಿಸಿ: ದುಶ್ಚಟಗಳಿಂದ ದೂರವಿದ್ದು ಜಿವನವನ್ನು ಸುಂದರವಾಗಿರಿಸಿ ಕೊಳ್ಳ ಬೇಕೆಂದು ತಿಳಿಸಿದ ಶ್ರೀಗಳು ಪ್ರತಿಯೊಬ್ಬರು ಗಳಿಸಿದ ಹಣವನ್ನು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿನಿಯೋಗಿಸಬೇಕೆಂದು ಕರೆ ನೀಡಿದರು.
ಯಾರೂ ಮೇಲಲ್ಲ, ಕೀಳಲ್ಲ: ನಾಡೋಜ ದೇ.ಜವರೇಗೌಡ ಮಾತನಾಡಿ ಕಷ್ಟಸುಖ ಎರಡನ್ನೂ ಸಮಾನವಾಗಿ ಸ್ವೀಕರಿಸಿದಾಗ ದಾಂಪತ್ಯ ಹಸನಾಗುತ್ತದೆ, ಗಂಡ ಹೆಂಡತಿಯರ ನಡುವೆ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂದರು.ಇತ್ತೀಚಿನ ದಿನಗಳಲ್ಲಿ ಮದುವೆ  ದುಬಾರಿಯ ಆಚರಣೆಯಾಗುತ್ತಿದ್ದು ಎಲ್ಲರೂ ಸಾಮೂಹಿಕ ವಿವಾಹ, ಕುವೆಂಪು ಅವರ ಮಂತ್ರಮಾಂಗಲ್ಯ ಪದ್ಧತಿಯಲ್ಲಿ ವಿವಾಹವಾಗುವ ಮೂಲಕ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕ ಬೇಕೆಂದು ಅವರು ತಿಳಿಸಿದರು.
ರೈತರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದು ರೈತಪರ ಕಾಳಜಿ ಎಲ್ಲರಲ್ಲಿ ಮೂಡಬೇಕಿದೆ ಎಂದು ತಿಳಿಸಿದ ಅವರು ಸರ್ಕಾರಗಳು ರೈತಪರ ನೀತಿಯನ್ನು ಅಳವಡಿಸಿಕೊಳ್ಳಬೇಕು, ರೈತರ ಸಮಸ್ಯೆಗಳಿಗೆ ನೆರವಾಗ ಬೇಕೆಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಜಯಮುತ್ತು, ಈ ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ನಾನು ಸಾಕಷ್ಟು ಸವಾಲುಗಳನ್ನು ಎದುರಿಸಿ ಸ್ವಂತದ್ದೊಂದು ಉದ್ಯಮ ಮಾಡಿಕೊಂಡು ಜೀವನದಲ್ಲಿ ನೆಲೆ ಕಂಡಿದ್ದೇನೆ. ನಾನು ದುಡಿದ ಹಣದಲ್ಲಿ ಒಂದು ಪಾಲನ್ನು ಸಮಾಜಕ್ಕೆ ನೆರವು ನೀಡಬೇಕೆಂಬ ಉದ್ದೇಶದಿಂದ ನನ್ನ ತಾಯಿ ಚನ್ನಮ್ಮ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಇಂತಹ ಕಾರ್ಯಕ್ರಮಗಳನ್ನು ನಡೆಸುವುದಾಗಿ ತಿಳಿಸಿದರು.ಟ್ರಸ್ಟ್‌ನಿಂದ ಸಾಮಾಜಿಕ ಸೇವೆ: ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದದರು.
್ಲ 41ಜೋಡಿಗಳು ಹೊಸಬಾಳಿಗೆ ಕಾಲಿರಿಸಿದವು. ನೂತನ ವಧುವರರಿಗೆ ವಿವಿಧ ಮಠಾಧೀಶರು, ಗಣ್ಯರು ಆಶೀರ್ವದಿಸಿದರು.   ಸ್ಪಟಿಕ ಪುರಿ ಮಠದ ನಂಜಾವಧೂತ ಶ್ರೀಗಳು,  ಶಾಸಕಿ ಅನಿತಾ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಲಿಂಗೇಶ್‌ಕುಮಾರ್, ಜಿಪಂ ಸದಸ್ಯೆ ನಾಗೇಶ್ವರಿ, ಸು.ತ.ರಾಮೇಗೌಡ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.