ಬೆಂಗಳೂರು ಗ್ರಾಮಾಂತರ

ಸುಶಿಕ್ಷಿತ ಮತದಾರರಲ್ಲೇ ಮತದಾನದ ಬಗ್ಗೆ ನಿರುತ್ಸಾಹ

Published On :

ಕ.ಪ್ರ. ವಾರ್ತೆ   ರಾಮನಗರ   ಏ.4
ಸುಶಿಕ್ಷಿತ ಮತದಾರರಲ್ಲೇ ಮತದಾನದ ಬಗ್ಗೆ ನಿರುತ್ಸಾಹ ಹೆಚ್ಚಾಗಿ ಕಂಡು ಬಂದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಧಾನಗತಿಯಲ್ಲಿ ಮಾಡುವ ವಿಷಪ್ರಾಸನವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ವಿಷಾದಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ. ಮತ್ತು ವಿವಿಧ ಇಲಾಖೆಗಳಿಂದ ಆಯೋಜಿಸಿದ್ದ ಮತದಾರರ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವು ನಮಗೆ ನೀಡಿರುವ ಹಕ್ಕು. ಇದನ್ನು ಚಲಾಯಿಸುವಲ್ಲಿ ಸುಶಿಕ್ಷಿತರು, ಮಹಿಳೆಯರ ನಿರುತ್ಸಾಹದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. 
ಅನಕ್ಷರಸ್ಥರು ಹೆಚ್ಚಿರುವ ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ 70ಕ್ಕೂ ಹೆಚ್ಚು ಮತದಾನ ಆಗುತ್ತಿದೆ. ಆದರೆ, ಸುಶಿಕ್ಷಿತರು ಹೆಚ್ಚಿರುವ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಶೇಕಡ 40-50 ರಷ್ಟು ಮಾತ್ರ. ಮತದಾನದಿಂದ ದೂರ ಉಳಿಯುವ ಮಂದಿಯು ಅಭಿವೃದ್ಧಿ ವಿಷಯದಲ್ಲಿ ಪ್ರಶ್ನಿಸುವುದು ಅರ್ಥಹೀನ ಎಂದರು. 
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಜನಸಂಖ್ಯೆಯಲ್ಲಿ 2ನೇ ಸ್ಥಾನ ಪಡೆದಿದೆ. ಆದರೆ, ಅಭಿವೃದ್ಧಿ ಸೂಚ್ಯಂಕದಲ್ಲಿ ವಿಶ್ವದಲ್ಲಿ 135 ಸ್ಥಾನ ಪಡೆದಿದೆ. ಇರುವ ಜನ ಸಂಖ್ಯೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವ ಸಂಖ್ಯೆ ನಮ್ಮ ದೇಶದಲ್ಲೇ ಅಧಿಕವಾಗಿದೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕಿದೆ ಎಂದು ತಿಳಿಸಿದರು. 
ವೈಫಲ್ಯಕ್ಕೆ ಕಾರಣ: ಭಾರತದೊಂದಿಗೆ ಸ್ವಾತಂತ್ರ್ಯ ಪಡೆದ ಮಲೇಶಿಯಾ, ಸಿಂಗಾಪುರ್, ಮೆಕ್ಸಿಕೋ ದೇಶಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. ಆದರೆ, ನಮ್ಮ ದೇಶವು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿಯೇ ಉಳಿದಿದೆ. ಈ ಹಿನ್ನೆಡೆಗೆ ಕಾರಣವೇನು ಎಂಬುದರ ಸಿಂಹಾವಲೋಕನ ಮಾಡಿಕೊಳ್ಳಬೇಕಿದೆ ಎಂದು ವೆಂಕಟೇಶ್ ಹೇಳಿದರು. 
ವಿಜ್ಞಾನಿಗಳು ಆವಿಷ್ಕಾರದ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಕಾರಾತ್ಮಕವಾಗಿ ಪಾಲ್ಗೊಂಡು ಸುಭದ್ರ ಸರ್ಕಾರದ ರಚನೆಗೆ ಕೈಜೋಡಿಸಬೇಕು. ತನ್ಮೂಲಕ ಅಭಿವೃದ್ಧಿಯ ಹರಿಕಾರರಾಗಬೇಕು ಎಂದು ಅವರು ಕರೆ ನೀಡಿದರು.  
ಮತದಾನ ಮುಖ್ಯ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಸಿದ್ದರಾಜು, ನಮ್ಮ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ವಿಶ್ವದಲ್ಲಿಯೇ ಹೆಸರು ಪಡೆದಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ. ಇಲ್ಲಿನ ಮತದಾರರ ನಿರುತ್ಸಾಹದ ಪರಿಣಾಮ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಹಾದಿ ತಪ್ಪಿದೆ ಎಂದು ತಿಳಿಸಿದರು.   ಮತದಾನದ ವಯೋವುತಿಯನ್ನು 18 ವರ್ಷಕ್ಕೆ ಇಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. 
ಮತದಾನ ಪ್ರಮಾಣ ಹೆಚ್ಚಾಗಿ ಉತ್ತಮ ಸರ್ಕಾರ ರಚನೆ ಎಲ್ಲಿಯವರೆಗೆ ಆಗುವುದಿಲ್ಲವೋ ಅಲ್ಲಿಯವರೆಗೂ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಸಾಧ್ಯವಿಲ್ಲ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ವಿಷನ್ 2020 ರೀತ್ಯಾ ಭಾರತ ಅಭಿವೃದ್ಧಿ ಹೊಂದಲು ಸ್ವಇಚ್ಛೆಯ ಮತದಾನ ಪ್ರಮಾಣ ಪ್ರತಿಶತ ನೂರರಷ್ಟು ಆಗಬೇಕು ಎಂದು ಹೇಳಿದರು. 
ಜಾಗೃತಿ ಕಾರ್ಯಕ್ರಮ: ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ.ಸಿ.ಸಿದ್ದರಾಮಯ್ಯ ಮಾತನಾಡಿ ಶೇಕಡ 100ರಷ್ಟು ಮತದಾನ ಆದಾಗಷ್ಟೇ ಪ್ರಜಾಪ್ರಭುತ್ವದ ಆಶಯ ಈಡೇರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಟಿ.ಎಸ್. ತಿಮ್ಮಪ್ಪ ವಂದಿಸಿದರು.
ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮತದಾನ ಕುರಿತ ಆಶುಭಾಷಣ ಸ್ಪರ್ಧೆ ವಿಜೇತರಿಗೆ ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಬಹುಮಾನ ವಿತರಿಸಿದರು.  ಜಿ.ಪಂ ಮುಖ್ಯ ಯೋಜನಾಧಿಕಾರಿ ಭೀಮಯ್ಯ, ಡಿಡಿಪಿಐ ಪ್ರಹ್ಲಾದಗೌಡ, ನಗರಸಭೆ ಆಯುಕ್ತ ಯಶವಂತ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಯ್ಯ ಭಾಗವಹಿಸಿದ್ದರು. 
ಮೇಣದ ಬತ್ತಿ ಜಾಥಾ: ಕಾರ್ಯಕ್ರಮದ ನಂತರ ಬಿ.ಆರ್. ಅಂಬೇಡ್ಕರ್ ಭವನದಿಂದ ಮತದಾನದ ಅರಿವು ಮೂಡಿಸಲು ಮೇಣದ ಬತ್ತಿ ಜಾಥಾ ನಡೆಯಿತು. ಬಸ್ ನಿಲ್ದಾಣದ ಸಿಗ್ನಲ್ ವೃತ್ತದ ಮೂಲಕ ಜಾಲಮಂಗಲ ರಸ್ತೆಯಲ್ಲಿರುವ ಮಂಜುನಾಥ ಕಲ್ಯಾಣ ಮಂಟಪದವರೆಗೆ ಜಾಥಾ ನಡೆಯಿತು.  ಜಾಥಾದಲ್ಲಿ ಜಿ.ಪಂ. ಸಿಇಒ ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.